ಸೋಂಕು ಹೆಚ್ಚಾಗಲು ಕಾಂಗ್ರೆಸ್ ಕಾರಣ:ಕಟೀಲ್
ಕಲಬುರಗಿ:ಮೇ.22: ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚಾಗಲು ಕಾಂಗ್ರೆಸ್ ಕಾರಣ. ಸೋಂಕಿನಿಂದ ಸಂಭವಿಸುತ್ತಿರುವ ಸಾವುಗಳಿಗೂ ಕಾಂಗ್ರೆಸ್ಸೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಎರಡು ದಿನಗಳ ಹಿಂದೆ ಕೋವಿಡ್ ನಿಂದ ಮೃತಪಟ್ಟ ಕಲಬುರಗಿ ಬಿಜೆಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ದತ್ತಾತ್ರೇಯ ತೂಗಾಂವಕರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಶುಕ್ರವಾರ ಬೀದರ್ ಗೆ ತೆರಳುವ ಮುನ್ನ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ದೇಶದ ಲಸಿಕೆ ಬಗ್ಗೆ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡಿದರು. ಈ ಲಸಿಕೆ ಪರಿಣಾಮಕಾರಿ ಇಲ್ಲ. ಇದರಿಂದ ಪುರುಷತ್ವ ಕಡಿಮೆ ಆಗುತ್ತದೆ. ಅದು ಬಿಜೆಪಿ ಲಸಿಕೆ, ಮೋದಿ ಲಸಿಕೆ ಎಂದೆಲ್ಲ ಅಪಪ್ರಚಾರ ಮಾಡಿದರು. ಇದರಿಂದ ಲಸಿಕೆ ಪಡೆಯಲು ಜನರು ಹಿಂಜರಿದರು. ಅದರ ಪರಿಣಾಮವೇ ಈಗ ಸೋಂಕು ಹಾಗೂ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ದೂರಿದರು.
ಲಸಿಕೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡಿದೆ ಎಂಬ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಸತ್ಯದಿಂದ ಕೂಡಿದೆ. ಲಸಿಕೆ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ವ್ಯವಸ್ಥಿತವಾಗಿ ಮಾಡಿದೆ. ಕಾಂಗ್ರೆಸ್ ಸುಳ್ಳು ಹೇಳಿಕೆಯಿಂದ ಜನರು ಭಯ ಭೀತರಾಗಿ ಲಸಿಕೆಯಿಂದ ದೂರ ಉಳಿದರು ಎಂದು ಕಿಡಿಕಾರಿದರು.
ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಫೆಬ್ರುವರಿಯಲ್ಲಿ ಸ್ವತಃ ಪ್ರಧಾನಿ ಮೋದಿ ಅವರೇ ಲಸಿಕೆ ಪಡೆದು ಜನರಿಗೆ ಪ್ರೇರಣೆ ನೀಡಿದರು. ಆದರೂ, ಜನ ಮೇ ತಿಂಗಳವರೆಗೂ ಲಸಿಕೆಗಾಗಿ ಮುಂದೆ ಬರಲಿಲ್ಲ. ಈಗ ಅದೇ ಕಾಂಗ್ರೆಸ್ಸಿಗರು ಲಸಿಕೆ ಇಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡುತ್ತಿದೆ. ಇದು ಸರಿಯಲ್ಲ. ದೇಶ ವಿರೋಧಿ ಕೆಲಸದಲ್ಲಿ ಅವರು ತೊಡಗಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಕೂಡ ಹೊರತಲ್ಲ. ಕಾಂಗ್ರೆಸ್ ಹೈಕಮಾಂಡ್ ಏನು ಮಾಡುತ್ತದೋ ಸಿದ್ದರಾಮಯ್ಯನವರೂ ಅದನ್ನೇ ಮಾಡುತ್ತಾರೆ. ಅಧಿಕಾರಕ್ಕಾಗಿ ಈ ರೀತಿಯ ವರ್ತನೆಯನ್ನು ಜನ ಸಹಿಸುವುದಿಲ್ಲ. ಅದಕ್ಕಾಗಿಯೇ ಜನ ಅವರನ್ನು ವರುಣಾ ಕ್ಷೇತ್ರದಿಂದ ಓಡಿಸಿದ್ದಾರೆ. ಇದೇ ರೀತಿ ಮಾಡಿದರೆ ಬಾದಾಮಿಯಿಂದಲೂ ಸಿದ್ದರಾಮಯ್ಯನವರನ್ನು ಓಡಿಸುತ್ತಾರೆ ಎಂದು ಕಟೀಲ್ ಲೇವಡಿ ಮಾಡಿದರು.