ಬರೋಬ್ಬರಿ 4.900 ಕೆ.ಜಿ ಬಂಗಾರ ಕದ್ದರೇ ಯಮನಕರಡಿ ಪೊಲೀಸರು? ರೋಚಕ ಪ್ರಕರಣದ ತನಿಖೆಗೆ ಸಿಐಡಿ ಎಂಟ್ರಿ

ಹೈಲೈಟ್ಸ್‌:

  • ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಚಿನ್ನದ ಶೋಧ
  • ಕಾರು ಜಪ್ತಿ ಕೇಸ್‌ನಲ್ಲಿ ಪೊಲೀಸರಿಂದಲೇ ಚಿನ್ನ ಕಳವು ಶಂಕೆ
  • ರೋಚಕ ಪ್ರಕರಣದ ತನಿಖೆಗೆ ಸಿಐಡಿ ಪೊಲೀಸರ ಪ್ರವೇಶ

ಬೆಳಗಾವಿ: ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಚಿನ್ನದ ಶೋಧ, ಕಾರು ಜಪ್ತಿ ಪ್ರಕರಣದಲ್ಲಿ ಪೊಲೀಸರೇ ಚಿನ್ನ ಕಳವು ಮಾಡಿದ ಶಂಕೆ ಬಲವಾದ ಹಿನ್ನೆಲೆಯಲ್ಲಿ ಸಿಐಡಿ ತಂಡ ಈ ರೋಚಕ ಕೇಸ್‌ನ ತನಿಖೆ ಆರಂಭಿಸಿದೆ. ಈ ಘಟನೆ ನಡೆದದ್ದು ನಾಲ್ಕು ತಿಂಗಳ ಹಿಂದೆ. ಮಂಗಳೂರಿನಿಂದ ಬೆಳಗಾವಿ ಮೂಲಕ ಕೊಲ್ಲಾಪುರಕ್ಕೆ ಕಾರಿನಲ್ಲಿ ಅಕ್ರಮವಾಗಿ ಬಂಗಾರ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನ ಯಮಕನಮರಡಿ ಠಾಣೆ ಪೊಲೀಸರು ಜ.9 ರಂದು ಹತ್ತರಗಿ ಟೋಲ್‌ ಗೇಟ್‌ ಬಳಿ ತಪಾಸಣೆ ಕೈಗೊಂಡಿದ್ದರು. ಈ ವೇಳೆ ಕಾರನ್ನು ತಡೆದು ಪರಿಶೀಲನೆ ನಡೆಸಿದ್ದರು. ಆದರೆ, ಬಂಗಾರ ಸಿಗದೇ ಇದ್ದರೂ ಇತರ ಕಾನೂನು ಉಲ್ಲಂಘನೆ ಹಿನ್ನೆಲೆಯಲ್ಲಿ ಸಂಶಯಾಸ್ಪದ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳಿಗೂ ಕಾರಿನಲ್ಲಿ ಬಂಗಾರ ಸಿಕ್ಕಿಲ್ಲ ಎಂದು ಜಪ್ತಿ ಮಾಡಿದ್ದ ಪೊಲೀಸರು ಮಾಹಿತಿ ನೀಡಿದ್ದರು. ಆದರೆ, ನಾಲ್ಕು ತಿಂಗಳ ನಂತರ ನಗರಕ್ಕೆ ಆಗಮಿಸಿರುವ ಸಿಐಡಿ ಪೊಲೀಸರಿಂದ ‘ಕಳ್ಳ ಪೊಲೀಸ್‌’ರ ಬಣ್ಣ ಬಯಲಾಗಿದೆ.

ಏನಿದು ಕಳ್ಳಾಟ?
ಮಂಗಳೂರಿನ ತಿಲಕ್‌ ಪೂಜಾರಿ ಎಂಬುವವರು ಕಾರಿನಲ್ಲಿ 4.900 ಕೆಜಿ ಚಿನ್ನವನ್ನು ಮಂಗಳೂರಿನಿಂದ ಬೆಳಗಾವಿ ಮೂಲಕ ಕೊಲ್ಲಾಪುರಕ್ಕೆ ಕಳುಹಿಸುತ್ತಿದ್ದರು. ಈ ಮಾಹಿತಿ ತಿಳಿದ ತಿಲಕ್‌ ಪೂಜಾರಿ ಅವರ ಸ್ನೇಹಿತ ಧಾರವಾಡದ ಕಿರಣ ವೀರನಗೌಡರ ಬೆಳಗಾವಿಯ ಡಿವೈಎಸ್ಪಿಯೊಬ್ಬರಿಗೆ ಮಾಹಿತಿ ನೀಡಿದ್ದರು. ಡಿವೈಎಸ್ಪಿ ಯಮಕನಮರಡಿ ಠಾಣೆ ಪೊಲೀಸರ ಮೂಲಕ ವಾಹನ ಜಪ್ತಿ ಮಾಡಿಸಿದ್ದರು. ಜಪ್ತಿ ಸಂದರ್ಭದಲ್ಲಿ ಕಾರಿನಲ್ಲಿ ಯಾವುದೇ ಅಕ್ರಮ ವಸ್ತು ಸಿಕ್ಕಿಲ್ಲ. ಆದರೆ, ಮೋಟಾರು ಕಾಯಿದೆ ನಿಯಮ ಉಲ್ಲಂಘಿಸಿ ವಾಹನವನ್ನು ಬದಲಾಯಿಸಿರುವುದು ಕಂಡು ಬಂದಿದೆ ಎಂದು ಪಿಎಸ್‌ಐ ರಮೇಶ್‌ ಪಾಟೀಲ ಮತ್ತು ಸಿಬ್ಬಂದಿ 96 ಕೆಪಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಾಹನವನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಆದರೆ, ಇದರ ಬಳಿಕ ಕಾರನ್ನು ಪೊಲೀಸರಿಂದ ಬಿಡಿಸಿಕೊಡುವುದಾಗಿ ಹೇಳಿದ ಕಿರಣ ವೀರನಗೌಡರ, ಚಿನ್ನದ ಮಾಲೀಕ ತಿಲಕ್‌ ಅವರ ಬಳಿ 60 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ನಂತರ 30 ಲಕ್ಷ ರೂ.ಗೆ ಒಪ್ಪಿ 25 ಲಕ್ಷ ರೂ. ಮುಂಗಡ ಪಡೆದಿದ್ದ. ಬಳಿಕ ಕಿರಣ್‌ ಬೆಳಗಾವಿಯ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ಮೂಲಕ ವಾಹನ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಜತೆಗೆ ಹಿರಿಯ ಪೊಲೀಸ್‌ ಅಧಿಕಾರಿ ಕೂಡ ಪಿಎಸ್‌ಐ ಮೇಲೆ ಒತ್ತಡ ಹೇರಿ ಪ್ರಕರಣ ಮುಚ್ಚಿಹಾಕಲು ಸೂಚಿಸಿದ್ದರು. ಈ ಎಲ್ಲ ಘಟನೆಗಳ ನಡುವೆ ಡಿವೈಎಸ್ಪಿ ಮತ್ತು ಕಿರಣ ಕಾರಿನ ಏರ್‌ಬ್ಯಾಗ್‌ನಲ್ಲಿದ್ದ 4.900 ಕೆಜಿ ಬಂಗಾರವನ್ನು ದೋಚಿದ್ದರು.

ಹಣ ಕೊಟ್ಟರೂ ಕಾರ್‌ ಸಿಗದೇ ಇರುವುದರಿಂದ ತಿಲಕ್‌ ಅವರು ಬೆಳಗಾವಿಗೆ ಬಂದು, ನ್ಯಾಯಾಲಯದಿಂದ ಕಾರು ಬಿಡಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಚಿನ್ನ ಇಲ್ಲದಿರುವುದು ತಿಲಕ್‌ ಅವರಿಗೆ ಗೊತ್ತಾಗಿದ್ದು ಅವರು ಯಮಕನಮರಡಿ ಪೊಲೀಸರ ವಿರುದ್ಧ ಐಜಿಪಿಗೆ ದೂರು ನೀಡಿದ್ದರು. ದೂರು ಪಡೆದುಕೊಂಡ ಐಜಿಪಿ ಪ್ರಕರಣದ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದ್ದರು. ಅವರು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ತಂಡ ರಚಿಸಿದ್ದರು. ತನಿಖೆಯಲ್ಲಿ ಹಿರಿಯ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಂಶಯ ಬಂದಾಗ, ಇಲಾಖೆ ಗಮನಕ್ಕೆ ತಂದು ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.

ಐಜಿಪಿ ಸೇರಿದಂತೆ ಹಲವರು ವರ್ಗ
ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ತಪ್ಪು ಕಂಡು ಬಂದ ಹಿನ್ನೆಲೆಯಲ್ಲಿ ಹುಕ್ಕೇರಿ ಸಿಪಿಐ ಮತ್ತು ಯಮಕನಮರಡಿ ಪಿಎಸ್‌ಐ, ಗೋಕಾಕದ ಡಿವೈಎಸ್ಪಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಅದೇ ರೀತಿ ಐಜಿಪಿ ರಾಘವೇಂದ್ರ ಸುಹಾಸ್‌ ಅವರೂ ವರ್ಗಾವಣೆಗೊಂಡಿರುವುದರಿಂದ ಪ್ರಕರಣದ ಕುತೂಹಲ ಇನ್ನಷ್ಟು ಹೆಚ್ಚಿದೆ. ಈಗ ಸಿಐಡಿ ಅಧಿಕಾರಿಗಳ ತನಿಖೆ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *