ATM ವಾಹನ ಚಾಲಕನ ಕೊಂದು 75 ಲಕ್ಷ ರೂ.ಗಳೊಂದಿಗೆ ಪರಾರಿಯಾಗಿದ್ದ 4 ಮಂದಿ ಅಂದರ್..!

ಬೆಂಗಳೂರು,ಮೇ.22-ಎಟಿಎಂಗೆ ಹಣ ತುಂಬಿಸುವ ವಾಹನದ ಚಾಲಕನನ್ನು ಕೊಲೆ ಮಾಡಿ ಶವವನ್ನು ಸಕಲೇಶಪುರದ ಘಾಟ್‍ನಲ್ಲಿ ಎಸೆದು 75 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಗೋವಿಂದಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೆ.ಆರ್.ನಗರದ ಅನುವಿನ ಕಟ್ಟೆ ಗ್ರಾಮದ ಕುಮಾರ್(23), ಮಂಡಿಗಾನ್‍ಹಳ್ಳಿಯ ಪ್ರಸನ್ನ(31), ಚೆಟ್ಟಮಗೆರೆ ಗ್ರಾಮದ ಮಧುಸೂದನ್(23) ಹಾಗೂ ಆಂಧ್ರಪ್ರದೇಶದ ಮಡಕಸಿರಾದ ಮಹೇಶ್(22) ಬಂಧಿತ ಆರೋಪಿಗಳು.

ಆರೋಪಿಗಳು ಕಳೆದ 2018ರಲ್ಲಿ ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಾವಾರ ರಸ್ತೆಯಲ್ಲಿರುವ ಎಕ್ಸಿಸ್ ಬ್ಯಾಂಕ್‍ಗೆನ ಎಟಿಎಂಗೆ ಹಣ ತುಂಬಲು ತೆರಳಿದ್ದ ವಾಹನದ ಚಾಲಕ ಅಬ್ದುಲ್ ಶಾಹೀದ್ ಹಾಗೂ 75 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದರು.

ಈ ಕುರಿತಂತೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಬಂಧನಕ್ಕಾಗಿ ಪೂರ್ವ ವಿಭಾಗದ ಡಿಸಿಪಿ ಅವರು ಗೋವಿಂದಪುರ ಠಾಣೆಯ ಇನ್ಸ್‍ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ರಚಿಸಿದ್ದರು. ಕಾರ್ಯಚರಣೆಗೆ ಇಳಿದ ಪ್ರಕಾಶ್ ಅವರು ಸಿಸಿಟಿವಿ ಮಾಹಿತಿ ಹಾಗೂ ಬಾತ್ಮಿದಾರ ನೀಡಿದ ಸುಳಿವಿನ ಮೇರೆಗೆ ಮೊದಲ ಆರೋಪಿ ಕುಮಾರ್‍ನನ್ನು ಬಂಧಿಸಿ ತೀವ್ರ ವಿಚಾರಣಗೆ ಒಳಪಡಿಸಿದ್ದರು.

ಆತ ನೀಡಿದ ಮಾಹಿತಿ ಮೇರೆಗೆ ತಲೆಮರೆಸಿಕೊಂಡಿದ್ದ ಉಳಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಎರಡು ಕಾರುಗಳು, ಮೂರು ದ್ವಿಚಕ್ರ ವಾಹನಗಳು, 3.5 ಲಕ್ಷ ನಗದು, 122 ಗ್ರಾಂ ಚಿನ್ನಾಭರಣ ಸೇರಿದಂತೆ 15 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಏನೀದು ಪ್ರಕರಣ: ಆರೋಪಿಗಳಾದ ಪ್ರಸನ್ನ ಮತ್ತು ಕುಮಾರ್ ಅವರುಗಳು ಎಟಿಎಂಗಳಿಗೆ ಹಣ ತುಂಬುವ ಸೇಪ್‍ಗಾರ್ಡ್ ರೈಡರ್ಸ್ ಸಂಸ್ಥೆಯ ವಾಹನಗಳ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಕೆಲಸ ಬಿಟ್ಟು ಲಕ್ಷ ಲಕ್ಷ ಹಣ ದೋಚಲು ಸಂಚು ರೂಪಿಸಿದ್ದರು.

2018 ರಲ್ಲಿ ನಾಗವಾರ ರಸ್ತೆಯ ಎಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬಲು ಹೋಗಿದ್ದ ವಾಹನದ ಚಾಲಕ ಅಬ್ದುಲ್ ಶಾಹಿದ್‍ಗೆ ಹೆಚ್ಚಿನ ಹಣ ನೀಡುವ ಆಮೀಷ ಒಡ್ಡಿ ಸೆಕ್ಯೂರಿಟಿ ಗಾರ್ಡ್‍ಗಳು ಎಟಿಎಂಗೆ ಹಣ ತುಂಬುತ್ತಿದ್ದಾಗ ಹಣ ತುಂಬುವ ವಾಹನದೊಂದಿಗೆ ಪರಾರಿಯಾಗಿದ್ದರು.

ವಾಹನದಲ್ಲಿದ್ದ 75 ಲಕ್ಷ ಹಣದೊಂದಿಗೆ ಸಕಲೇಶಪುರದತ್ತ ತೆರಳುತ್ತಿದ್ದಾಗ ಚಾಲಕ ಅಬ್ದುಲ್ ನನಗೆ ಭಯವಾಗುತ್ತಿದೆ. ಹಣ ಬೇಡ ನನ್ನನ್ನು ಇಲ್ಲಿಯೇ ಬಿಟ್ಟುಬಿಡಿ ಎಂದು ಗೊಗರೆದಾಗ ಆತನನ್ನು ಹಾಗೆ ಬಿಟ್ಟರೆ ನಮಗೆ ಉಳಿಗಾಲವಿಲ್ಲ ಎಂದು ಭಾವಿಸಿ ಆತನನ್ನು ಕೊಲೆ ಮಾಡಿ ಶವವನ್ನು ಸಕಲೇಶಪುರದ ಬ್ಯೂಟಿ ಸ್ಪಾಟ್ ಘಾಟಿನಲ್ಲಿ ಬಿಸಾಡಿ ಪರಾರಿಯಾಗಿದ್ದರು. ಈ ಕುರಿತಂತೆ ಸಕಲೇಶಪುರ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿತ್ತು.

ಅಬ್ದುಲ್‍ನನ್ನು ಕೊಲೆ ಮಾಡಿದ ನಂತರ ಶ್ರೀರಂಗಪಟ್ಟಣದ ಲಾಡ್ಜ್‍ನಲ್ಲಿ ಆರೋಪಿಗಳು ಕದ್ದ ಹಣವನ್ನು ಹಂಚಿಕೊಂಡಿರುತ್ತಾರೆ. ಕ್ಲಿಷ್ಟವಾಗಿದ್ದ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಇನ್ಸ್‍ಪೆಕ್ಟರ್ ಪ್ರಕಾಶ್ ಮತ್ತವರ ಸಿಬ್ಬಂದಿಗಳ ಕಾರ್ಯಾಚರಣೆಯನ್ನು ಡಿಸಿಪಿ ಡಾ.ಶರಣಪ್ಪ ಮತ್ತಿತರ ಹಿರಿಯ ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *