HD Kumaraswamy: ನನ್ನಿಂದ ಯಾವುದೇ ಕೆಲಸ ಆಗಬೇಕಿದ್ದರೂ ಸರಿ, ಅಧಿಕಾರಿಗಳು ನನಗೆ ನೇರವಾಗಿ ಕರೆ ಮಾಡಿ; ಎಚ್​.ಡಿ.ಕುಮಾರಸ್ವಾಮಿ ಸೂಚನೆ

ರಾಮನಗರ(ಮೇ 23): ರಾಮನಗರ ಜಿಲ್ಲೆಯ ಕೋವಿಡ್‌ ಸ್ಥಿತಿಗತಿಗಳ ಕುರಿತು ತಹಶೀಲ್ದಾರ್‌ಗಳೊಂದಿಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ  ವರ್ಚುವಲ್‌ ಸಭೆ ನಡೆಸಿದರು. ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ, ಮಾಗಡಿ ಶಾಸಕ ಎ. ಮಂಜು, ರಾಮನಗರ ಜಿಲ್ಲೆಯ ನಾಲ್ಕು ತಾಲೂಕುಗಳ ತಹಶೀಲ್ದಾರ್‌ಗಳು ವರ್ಚುವಲ್‌ ಸಭೆಯಲ್ಲಿ ಭಾಗವಹಿಸಿದರು. ತಹಶೀಲ್ದಾರ್‌ಗಳ ಜೊತೆಯಲ್ಲಿ ಕುಮಾರಸ್ವಾಮಿ ಮಾತುಕತೆ ನಡೆಸಿದರು. ಶಾಸಕರೂ ತಮ್ಮ ಕ್ಷೇತ್ರಗಳ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದರು.

ಸಮರ್ಪಕ ಪರೀಕ್ಷೆ, ಸೂಕ್ತ ಚಿಕಿತ್ಸೆ, ಆಸ್ಪತ್ರೆಗಳಲ್ಲಿ ಶುಚಿತ್ವ ಕಾಪಾಡುವಂತೆ ಕುಮಾರಸ್ವಾಮಿ ಸಲಹೆ ನೀಡಿದರು. ಆರೈಕೆ ಕೇಂದ್ರಗಳಲ್ಲಿ ಆಹಾರಕ್ಕೆ ಯಾವುದೇ ತೊಂದರೆಯಾಗದಂತೆ ಗಮನಹರಿಸುವಂತೆ ಸೂಚಿಸಿದರು.

ರಾಮನಗರ ಕ್ಷೇತ್ರಕ್ಕೆ ಎರಡು ಆಂಬ್ಯುಲೆನ್ಸ್‌

ರಾಮನಗರದಲ್ಲಿ ಆಂಬ್ಯುಲೆನ್ಸ್‌ ಕೊರತೆ ಇರುವುದಾಗಿ ತಹಶೀಲ್ದಾರ್‌ ಹೇಳಿದರು. ಸೋಮವಾರದ ಒಳಗಾಗಿ ಆಂಬ್ಯುಲೆನ್ಸ್‌ ಒದಗಿಸುವುದಾಗಿ ಕುಮಾರಸ್ವಾಮಿ ಕ್ಷಣದಲ್ಲೇ ತಿಳಿಸಿದರು. ತಕ್ಷಣಕ್ಕೆ ಒಂದು ಆಂಬ್ಯುಲೆನ್ಸ್‌ನ ಅಗತ್ಯವಿರುವುದಾಗಿ ತಹಶೀಲ್ದಾರ್‌ ಹೇಳಿದರು. ಎರಡು ಆಂಬ್ಯುಲೆನ್ಸ್‌ಗಳನ್ನು ನೀಡುವುದಾಗಿ ಎಚ್‌ಡಿಕೆ ತಿಳಿಸಿದರು.

ಬ್ಲ್ಯಾಕ್​ ‌ ಫಂಗಸ್‌ ನಿಭಾಯಿಸಲು ಸೂಚಿಸಿದ ಅನಿತಾ ಕುಮಾರಸ್ವಾಮಿ

ಜಿಲ್ಲೆಯಲ್ಲಿ ಬ್ಲ್ಯಾಕ್​​‌ ಫಂಗಸ್‌ ರೋಗಕ್ಕೆ ಎಷ್ಟು ಮಂದಿ ಗುರಿಯಾಗಿದ್ದಾರೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತಹಶೀಲ್ದಾರ್‌ಗಳಿಂದ ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಐದು ಮಂದಿ ಸೋಂಕಿತರಿದ್ದು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿರುವುದಾಗಿ ಅಧಿಕಾರಿಗಳು ಹೇಳಿದರು. ಪೊಲೀಸರ ನೆರವಿನೊಂದಿಗೆ ಜಿಲ್ಲೆಯಲ್ಲಿ ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆಯೂ ಅನಿತಾ ಕುಮಾರಸ್ವಾಮಿ ಸಲಹೆ ನೀಡಿದರು.ಬ್ಲ್ಯಾಕ್‌ ಫಂಗಸ್‌ ಔಷಧ ತರಿಸಿಕೊಳ್ಳಲು ಸೂಚನೆ

ಜಿಲ್ಲೆಯಲ್ಲಿ ಬ್ಲ್ಯಾಕ್​‌ ಫಂಗಸ್‌ ಚಿಕಿತ್ಸೆಗೆ ಅಗತ್ಯವಿರುವ ಆಂಫೊಟೆರಿಸಿನ್ ಬಿ ಔಷಧದ ಕೊರತೆ ಇರುವುದಾಗಿ ಅಧಿಕಾರಿಗಳು ತಿಳಿಸಿದರು. ಈ ವಿಚಾರವಾಗಿ ಸರ್ಕಾರದ ಮೇಲೆ ತಾವೂ ಒತ್ತಡ ಹೇರುತ್ತಿರುವುದಾಗಿ ಎಚ್‌ಡಿಕೆ ತಿಳಿಸಿದರು. ಅಲ್ಲದೆ, ಅಧಿಕಾರಿಗಳೂ ಒತ್ತಡ ಹಾಕಿ ಔಷಧ ತರಿಸಿಕೊಳ್ಳುವುದರ ಕಡೆಗೆ, ಅದನ್ನು ದಾಸ್ತಾನು ಮಾಡುವುದರ ಕಡೆ ಗಮನಹರಿಸಬೇಕಾಗಿ ತಿಳಿಸಿದರು.

ಪ್ರತ್ಯೇಕ ಆಂಬ್ಯುಲೆನ್ಸ್‌ ಬಳಸುವಂತೆ ಎ. ಮಂಜು ಸೂಚನೆ

ಕೋವಿಡ್‌ನಿಂದ ಗುಣಮುಖರಾಗುವ ಸೋಂಕಿತರನ್ನು ಅವರ ಮನೆಗಳಿಗೆ ಕಳುಹಿಸಲು ಪ್ರತ್ಯೇಕ ಆಂಬ್ಯುಲೆನ್ಸ್‌ ಬಳಸುವಂತೆ ಮಾಗಡಿ ಶಾಸಕ ಎ. ಮಂಜು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಒಟ್ಟಾರೆ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು ಆದಷ್ಟು ಜನರ ಹಿತಕ್ಕಾಗಿ ನಾವು ಕೆಲಸ ಮಾಡೋಣ ಎಂದು ಕುಮಾರಸ್ವಾಮಿ ತಿಳಿಸಿದರು. ಜೊತೆಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಆಗಬಾರದು, ಯಾರೇ ಆಗಲಿ ಸೋಂಕು ಕಂಡ ತಕ್ಷಣ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಎಂದು ಮನವಿ ಮಾಡಿದರು. ಇನ್ನು ನನ್ನಿಂದ ಯಾವುದೇ ಕೆಲಸ ಆಗಬೇಕಾದರೂ ಸರಿಯೇ ಅಧಿಕಾರಿಗಳು ನನಗೆ ನೇರವಾಗಿ ಕರೆ ಮಾಡಿ ತಿಳಿಸಿ, ನಾನು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆಂದು ತಿಳಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *