Basavaraj Bommai: ಒಂದೊಂದು ಸಾವು ನೋಡಿದ್ರೂ ಎದೆ ಒಡೆದಂಗೆ ಆಗ್ತಿದೆ; ಹಾವೇರಿ ಡಿಸಿ, ಡಿಹೆಚ್​ಓ ವಿರುದ್ಧ ಗೃಹ ಸಚಿವ ಬೊಮ್ಮಾಯಿ ಕೆಂಡಾಮಂಡಲ

ಹಾವೇರಿ(ಮೇ 22): ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೇರಿದಂತೆ ವಿವಿಧ ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ(Home Minister Basavaraj Bommai) ಕೆಂಡಾಮಂಡಲವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.  ಜಿಲ್ಲೆಗೆ ಭೇಟಿ ನೀಡಿದ್ದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ(Health Minister K Sudhakar) ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ‌ ನಡೆಸಲಾಯಿತು. ಈ ವೇಳೆ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಸಂಸದ ಶಿವಕುಮಾರ್ ಉದಾಸಿ ಕೂಡ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಕೋವಿಡ್ ಪ್ರಕರಣಗಳ ಕುರಿತ ಸರಿಯಾದ ಅಂಕಿ ಅಂಶಗಳನ್ನ  ನೀಡದಿದ್ದಕ್ಕೆ ಮತ್ತು ಸರಿಯಾದ ಮಾಹಿತಿ ಪುಸ್ತಕ ನೀಡದಿರುವುದಕ್ಕೆ ಫುಲ್ ಗರಂ ಆದ ಬೊಮ್ಮಾಯಿ ಜಿಲ್ಲಾಧಿಕಾರಿಯನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

“ಆರೋಗ್ಯ ಸಚಿವರು ಬಂದಾರ, ಅಂಕಿ ಅಂಶಗಳ ಮಾಹಿತಿ ಹುಡುಕಬೇಕಾ ? ನಮ್ಮ ಮುಂದೆ ಒಂದು ದಾಖಲೆ ಇಲ್ಲ ಇಲ್ಲಿ. ಇಷ್ಟು ಜನ ಯಾಕೆ ಬಂದಿದ್ದೀರಿ? ದಾಖಲೆಗಳನ್ನು ಪೂಜೆ ಮಾಡೋದಕ್ಕೆ ಇಟ್ಟಿದ್ದೀರಾ.? ಇದರ ಜವಾಬ್ದಾರಿ ಯಾರೂ ವಹಿಸಿದ್ದಾರೋ ಅವರನ್ನ  ಕೂಡಲೇ ಸಸ್ಪೆಂಡ್ ಮಾಡಿ. ಸರಿಯಾದ ಅಂಕಿ ಸಂಖ್ಯೆ ನೀಡಲು ಆಗದವರು ಕೊರೋನಾ ಹೇಗೆ ನಿಯಂತ್ರಣ ಮಾಡ್ತೀರಾ? ತಕ್ಷಣವೇ ಸಂಬಂಧಿಸಿದವರನ್ನ ಅಮಾನತು ಮಾಡಿ” ಎಂದು ಖಡಕ್ ಸೂಚನೆ ನೀಡಿದ್ರು.

ಇನ್ನು ಡಿಎಚ್ಓ ಡಾ.ರಾಘವೇಂದ್ರಸ್ವಾಮಿ(DHO dr.Raghavendraswamy) ಅವರನ್ನ ಬದಲಿಸಿ ತಕ್ಷಣವೇ ಜಿಲ್ಲೆಗೆ ಆಕ್ಟಿವ್ ಆಗಿರೋ ಡಿಎಚ್ಓ ನೇಮಿಸುವಂತೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಿದರು. ಅಲ್ಲದೆ, ಜಿಲ್ಲೆಯಲ್ಲಿ ಪ್ರತಿದಿನ ಸಾವಿನ ಸಂಖ್ಯೆ ಹೆಚ್ಚುತ್ತಿದ್ರೂ ಸಾವಿಗೆ ಸರಿಯಾದ ಕಾರಣ ನೀಡದ್ದಕ್ಕೆ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರರನ್ನ ತರಾಟೆಗೆ ತೆಗೆದುಕೊಂಡ ಅವರು, “ಪ್ರತಿದಿನ ಸಾಯುತ್ತಿದ್ದಾರೆ. ಒಂದೊಂದು ಡೆತ್ ನೋಡಿದ್ರೆ ಎದೆ ಒಡೆದಂಗೆ ಆಗ್ತಿದೆ. ಸ್ಟೇಟ್ ನಲ್ಲಿ ಹೈಯಷ್ಟ್ ಇದೆ ನಮ್ದು. ಜಿಲ್ಲೆಯಲ್ಲಿನ ಸಾವಿನ ಪ್ರಮಾಣ ನೋಡಿದ್ರೆ ಎದೆ ಝಲ್ ಅನ್ನುತ್ತೆ. ನೀವು ಒಂದು ದಿನವಾದ್ರೂ ಸಾವಿನ ಬಗ್ಗೆ ವರದಿ ನೀಡಿದ್ದೀರಾ? ಸಾಯುವವರನ್ನ ನೋಡಿದ್ರೆ ನಿಮಗೇನೂ ಅನ್ನಿಸೋದಿಲ್ವಾ” ಅಂತಾ ತೀವ್ರ ತರಾಟೆಗೆ ತೆಗೆದುಕೊಂಡರು.

ಇನ್ನು ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ, ಸಾವಿನ ಪ್ರಮಾಣ ಹೆಚ್ಚಾಗ್ತಿರೋದು ದುಃಖ ತಂದಿದೆ. ಎಲ್ಲರೂ ಹೆಚ್ಚು ಶ್ರಮ ವಹಿಸಿ ವೈಜ್ಞಾನಿಕ ತಳಹದಿಯ ಮೇಲೆ ಸಾವಿನ ಪ್ರಮಾಣ ಕಡಿಮೆ ಮಾಡಬೇಕಿದೆ. ಮೂರ್ನಾಲ್ಕು ದಿನಗಳಲ್ಲಿ ಜಿಲ್ಲೆಗೆ ಬೇಕಾದ ವೆಂಟಿಲೇಟರ್ಸ್ ಕಳಿಸಿಕೊಡುತ್ತೇನೆ. ಖಾಲಿ ಇರುವ ಸಿಬ್ಬಂದಿಯನ್ನ ತುಂಬಿಸಿಕೊಡುತ್ತೇನೆ. ತಕ್ಷಣಕ್ಕೆ ಜಿಲ್ಲೆಗೆ ಕಾನ್ಸೆಂಟ್ರೇಟರ್ ಕಳಿಸಿಕೊಡುತ್ತೇನೆ. ಗುತ್ತಿಗೆ ಆಧಾರದ ಮೇಲೆ ಅಗತ್ಯ ವೈದ್ಯರು ಮತ್ತು ನರ್ಸ್ ಮತ್ತು ಸಿಬ್ಬಂದಿ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಹೆಚ್ಚು ಹೆಚ್ಚು ಪರೀಕ್ಷೆಗಳನ್ನ ಮಾಡಬೇಕು. ಎರಡೂವರೆ ಸಾವಿರ ಪರೀಕ್ಷೆಗಳನ್ನ ಮಾಡಬೇಕು. ಸೋಂಕಿತರನ್ನ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ಕಳಿಸಬೇಕು. ಪ್ರತಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಒಬ್ಬರು ವೈದ್ಯರು ಇರಲೇಬೇಕು. ಸೋಂಕು ಪತ್ತೆ ಆಗ್ತಿದ್ದಂತೆ ಸೋಂಕಿತರಿಗೆ ಔಷಧಿ ಕೊಡಬೇಕು. ಆರಂಭದಿಂದಲೆ ಸೋಂಕಿತರಿಗೆ ಚಿಕಿತ್ಸೆ ನೀಡಿದ್ರೆ ಸಾವಿನ ಪ್ರಮಾಣ ಕಡಿಮೆ ಆಗುತ್ತದೆ. ಆಕ್ಸಿಜನ್‌ ಬಳಕೆ ಬಗ್ಗೆ ತಜ್ಞರ ಸಮಿತಿ ರಚನೆ ಮಾಡಲು ಸೂಚನೆ ನೀಡಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *