ಕೋವಿಡ್ ಕೇರ್ ಸೆಂಟರ್ಗೆ ಹಾಸಿಗೆ ದಿಂಬು,ಹೊದಿಕೆ ಕೊಡುಗೆ
ಕೋಲಾರ,ಮೇ.೨೨: ಕೆ.ಜಿ.ಎಫ್ನ ನವೀಕೃತ ಬಿಜಿಎಂಎಲ್ ಆಸ್ಪತ್ರೆಯಲ್ಲಿ ಆರಂಭಿಸಲಿರುವ ಕೋವಿಡ್ ಕೇರ್ ಸೆಂಟರ್ಗೆ ಕೋಲಾರದ ಗೌರವ್ ಆಸ್ಪತ್ರೆಯು ೧೦೦ ಹಾಸಿಗೆ, ದಿಂಬು ಮತ್ತು ಹೊದಿಕೆಗಳ ಕೊಡುಗೆ ನೀಡಿದ್ದು, ಗುರುವಾರ ಬೆಳಗ್ಗೆ ಈ ಕೊಡುಗೆಯನ್ನು ಆಸ್ಪತ್ರೆಯ ಮುಖ್ಯಸ್ಥ ಡಾ.ದೇವರಾಜ್ ಹಸ್ತಾಂತರಿಸಿದರು.
ಜಿಲ್ಲೆಯಲ್ಲಿ ಕೊರೋನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಕೆ.ಜಿ.ಎಫ್ನಲ್ಲಿ ೨೦ ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಬಿಜಿಎಂಎಲ್ ಆಸ್ಪತೆಯನ್ನು ಪುನಶ್ಚೇತನಗೊಳಿಸಿದ್ದಾರೆ. ಈ ಕಾರ್ಯಕ್ಕೆ ಸಹಕಾರ ಹಸ್ತ ಚಾಚುವ ಸಲುವಾಗಿ ತಮ್ಮ ಆಸ್ಪತ್ರೆಯ ಕಡೆಯಿಂದ ಅಳಿಲು ಸೇವೆ ಸಲ್ಲಿಸುತ್ತಿರುವುದಾಗಿ ಡಾ.ದೇವರಾಜ್ ತಿಳಿಸಿದರು.
ಕೆಜಿಎಫ್ನಲ್ಲಿ ಸ್ಥಾಪಿಸುತ್ತಿರುವ ೨೫೦ ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ಗೆ ಸಾಮಾಜಿಕ ಬದ್ದತೆಯ ಸಲುವಾಗಿ ೧೦೦ ಹಾಸಿಗೆಗಳನ್ನು ನೀಡಲಾಗುತ್ತಿದೆ. ಆಸ್ಪತ್ರೆಯು ಮುಂದಿನ ದಿನಗಳಲ್ಲೂ ಇದೇ ರೀತಿಯ ಸಾಮಾಜಿಕ ಕಾಳಜಿ ತೋರಿಸಲಿದೆ ಎಂದು ಕಂಬೋಡಿ ಶ್ರೀನಿವಾಸಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯವಾಹಕ ಡಾ.ಶಂಕರ್ನಾಯಕ್, ವಿಶ್ವ ಹಿಂದೂ ಪರಿಷತ್ ಹಿರಿಯ ಮುಖಂಡ ಜೆ.ಎಸ್ ಪಾರ್ಥಸಾರಥಿ, ಸಂಯುಕ್ತ ಕರ್ನಾಟಕ ಬ್ಯೂರೋ ಮುಖ್ಯಸ್ಥರಾದ ಬಿ.ವಿ ಗೋಪಿನಾಥ್, ಎಸ್.ಎನ್.ಆರ್ ಆಸ್ಪತ್ರೆಯ ನಂದೀಶ್ಕುಮಾರ್, ಶಿಳ್ಳಂಗೆರೆ ಮಹೇಶ್, ಮಲ್ಲಿಕಾ ಪ್ರಕಾಶ್, ವಕೀಲ ಕೃಷ್ಣಕುಮಾರ್, ನಗರಸಭೆ ಮಾಜಿ ಸದಸ್ಯ ಪ್ರಕಾಶ್, ಆರ್.ಎಸ್.ಎಸ್ ಜಿಲ್ಲಾ ಪ್ರಚಾರಕ್ ಪ್ರಶಾಂತ್ ಉಪಸ್ಥಿತರಿದ್ದರು.