ರಾಸಲೀಲೆ ತಪ್ಪೋಪ್ಪಿಕೊಂಡ ಮಾಜಿ ಸಚಿವ ಜಾರಕಿಹೊಳಿ
ಬೆಂಗಳೂರು,ಮೇ.25-ರಾಸಲೀಲೆ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಯುವತಿ ಜತೆ ಇರುವುದು ತಾನೇ ಎಂದು ಎಸ್ಐಟಿ ತನಿಖಾಧಿಕಾರಿಗಳ ಮುಂದೆ ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ಬೆಳಕಿಗೆ ಬಂದ ಮೊದಲ ದಿನದಿಂದಲೂ ಸಿಡಿಯಲ್ಲಿ ಯುವತಿಯೊಂದಿಗೆ ಇರುವುದು ನಾನಲ್ಲ. ಯುವತಿ ಹಾಗೂ ಆಕೆಯ ಗ್ಯಾಂಗ್ ನನ್ನ ಫೋಟೋ ಬಳಸಿಕೊಂಡು ರಾಜಕೀಯ ಅರಾಜಕತೆ ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ ಮಾಜಿ ಸಚಿವರು ತಪ್ಪೋಪ್ಪಿಕೊಳ್ಳುವ ಮೂಲಕ ಯುವತಿ ಜತೆ ಇರುವುದು ತಾನೇ ಎಂದಿದ್ದಾರೆ.
ಇನ್ನೊಂದೆಡೆ ಸಿಡಿ ಯುವತಿ ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನ ಮೇಲೆ ಆತ್ಯಾಚಾರ ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಆಪಾದಿಸಿದ್ದರು. ಇಬ್ಬರ ಹೇಳಿಕೆ ದಾಖಲಿಸಿಕೊಂಡಿದ್ದ ಎಸ್ಐಟಿ ಅಧಿಕಾರಿಗಳು, ಕೊರೊನಾ ಹಿನ್ನೆಲೆ ತನಿಖೆಯನ್ನ ಮಂದಗತಿಯಲ್ಲಿ ನಡೆಸಿದ್ದರು.
ಯು-ಟರ್ನ್
ಪ್ರಕರಣದಲ್ಲಿ ತಮ್ಮ ಕುತ್ತಿಗೆ ಮೇಲೆ ಬರುತ್ತಿದೆ ಎಂದು ಸೂಕ್ಷ್ಮವಾಗಿ ಗ್ರಹಿಸಿದಂತಿರುವ ಮಾಜಿ ಸಚಿವರು, ಎಸ್ಐಟಿ ತನಿಖಾಧಿಕಾರಿಗಳ ಮುಂದೆ ತಮ್ಮ ಹೇಳಿಕೆ ಬದಲಾಯಿಸಿದ್ದಾರೆ ಎನ್ನಲಾಗುತ್ತಿದೆ.
ಯುವತಿಯೊಂದಿಗೆ ಸಿಡಿಯಲ್ಲಿ ಇರುವುದು ನಾನೇ. ಆ ಹುಡುಗಿ ಕೂಡ ನನಗೆ ಪರಿಚಯವಿದೆ. ಪ್ರಾಜೆಕ್ಟ್ ವರ್ಕ್ ಎಂದು ಯುವತಿ ನನ್ನ ಪರಿಚಯ ಮಾಡಿಕೊಂಡಿದ್ದಳು.
ಅವಳು ನನ್ನ ನಂಬರ್ ಪಡೆದು ಆಗಾಗ ಫೋನ್ ಮಾಡುತ್ತಿದ್ದಳು.ತುರ್ತು ಸಂದರ್ಭ ದಲ್ಲಿ ಆಕೆಯನ್ನು ನನ್ನ ಅಪಾರ್ಟ್ಮೆಂಟ್ಗೆ ಕರೆಸಿದ್ದೆ. ಈ ವೇಳೆ ಆಕೆಯ ಸಮ್ಮತಿಯೊಂದಿಗೆ ಅವಳ ಜೊತೆ ಸೇರಿದ್ದೆ. ನಾನು ಅತ್ಯಾಚಾರ ಮಾಡಿಲ್ಲ ಎಂದು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ವಿಡಿಯೋ ಹೇಗೆ ಮಾಡಿದರು ಎಂಬುವುದು ಗೊತ್ತಿಲ್ಲ. ನಾನು ಯುವತಿಗೆ ಯಾವುದೇ ಆಮಿಷವೊಡ್ಡಿಲ್ಲ ಎಂದು ತನಿಖಾಧಿಕಾರಿ ಎಸಿಪಿ ಕವಿತಾ ಮುಂದೆ ಜಾರಕಿಹೊಳಿ ತನ್ನ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.