ಜಿಮ್ಸ್ ನ 500 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಕಾರ್ಯಾರಂಭ
ಜಿಮ್ಸ್ ನ 500 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಕಾರ್ಯಾರಂಭ
ಕಲಬುರಗಿ,ಮೇ.21(ಕ.ವಾ)- ಸೌಮ್ಯ ಸ್ವಭಾವ ಮತ್ತು ತೀವ್ರತರವಲ್ಲದ ಕೋವಿಡ್ ಸೋಂಕಿತರಿಗೆ ಚಿಕೆತ್ಸೆ ನೀಡಲು ಕಲಬುರಗಿ ನಗರದ ಅನ್ನಪೂರ್ಣ ಕ್ರಾಸ್-ಜಿಮ್ಸ್ ಆಸ್ಪತ್ರೆ ಸರ್ಕಲ್ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ 500 ಹಾಸಿಗೆ ಸಾಮರ್ಥ್ಯದ ವಸತಿ ನಿಲಯವನ್ನು ಜಿಮ್ಸ್ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದ್ದು, ಶುಕ್ರವಾರದಿಂದಲೆ ಕಾರ್ಯಾರಂಭ ಮಾಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್ ಅವರು ತಿಳಿಸಿದರು.
ಶುಕ್ರವಾರ ಅವರು ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಮಾತನಾಡಿದರು.
500 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ನಲ್ಲಿ ಸದ್ಯ 50 ಬೆಡ್ ಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಲ್ಲಿ ಅದಕ್ಕನುಗುಣವಾಗಿ ಹಾಸಿಗೆಯನ್ನು ಹೆಚ್ಚಿಸಲಾಗುವುದು ಎಂದರು.
ಕೋವಿಡ್ ಕೇರ್ ಸೆಂಟರ್ ನಲ್ಲಿ 36 ಆಕ್ಸಿಜನ್ ಕನ್ಸನ್ ಟ್ರೇಟರ್ ಗಳಿದ್ದು, ಉಸಿರಾಟ ಸಮಸ್ಯೆ ಇರುವ ರೋಗಿಗಳಿಗೆ ಇದು ನೆರವಾಗಲಿದೆ. ಓರ್ವ ಫಾರ್ಮಾಸಿಸ್ಟ್ ಸಹ ನಿಯೋಜಿಸಿದೆ. ಅಗತ್ಯ ಔಷಧಿಗಳು ಸ್ಥಳದಲ್ಲಿಯೆ ಲಭ್ಯವಿರಲಿವೆ ಎಂದರು.
ಕೋವಿಡ್ ಸೋಂಕಿತರಿಗೆ ದಿನದ 24 ಗಂಟೆ ಚಿಕಿತ್ಸೆ ನೀಡಲು 3 ಪಾಳಿಯಲ್ಲಿ ಒಟ್ಟು 3 ಎಂ.ಬಿ.ಬಿ.ಎಸ್ ವೈದ್ಯರು, 6 ಸ್ಟಾಫ್ ನರ್ಸ್ ಗಳು, 6 ಗ್ರೂಪ್ ಡಿ ನೌಕರರನ್ನು ನಿಯೋಜಿಸಲಾಗಿದೆ. ಜಿಲ್ಲಾಡಳಿತದಿಂದಲೆ ರೋಗಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ತುರ್ತು ಸಂದರ್ಭದಲ್ಲಿ ಉಪಯೋಗಕ್ಕೆ ಆಂಬುಲೆನ್ಸ್ ಸಹ ಲಭ್ಯವಿರಲಿದೆ ಎಂದು ಡಿ.ಹೆಚ್.ಓ ಡಾ.ಶರಣಬಸಪ್ಪ ಗಣಜಲಖೇಡ್ ಅವರು ವಿವರಿಸಿದರು.
ಇದೇ ವೇಳೆ ಆಕ್ಸಿಜನ್ ಕನ್ಸನ್ ಟ್ರೇಟರ್ ಗಳು ಯಾವ ರೀತಿಯಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಡಿಹೆಚ್ಓ ಡಾ.ಶರಣಬಸಪ್ಪ ಗಣಜಲಖೇಡ್ ಅವರು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಹಾಗೂ ಕಲಬುರಗಿ ತಾಲೂಕಾ ಅರೋಗ್ಯಧಿಕಾರಿ ಡಾ. ಮಾರುತಿ ಕಾಂಬಳೆ ಇದ್ದರು.