ದಲಿತ ಯುವಕನಿಗೆ ಮೂತ್ರ ಕುಡಿಸಿದ್ದ ಪೋಲಿಸ್ ಮೇಲೆ FIR ದಾಖಲು !
ಚಿಕ್ಕಮಗಳೂರು: ಇದೊಂದು ಅಮಾನವೀಯ ಘಟನೆಗೆ ನ್ಯಾಯ ಸಿಗಲು ಸಾಮಾಜಿಕ ಜಾಲತಾಣಗಳೇ ದೊಡ್ಡ ಮಟ್ಟಿಗೆ ಕೆಲಸ ಮಾಡಿದಂತೆ ಕಾಣುತ್ತದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡಿನ ಪೋಲಿಸ್ ಠಾಣೆಯಲ್ಲಿ ದಲಿತ ಯುವಕನೊಬ್ಬನಿಗೆ ಪಿಎಸ್ಐ ಅರ್ಜುನ್ ಮೂತ್ರ ಕುಡಿಸಿದ್ದ ಆರೋಪದ ತನಿಖೆ ನಡೆದಿದ್ದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ. ಡಿವೈಎಸ್ಪಿ ಡಿ ಟಿ ಪ್ರಭು ತನಿಖೆ ನಡೆಸಿ ನೀಡಿರುವ ವರದಿಯ ಆಧಾರದ ಮೇಲೆ ಆರೋಪಿ ಪಿಎಸ್ಐ ಮೇಲೆ FIR ದಾಖಲಿಸಲಾಗಿದೆ.
ಪ್ರಕರಣದ ಹಿನ್ನೆಲೆ : ಕಿರುಗುಂದದ ಮಹಿಳೆಯೊಬ್ಬರು ಕಾಣೆಯಾದ ಪ್ರಕರಣದಲ್ಲಿ ಬೆಟ್ಟಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ದಿನಗೂಲಿ ನೌಕರನಾಗಿರುವ ಇದೇ ಗ್ರಾಮದ ಕೆ ಎಲ್ ಪುನೀತ್‌ನನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ವಿಚಾರಣೆ ನೆಪದಲ್ಲಿ ತನ್ನ ಮೇಲೆ ಪೋಲೀಸರು ಬಹಳ ಅಮಾನವೀಯ ವರ್ತನೆ ತೋರಿದ್ದಾರೆ ಎಂದು ಪುನೀತ್ ಆರೋಪಿಸಿದ್ದರು. ಠಾಣೆಯಲ್ಲಿ ತಲೆಕೆಳಗಾಗಿ ಕಟ್ಟಿ ತೀವ್ರ ಹಲ್ಲೆ ನಡೆಸಿದ್ದಲ್ಲದೆ ಕಳ್ಳತನದ ಆರೋಪದಲ್ಲಿ ಕರೆತಂದಿದ್ದ ಚೇತನ್ ಎಂಬಾತನಿಂದ ಮೂತ್ರ ಮಾಡಿಸಿ ಕುಡಿಸಿದ್ದಾಗಿ ಪುನೀತ್ ಆರೋಪಿಸಿದ್ದ. ತನ್ನನ್ನು ಪಿಎಸೈ ಅರ್ಜುನ್ ಅವಾಚ್ಯ ಶಬ್ದಗಳಿಂದ ನಿಂದಿಸಿ ತೀವ್ರ ಹಲ್ಲೆ ಮಾಡಿದ್ದರು. ಇದರಿಂದ ತಾನು ನಿತ್ರಾಣಗೊಂಡಿದ್ದೆ.
ಕುಡಿಯಲು ನೀರು ಕೇಳಿದಾಗ ಅಲ್ಲೇ ಇದ್ದ ಬಾಟಲಿಯಿಂದ ಎರಡು ಹನಿ ನೀರು ಹಾಕಿದ್ದರು. ಪುನಃ ಹಲ್ಲೆ ಮಾಡಿದ ನಂತರ ತನಗೆ ವಿಪರೀತ ಬಾಯಾರಿಕೆಯಾಗುತ್ತಿದ್ದು ನೀರು ಬೇಕೇ ಬೇಕು ಎಂದು ಅಂಗಾಲಾಚಿದ್ದೆ. ಆಗ ಚೇತನ್ ಎಂಬುವನನ್ನು ಕರೆದ ಪಿಎಸೈ ಅರ್ಜುನ್, ಆತನ ಜಿಪ್ ಬಿಚ್ಚಿಸಿ ಬಾಯಿಗೆ ಮೂತ್ರ ಮಾಡಿಸಿದ್ದಾಗಿ ಪುನೀತ್ ಆರೋಪಿಸಿದ್ದಾರೆ. ಈ ಎಲ್ಲಾ ವಿವರಗಳನ್ನು ಆತ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದು ವಿವರಿಸಿದ್ದಾರೆ.
ಮೂತ್ರ ಕುಡಿಸಿದ ಆರೋಪ ಕೇಳಿಬರುತ್ತಿದ್ದಂತೆ ಪಿಎಸ್ಐ ಅರ್ಜುನ್ ಹೊನಕೇರಿಯನ್ನು ಎಸ್ಪಿ ಕಚೇರಿಗೆ ಒಒಡಿ ಮೇಲೆ ವರ್ಗಾವಣೆ ಮಾಡಲಾಗಿದೆ. ಆದರೆ, ಆತನನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ. ಇನ್ನು ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು ವಾರಗಳೇ ಕಳೆದರೂ ಕನಿಷ್ಟ ಎನ್‌ಸಿಆರ್‌ನ್ನೂ ದಾಖಲಿಸದ ಪೊಲೀಸರ ನಡೆ ಕಂಡು ಜಿಲ್ಲೆಯ ದಲಿತ ಸಂಘಟನೆಗಳು ಸೇರಿದಂತೆ ಪ್ರಜ್ಞಾವಂತ ನಾಗರಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಕರಣ ರಾಜ್ಯದಾದ್ಯಂತ ಭಾರೀ ಚರ್ಚೆಯಲ್ಲಿರುವ ಹಿನ್ನೆಲೆಯಲ್ಲಿ ಮೂತ್ರ ಕುಡಿಸಿ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಪಿಎಸ್‌ಐ ಅರ್ಜುನ್ ಹೊನಕೇರಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ
ಪ್ರಕರಣದ ತನಿಖೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿವೈಎಸ್ಪಿ ಅವರನ್ನು ನೇಮಕ ಮಾಡಿದ್ದರು. ಪ್ರಾಥಮಿಕ ವರದಿ ಸಲ್ಲಿಕೆಯಾದ ಬೆನ್ನಲ್ಲೇ ಪಿಎಸ್ಐ ಅರ್ಜುನ್ ವಿರುದ್ಧ IPC 342, 323, 504, 506, 330, 348 ಹಾಗೂ ದಲಿತ ದೌರ್ಜನ್ಯ ಕಾಯಿದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.