ದೇಶದಾದ್ಯಂತ ಕೊರೊನಾ ಸಮಯದಲ್ಲಿ ಬಡವರ ಪಾಲಿನ ಆಪತ್ಬಾಂಧವನೆಂದೇ ಖ್ಯಾತರಾಗಿರುವ ಸೋನು ಸೂದ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ತಮ್ಮ ತಮ್ಮ ಮನೆಗಳಿಗೆ ತೆರಳಲಾಗದೇ ಇತ್ತ ದಿನನಿತ್ಯದ ಅಗತ್ಯತೆಗಳಿಗೂ ಹಣವಿಲ್ಲದೇ ಪರದಾಡುತ್ತಿದ್ದಂತಹಾ ವಲಸೆ ಕಾರ್ಮಿಕರಿಗೆ ನೆರವಾಗಿ ರಿಯಲ್ ಹೀರೊ ಎನಿಸಿಕೊಂಡಂತಹಾ ನಟ ಸೋನು ಸೂದ್ ಇದೀಗ ವೈದ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೋನು ಸೂದ್ ಮಾಡಿರುವ ಆ ಒಂದು ಟ್ವೀಟ್ ಇದೀಗ ಅನೇಕ ವೈದ್ಯರನ್ನು ಕೆರಳಿಸಿದೆ. ಹಾಗಾದ್ರೆ ಸೋನು ಸೂದ್ ಮಾಡಿರುವ ಟ್ವೀಟ್ನಲ್ಲಿ ಏನಿದೆ..? ಈ ಸ್ಟೋರಿ ನೋಡಿ
ಭಾರತದಲ್ಲಿ ಕೆಲವು ಔಷಧಗಳ ಅಲಭ್ಯತೆಯಿದೆ. ಈ ಕ್ಲಿಷ್ಟಕರ ಸಂದರ್ಭದಲ್ಲಿ ಕೆಲವು ಔಷಧಿಗಳು ಲಭ್ಯವಾಗುತ್ತಿಲ್ಲ. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ತಮ್ಮ ಟ್ರಸ್ಟ್ ಮೂಲಕ ಜನಸಾಮಾನ್ಯರಿಗೆ ನೆರವಾಗುತ್ತಿರುವ ಸೋನು ಸೂದ್ ಈಗ ಔಷಧದ ಅಲಭ್ಯತೆಯ ಬಗ್ಗೆ ದನಿಯೆತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸೋನು ಸೂದ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ‘ಒಂದು ಸರಳ ಪ್ರಶ್ನೆ: ಎಲ್ಲರಿಗೂ ನಿರ್ದಿಷ್ಟವಾದ ಇಂಜೆಕ್ಷನ್ ಎಲ್ಲಿಯೂ ಲಭ್ಯವಿಲ್ಲ ಎಂದು ತಿಳಿದಾಗ, ಪ್ರತಿಯೊಬ್ಬ ವೈದ್ಯರು ಆ ಚುಚ್ಚುಮದ್ದನ್ನು ಮಾತ್ರ ಏಕೆ ಶಿಫಾರಸು ಮಾಡುತ್ತಾರೆ? ಆಸ್ಪತ್ರೆಗಳು ಆ ಔಷಧಿಯನ್ನು ಪಡೆಯಲು ಸಾಧ್ಯವಾಗದಿದ್ದಾಗ ಸಾಮಾನ್ಯ ಮನುಷ್ಯನಿಗೆ ಹೇಗೆ ಸಿಗುತ್ತದೆ? ಆ ಔಷಧಿಯ ಬದಲಿಯನ್ನು ಏಕೆ ಬಳಸಬಾರದು ಮತ್ತು ಜೀವವನ್ನು ಉಳಿಸಲು ಸಾಧ್ಯವಿಲ್ಲವೇ? ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.
ಆದರೆ ಸೋನು ಸೂದ್ ಮಾಡಿರುವ ಈ ಒಂದು ಟ್ವೀಟ್ ವೈದ್ಯರನ್ನು ಕೆರಳಿಸಿದೆ. ವೈದ್ಯಕೀಯ ಕ್ಷೇತ್ರದ ಬಗ್ಗೆ ಸರಿಯಾದ ಜ್ಞಾನವಿಲ್ಲದ ಸೋನು ಸೂದ್ ಈ ರೀತಿಯಾಗಿ ಟ್ವೀಟ್ ಮಾಡುವುದು ಎಷ್ಟು ಸರಿ..? ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಮಾಡುವ ಇಂತಹಾ ಹೇಳಿಕೆಗಳಿಂದ ಸೋನು ಸೂದ್ ದೂರವಿರುವುದು ಒಳ್ಳೆಯದು ಎಂದು ಹಲವು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಡಾ ಸುಷ್ಮಾ ಶಲ್ಲಾಕೌಲ್ ಎಂಬುವವರು ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದು, ನಿಮ್ಮಂತಹಾ ಬುದ್ಧಿವಂತ ಜನರು ಇದಕ್ಕಾಗಿಯೆ ಡಾಕ್ಟರ್ ಆಗಿಲ್ಲ ನೋಡಿ.. ಕೆಲವೊಂದು ಔಷಧಗಳಿಗೆ ಬದಲಿ ಔಷಧಗಳಿರುವುದಿಲ್ಲ. ನಿಮ್ಮ ಮೆದುಳಲ್ಲಿ ಸ್ವಲ್ಪ ಬುದ್ದಿ ತುಂಬಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಅರುಣ್ ರಾಜ ಎನ್ನುವವವರೂ ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದು, ಕೆಲವೊಂದು ಔಷಧಗಳಿಗೆ ಬದಲಿ ಔಷಧಗಳಿರುವುದಿಲ್ಲ. ಆದರೂ ಎಲ್ಲೂ ದೊರಕದ ಮೆಡಿಸಿನ್ಗಳನ್ನು ನೀವು ಹೇಗೆ ತರಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಒಟ್ಟಿನಲ್ಲಿ ಸೋನು ಸೂದ್ ಮಾಡಿರುವ ಆ ಒಂದು ಟ್ವೀಟ್ ವೈದ್ಯಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿರುವುದಂತೂ ಸುಳ್ಳಲ್ಲ. ಇನ್ನು ಸೋನು ಸೂದ್ ವಿರುದ್ದ ವೈದ್ಯರು ಆಕ್ರೋಶ ಹೊರಹಾಕಿದ್ದು, ಈ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.