Corona Virus: ಸೋಂಕಿತರು ಇನ್ಮೇಲೆ ಹೋಮ್ ಐಸೋಲೇಷನ್​ಲ್ಲಿ ಇರುವಂತಿಲ್ಲ, ಕೋವಿಡ್ ಕೇರ್ ಸೆಂಟರ್ ಚಿಕಿತ್ಸೆ ಕಡ್ಡಾಯ: ಆರೋಗ್ಯ ಸಚಿವ ಡಾ ಕೆ ಸುಧಾಕರ್

ಗದಗ : Corona ಸೋಂಕಿತರು ಇನ್ನು ಮುಂದೆ Home Isolation ನಲ್ಲಿ ಇರುವಂತಿಲ್ಲ. ಅವರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯಬೇಕು. ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ. ಗದಗ ನಗರದ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿತರ ಸ್ವ್ಯಾಬ್ ಪರೀಕ್ಷೆ ವರದಿ 24 ರಿಂದ 36 ಗಂಟೆಯ ಒಳಗಾಗಿ ಸಿಗುವಂತೆ ಕ್ರಮ ವಹಿಸಲಾಗುತ್ತಿದೆ. ಹೀಗಾಗಿ ಇನ್ನು ಮುಂದೆ ಸೋಂಕಿತರು ಕಡ್ಡಾಯವಾಗಿ ಸರ್ಕಾರದ ಕೋವಿಡ್ ಕೇರ್ ಸೆಂಟರ್ ನಲ್ಲಿ ಕ್ವಾರಂಟೈನ್ ಆಗಬೇಕು ಎಂದು ತಿಳಿಸಿದ್ದಾರೆ.ಕೇಂದ್ರದಿಂದ ಈ ಮೊದಲು ರಾಜ್ಯಕ್ಕೆ 230 ಟನ್ ಆಕ್ಸಿಜನ್ ಹಂಚಿಕೆಯಾಗಿತ್ತು. ನಂತರ 1,050 ಟನ್ ಹಂಚಿಕೆಯಾಗಿರುವ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪಾತ್ರವಿದೆ. ರಾಜ್ಯದಲ್ಲಿ ಮೊದಲು 4,500 ಟನ್ ಆಕ್ಸಿಜನ್ ಮಾತ್ರ ಉತ್ಪಾದನೆ ಆಗುತ್ತಿತ್ತು. ಈಗ 10 ಸಾವಿರ ಟನ್ ಉತ್ಪಾದನೆ ಆಗುತ್ತಿದೆ. ಇದರ ಹಿಂದೆ ಪ್ರಧಾನಿ ಅವರ ದೂರದೃಷ್ಟಿ ಇದೆ ಎಂದು ಹೇಳಿದ್ದಾರೆ.

ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 50 ಆಕ್ಸಿಜನೇಟೆಡ್ ಬೆಡ್ ಹಾಗೂ ರಾಜ್ಯದಲ್ಲಿ 2 ಸಾವಿರದಿಂದ 35 ಸಾವಿರಕ್ಕೆ ಆಕ್ಸಿಜನೇಟೆಡ್ ಬೆಡ್ ಹೆಚ್ಚಳ ಮಾಡಲಾಗಿದೆ. ಆರೋಗ್ಯ ಸೇವೆಯಲ್ಲಿ ಕರ್ನಾಟಕ ನಂ. 1 ಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ತಿಳಿಸಿರುವುದು ಆರೋಗ್ಯ ಕ್ಷೇತ್ರದ ಕೆಲಸಗಳು ಉತ್ತಮವಾಗಿವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಲಸಿಕೆ ಹಾಕುವಲ್ಲಿಯೂ ರಾಜ್ಯ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ 1.20 ಕೋಟಿ ಜನರಿಗೆ ಲಸಿಕೆ ಕೊಡಲಾಗಿದೆ. 2 ಕೋಟಿ ಲಸಿಕೆ ಪಡೆಯಲು ಜಾಗತಿಕ ಟೆಂಡರ್ ಕರೆಯಲಾಗಿದೆ. ಕೇಂದ್ರ ಸರ್ಕಾರ 1.15 ಕೋಟಿ ಲಸಿಕೆಗಳನ್ನು ಉಚಿತವಾಗಿ ಕೊಟ್ಟಿದೆ. ಆದ್ಯತೆ ಮೇರೆಗೆ ಲಸಿಕೆ ಹಾಕಲಾಗುತ್ತಿದೆ ಎಂದು ತಿಳಿಸಿದರು.

ಕೊರೊನಾ ಸೋಂಕು ನಿಧಾನಕ್ಕೆ ನಿಯಂತ್ರಣಕ್ಕೆ ಬರುತ್ತಿದೆ. ಇಂದು ರಾಜ್ಯದಲ್ಲಿ 31 ಸಾವಿರ ಸಕ್ರಿಯ ಪ್ರಕರಣಗಳು ಪತ್ತೆಯಾದರೆ, 61 ಸಾವಿರ ಜನ ಸೋಂಕಿನಿಂದ ಗುಣಮುಖರಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಲಾಕ್ ಡೌನ್ ಸಹ ಕೊರೊನಾ ನಿಯಂತ್ರಣಕ್ಕೆ ಪೂರಕವಾಗಿದೆ ಎಂದು ತಿಳಿಸಿದರು. ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ಸ್ಥಿತಿಗತಿ ಅರಿಯಲು ಜಿಲ್ಲಾ ಪ್ರವಾಸ ಮಾಡಲಾಗುತ್ತಿದೆ. ಉತ್ತರ ಕರ್ನಾಟಕದ ವಿಶೇಷವಾಗಿ ಗದಗ ಜಿಲ್ಲೆಯಲ್ಲಿ ವೈದ್ಯರ ಕೊರತೆಯಿದೆ. ಜಿಲ್ಲೆಯ ಆಧಾರ ಸ್ತಂಭವಾಗಿರುವ ಜಿಲ್ಲಾ ಆಸ್ಪತ್ರೆಯಲ್ಲಿ 75 ಜನ ವೈದ್ಯರ ಕೊರತೆಯಿದೆ.

ತಾಲೂಕು ಆಸ್ಪತ್ರೆಯಲ್ಲಿ ಶೇ. 60-70 ಜನ ತಜ್ಞ ವೈದ್ಯರ ಹುದ್ದೆ ಖಾಲಿಯಿದೆ. ಮುಂದಿನ ಒಂದು ವಾರದಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆ ಭರ್ತಿ ಮಾಡಲಾಗುವುದು. ಅದೇ ರೀತಿ ಎರಡು ವಾರದಲ್ಲಿ ಜಿಮ್ಸ್ ಆಸ್ಪತ್ರೆಯ ಹುದ್ದೆ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು. ಜಿಮ್ಸ್ ಆಸ್ಪತ್ರೆಯ ಹೊಸ ಕಟ್ಟಡ ಕಾಮಗಾರಿ ನಿಧಾನವಾಗಿದೆ. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಬೆಂಗಳೂರಿಗೆ ಹೋದ ನಂತರ ವಿಡಿಯೋ ಕಾನರೆನ್ಸ್ ಮೂಲಕ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಆಸ್ಪತ್ರೆಯಲ್ಲಿ ಜನಸೇವೆಗೆ ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ದೂರುಗಳ ಬಂದಿವೆ. ಡಿಎಚ್‍ ಒ ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಸೂಚಿಸಲಾಗಿದೆ. ತಾಲೂಕು ಆರೋಗ್ಯಾಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದಾಗ ಮಾತ್ರ ಜನಸಾಮಾನ್ಯರಿಗೆ ಆರೋಗ್ಯ ಸೇವೆ ತಲುಪಲು ಸಾಧ್ಯ. ಈ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಸಹ ಉತ್ತಮವಾಗಿ ಕೆಲಸ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದರಾದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡರ, ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ. ಪಾಟೀಲ, ಶಾಸಕ ರಾಮಣ್ಣ ಲಮಾಣಿ, ವಿಪ ಸದಸ್ಯ ಎಸ್.ವಿ. ಸಂಕನೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *