Love Cheating: 9 ವರ್ಷ ಪ್ರೀತಿಸಿ, ಮದುವೆಯಾಗಿ ಕೈಕೊಟ್ಟ ಪ್ರಿಯಕರ; ಯುವಕನ ಮನೆ ಎದುರು ಯುವತಿಯ ಏಕಾಂಗಿ ಧರಣಿ

ಕೋಲಾರ(ಮೇ 22): ಪ್ರೀತಿಸಿ ಮದುವೆಯಾಗಿದ್ದರೂ ಮನೆಗೆ ಕರೆದೊಯ್ಯದೆ ಸತಾಯಿಸಿದ ಪ್ರಿಯಕರನ ಮನೆ ಎದುರು ಯುವತಿ ಮೂರು ದಿನಗಳಿಂದ ಏಕಾಂಗಿ ಪ್ರತಿಭಟನೆ ನಡೆಸುತ್ತಿರುವ ಘಟನೆ  ಕೋಲಾರ ತಾಲೂಕಿನ ಅರಾಬಿಕೊತ್ತನೂರು ಗ್ರಾಮದಲ್ಲಿ ನಡೆದಿದೆ.  ಗ್ರಾಮದ ನಿವಾಸಿ ಮಹೇಶ್ ಹಾಗೂ ಅದೇ ಅರಾಬಿಕೊತ್ತನೂರು ಗ್ರಾಮದ  ಅಂಬಿಕಾ  ಕಳೆದ 9 ವರ್ಷದಿಂದ ಪರಸ್ಪರ  ಪ್ರೀತಿ-ಪ್ರೇಮವೆಂದು ಒಡಾಡಿದ್ದಾರೆ. ಇಬ್ಬರ ಪ್ರೀತಿಯು ಇತ್ತೀಚೆಗೆ ವೈವಾಹಿಕ ಜೀವನವಾಗಿ ಮಾರ್ಪಟ್ಟಿದೆ.  ಆದರೆ ಮದುವೆಯಾಗಿದ್ದರೂ ನೀನು ಬೇಡವೆಂದು  ಪ್ರಿಯಕರ ಮಹೇಶ್ ಕಣ್ಣಾಮುಚ್ಚಾಲೆ ಆಟ ಆಡಲು ಆರಂಭಿಸಿದ್ದಾನೆ.

ಅಂಬಿಕಾ ಒತ್ತಾಯಕ್ಕೆ ಕಳೆದ ಒಂದು ವಾರದ ಹಿಂದೆಯಷ್ಟೆ ಮಹೇಶ್​ ಮನೆಯಲ್ಲೆ ಮದುವೆಯಾಗಿದ್ದಾನೆ. ಬಳಿಕ ಮನೆಗೆ ಕರೆದೊಯ್ಯುವಂತೆ ಅಂಬಿಕಾ ಕೇಳುತ್ತಿದ್ದರೂ ಸತಾಯಿಸಲು ಆರಂಭಿಸಿದ್ದಾನೆ. ಅಷ್ಟೇ ಅಲ್ಲದೆ ಪೋಷಕರು ಹೇಳಿದಂತೆ ಬೇರೊಬ್ಬ ಯುವತಿಯನ್ನ ಮದುವೆಯಾಗಲು ಮಹೇಶ್ ಮುಂದಾಗಿದ್ದಾನೆ. ಈ ವಿಚಾರ ತಿಳಿದ ಅಂಬಿಕಾ ಕಳೆದ ಮೂರು ದಿನದಿಂದ ಮಹೇಶ್ ನಿವಾಸದ ಎದುರು‌ ಧರಣಿ ಕುಳಿತಿದ್ದಾಳೆ. ಮನೆ ಎದುರು ಅಂಬಿಕಾ ಧರಣಿ ಕೂರುವ ಮಾಹಿತಿ ತಿಳಿದಿರುವ  ಮಹೇಶ್ ಗ್ರಾಮದಿಂದಲೇ ನಾಪತ್ತೆಯಾಗಿದ್ದಾನೆ.

ಇನ್ನು ಇಬ್ಬರು  ಖಾಸಗಿ ಕಂಪನಿಯೊಂದರಲ್ಲಿ  ಕೆಲಸ ಮಾಡುತ್ತಿದ್ದು, 9 ವರ್ಷಗಳ ಹಿಂದೆಯೇ ಪರಿಚಯವಾಗಿತ್ತು.  ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಇಷ್ಟ ಪಟ್ಟಿದ್ದರಿಂದಲೇ ಲೈಂಗಿಕವಾಗಿ ಬಳಸಿಕೊಂಡು ಮಹೇಶ್  ನನಗೆ  ಮೋಸ ಮಾಡುತ್ತಿದ್ದಾನೆಂದು ನೊಂದ ಅಂಬಿಕಾ ಆರೋಪಿಸಿದ್ದಾರೆ.

ಮನೆ ಎದುರು ಧರಣಿ ಕುಳಿತಿದ್ದಕ್ಕೆ ಮಹೇಶ್ ಪೋಷಕರು ಸಿಡಿ ಮಿಡಿ

ಪ್ರೀತಿಸಿ ವಂಚನೆ ಮಾಡಲು ಹೊರಟಿರುವ ಮಹೇಶ್ ವಿರುದ್ದ ಈಗಾಗಲೇ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುವ ಅಂಬಿಕಾ, ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿದ್ದಾರೆ. ಮಹಿಳಾ ಸಾಂತ್ವಾನ ಕೇಂದ್ರಕ್ಕೂ ದೂರು ನೀಡಿದ್ದು, ಮಹೇಶ್ ಜೊತೆಗೆ ಜೀವನ ನಡೆಸಲು ಅವಕಾಶ ನೀಡುವಂತೆಯೂ ಮನವಿಯನ್ನು ಅಂಬಿಕಾ ಸಲ್ಲಿಸಿದ್ದಾರೆ.  ಮಳೆ, ಬಿಸಿಲು,  ಗಾಳಿ ಲೆಕ್ಕಿಸದೆ ಮಹೇಶ್​ ಮನೆ ಮುಂದೆ ಧರಣಿ ಕುಳಿತುಕೊಂಡಿದ್ದಕ್ಕೆ ಪೋಷಕರು ಹಾಗೂ ಸಂಬಂಧಿಕರು ವಿರೋಧಿಸಿದ್ದಾರೆ.  ಯುವತಿಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪೋಷಕರು, ನೀನು ಪೊಲೀಸ್ ಠಾಣೆಗೆ ದೂರು ನೀಡಿ, ಯಾವ ಕಾರಣಕ್ಕೆ ಪ್ರತಿಭಟನೆ ಮಾಡಲು ಬಂದಿದ್ದೀಯಾ?  ನ್ಯಾಯಾಲಯದಲ್ಲೇ ಪ್ರಕರಣ ಇತ್ಯರ್ಥ ಮಾಡಿಕೋ ಎನ್ನುತ್ತಾ ಸ್ಥಳದಿಂದ ಹೋಗುವಂತೆ ಒತ್ತಡ ಹಾಕುತ್ತಿದ್ದಾರೆ.

ಇದರ ಜೊತೆಗೆ ಮಹಿಳೆಯೊಬ್ಬರು ಅಂಬಿಕಾರ ಬಳಿ ಕೆಟ್ಟ ಪದಗಳನ್ನು ಬಳಸಿದ್ದು, ಯುವತಿಯಾಗಿ ಮಹೇಶ್ ಜೊತೆಗೆ ಸಲುಗೆಯಿಂದ ಇದ್ದದ್ದು ನಿನ್ನದೆ  ತಪ್ಪು ಎಂದು ನಿಂದಿಸಿದ್ದಾರೆ. ಹೀಗಾಗಿ ಅಂಬಿಕಾ ಮತ್ತು ಮಹೇಶ್ ಸಂಬಂಧಿಕರ ಮಧ್ಯೆ ಇದೇ  ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಧರಣಿ ಕುಳಿತಿರುವ ವಿಡಿಯೋವನ್ನ ಸಾಮಾಜಿಕ ಜಾಲತಾಣ ಮೂಲಕ ನೇರ ಚಿತ್ರೀಕರಣ ಮಾಡಿರುವ ಅಂಬಿಕಾ,  ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡು ಮಹೇಶ್ ಮೋಸ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ. ಲಾಕ್ ಡೌನ್ ಹಿನ್ನಲೆ ಇಬ್ಬರೂ ಮನೆಯಲ್ಲೇ ಮದುವೆಯಾಗಿದ್ದು, ನನ್ನ ಗಂಡನನ್ನ ಹುಡುಕಿಕೊಟ್ಟು, ಆತನ ಜೊತೆಗೆ ಜೀವನ ನಡೆಸಲು ಅವಕಾಶ ಮಾಡಿಕೊಡುವಂತೆ ಸಾಮಾಜಿಕ ಜಾಲತಾಣ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಅಂಬಿಕಾ ಅರಾಬಿಕೊತ್ತನೂರು ಗ್ರಾಮದವರೇ ಆದರೂ ವೇಮಗಲ್ ಗ್ರಾಮದಲ್ಲಿ ವಾಸವಿದ್ದಾರೆ. ಗ್ರಾಮದಲ್ಲಿನ ಮನೆ ನವೀಕರಣ ಕೆಲಸ ನಡೆಯುತ್ತಿದ್ದು ಅದಕ್ಕಾಗಿಯೇ ವೇಮಗಲ್ ನಲ್ಲಿ ವಾಸವಿದ್ದಾರೆ. ಇಬ್ಬರು ಮನೆಯಲ್ಲೆ ಮದುವೆಯಾಗಿದ್ದು,  ಫೋಟೋಗಳನ್ನ ಪೊಲೀಸರಿಗೆ ದಾಖಲೆಯಾಗಿ ನೀಡಿದ್ದೇನೆ ಎಂದು ಅಂಬಿಕಾ ತಿಳಿಸಿದ್ದಾರೆ.

ಒಟ್ಟಿನಲ್ಲಿ ಪ್ರೀತಿಸಿ ಮದುವೆಯಾದ ಪ್ರಿಯಕರ ಕೈ ಕೊಟ್ಟಿದ್ದು, ಕಂಗಾಲಾಗಿರುವ ಯುವತಿ ಧರಣಿ ಮಾಡುವ ದಾರಿ ಹಿಡಿದಿದ್ದು, ಬಾಳು ಕೊಡುವುದಾಗಿ ನಂಬಿಸಿದ ಮಹೇಶ್ ಸದ್ಯಕ್ಕೆ ನಾಪತ್ತೆಯಾಗಿದ್ದಾನೆ. ಕೋವಿಡ್ -19 ಹಿನ್ನಲೆ ಪೊಲೀಸರು ಮಹೇಶ್ ನನ್ನು ಪತ್ತೆ ಹಚ್ಚುವುದು ತಡವಾಗಿದ್ದು, ನ್ಯಾಯ ಸಿಗುವ ತನಕ ಹೋರಾಟ ನಿಲ್ಲಿಸಲ್ಲ ಎಂದು ಅಂಬಿಕಾ ಪಟ್ಟು ಹಿಡಿದು  ಕುಳಿತಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *