Lockdown in Kolar: ಕೋಲಾರದಲ್ಲಿ ಇಂದಿನಿಂದ 3 ದಿನ ಸಂಪೂರ್ಣ ಲಾಕ್‍ಡೌನ್; ಮೆಡಿಕಲ್, ಆಸ್ಪತ್ರೆ ಮಾತ್ರ ಲಭ್ಯ
ಕೋಲಾರ(ಮಾ.21): ಕೋಲಾರ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹತೋಟಿಗೆ ಬಾರದ ಹಿನ್ನಲೆ, ಅನಿವಾರ್ಯವಾಗಿ ಲಾಕ್‍ಡೌನ್ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಸೆಲ್ವಮಣಿ ತಿಳಿಸಿದ್ದಾರೆ. ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಶುಕ್ರವಾರ ಬೆಳಗ್ಗೆ 6 ರಿಂದ 10 ಗಂಟೆವರೆಗೂ ಮಾತ್ರ ದಿನಸಿ ಹಾಗೂ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಶುಕ್ರವಾರ ಸಂಜೆ 6 ಗಂಟೆಯಿಂದ ಮೇ 25 ರ ಮಂಗಳವಾರ ಬೆಳಗ್ಗೆ 6 ಗಂಟೆವರೆಗೂ ಯಾವುದೇ ಅಂಗಡಿ- ಮುಂಗಟ್ಟು, ವ್ಯಾಪಾರ-ವಹಿವಾಟು ಹಾಗೂ ವಾಹನ, ಜನ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಹೇರಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನುಳಿದಂತೆ ಜಿಲ್ಲೆಯಲ್ಲಿ ಮೆಡಿಕಲ್ ಶಾಪ್, ಆಸ್ಪತ್ರೆ ಸೌಲಭ್ಯ ಎಂದಿನಂತೆ ಇರಲಿದ್ದು, ಹಾಲು ಮಾರಾಟ ಮಾಡುವ ನಂದಿನಿ ಮಳಿಗೆಗೆ ಪ್ರತಿದಿನ ಬೆಳಗ್ಗೆ 6 ರಿಂದ 10 ಗಂಟೆವರೆಗೂ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇನ್ನು ಜಿಲ್ಲೆಯಾದ್ಯಂತ ಆರೋಗ್ಯ ಮತ್ತು ಕೃಷಿ ಕೈಗಾರಿಕೆಗಳನ್ನ ಹೊರತುಪಡಿಸಿ, ಉಳಿದೆಲ್ಲಾ ಕೈಗಾರಿಕೆಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಅನಗತ್ಯವಾಗಿ ಓಡಾಡಿದರೆ ವಾಹನ ಸೀಜ್ – ಎಸ್ಪಿ ಕಾರ್ತಿಕ್ ರೆಡ್ಡಿ ಎಚ್ಚರಿಕೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ, ಮುಂದಿನ ಮೂರೂವರೆ ದಿನಗಳ ಕಾಲ ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಡಿದಲ್ಲಿ ಮುಲಾಜಿಲ್ಲದೆ ವಾಹನಗಳನ್ನ ಸೀಜ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ಉಲ್ಲಂಘಿಸಿದವರಿಗೆ 36 ಸಾವಿರ ದಂಡ ವಿಧಿಸಿದ್ದು, 149 ಮಂದಿಯ ವಿರುದ್ದ ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ದೂರು ದಾಖಲು ಮಾಡಲಾಗಿದೆ. 2 ಸಾವಿರಕ್ಕೂ ಅಧಿಕ ಬೈಕ್ ಗಳನ್ನ ಸೀಜ್ ಮಾಡಿ ಇದೀಗ, ದಂಡ ಕಟ್ಟಿಸಿಕೊಂಡು ವಾಹನಗಳನ್ನ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಣೆ ಹಿನ್ನಲೆ, ಮನೆಯಲ್ಲಿ ಮದುವೆ ಕಾರ್ಯಕ್ರಮಕ್ಕೆ 20 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೊಸ ಮದುವೆ ಕಾರ್ಯಕ್ರಮಕ್ಕೆ ಈ ಮೂರೂವರೆ ದಿನಗಳಲ್ಲಿ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 66 ಮಂದಿ ಪೊಲೀಸರಿಗೆ ಕೊರೋನಾ ಸೋಂಕು ತಗುಲಿದೆ. ಇವರಲ್ಲಿ ಓರ್ವ ಎಆರ್ ಎಸ್ಐ ಸಾವನ್ನಪ್ಪಿದ್ದು, ಉಳಿದಂತೆ 3 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಹೋಮ್ ಐಸೋಲೇಷನ್ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೂ ವಿಟಮಿನ್ ಸಿ, ಜಿಂಕ್ ಮಾತ್ರೆ ನೀಡಲು ತೀರ್ಮಾನ – ಡಿಸಿ ಸೆಲ್ವಮಣಿ
ಕೋಲಾರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸೋಂಕಿತರು ಹೋಮ್ ಐಸೋಲೇಷನ್ ನಿಯಮಗಳನ್ನ ಉಲ್ಲಂಘನೆ ಮಾಡುತ್ತಿರುವ ದೂರುಗಳು, ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಜಿಲ್ಲಾಧಿಕಾರಿ ಡಾ ಆರ್ ಸೆಲ್ವಮಣಿ ತಿಳಿಸಿದ್ದಾರೆ. ಗ್ರಾಮೀಣ ಭಾಗದ ಹೊಸ ಸೋಂಕಿತರಿಗೆ ಇನ್ನು ಮುಂದೆ ಕೋವಿಡ್ ಕೇರ್ ಸೆಂಟರ್ ನಲ್ಲಿಯೇ ಇರಿಸಿ ಚಿಕಿತ್ಸೆ ನೀಡಲು ನಿರ್ಧರಿಸಿದ್ದು, ಗ್ರಾಮೀಣ ಭಾಗದಲ್ಲಿಯೇ ಕೋವಿಡ್ ಕೇರ್ ಸೆಂಟರ್ ತೆರೆಯುವ ಚರ್ಚೆಗಳು ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೂ ಇನ್ಮುಂದೆ ವಿಟಮಿನ್ ಸಿ ಹಾಗೂ ಜಿಂಕ್ ಮಾತ್ರೆಗಳನ್ನ ನೀಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕಳೆದ ಎರಡು ದಿನದಿಂದ ಇದನ್ನ ಜಾರಿಗೆ ತರಲಾಗಿದೆ ಎಂತಲೂ ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಮತ್ತೊಂದು ಬ್ಲಾಕ್ ಫಂಗಸ್ ಕೇಸ್ ಪತ್ತೆಯಾಗಿದ್ದು, ಇದುವರೆಗು ರೋಗ ಲಕ್ಷಣ 13 ಮಂದಿಯಲ್ಲಿ ಪತ್ತೆಯಾಗಿದೆ. ಮೊನ್ನೆ ರೋಗ ಲಕ್ಷಣ ಕಂಡುಬಂದ ಮತ್ತೊಬ್ಬ ರೋಗಿಯನ್ನು ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಾಲಪ್ಪ ಆಸ್ಪತ್ರೆಯಲ್ಲಿ 30 ಬೆಡ್ ವ್ಯವಸ್ತೆಯುಳ್ಳ ಬ್ಲಾಕ್ ಫಂಗಸ್ ವಾರ್ಡ್ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ ಕೊಂಚ ತಡವಾಗಿಯಾದರೂ ಜಿಲ್ಲೆಯಲ್ಲಿ ಮೂರೂವರೆ ದಿನ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಜನರು ಅನಗತ್ಯವಾಗಿ ಓಡಾಡದೆ ಮನೆಯಲ್ಲಿದ್ದು ಕೋವಿಡ್ 19 ಸೋಂಕು ತಡೆಗಟ್ಟಲು ಸಹಕಾರ ನೀಡಬೇಕೆಂದು ಕೋಲಾರ ಜಿಲ್ಲಾಡಳಿತ ಮನವಿ ಮಾಡಿದೆ.