ಬೆಂಗಳೂರಲ್ಲಿ ಸೂರ್ಯನ ಸುತ್ತಾ ಚಿನ್ನದುಂಗರ..! ಶುಭವೋ ? ಅಶುಭವೋ ? ಅಗಸದಲ್ಲಿ ಏನಿದು ಅಚ್ಚರಿ ?
ಬೆಂಗಳೂರಿನ ಹಲವೆಡೆ ಇಂದು ಜನರು ಆಕಾಶದತ್ತ ನೋಡಿ, ಸೂರ್ಯನ ಫೋಟೋ ತೆಗೆದು ಸೋಶಿಯಲ್ ಮೀಡಿಯಾಗೆ ಹಾಕಿ ಸಂಭ್ರಮಿಸುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ, ಸೂರ್ಯನ ಸುತ್ತ ವಿಶೇಷವಾಗಿ ಕಾಣಿಸಿಕೊಂಡಿರುವ ಹೊಳೆಯುವ ಉಂಗುರ. ಈ ವೃತ್ತಾಕಾರದ ಕಾಮನಬಿಲ್ಲಿಗೆ ಕಾರಣವೇನು ? ಇದು ಶುಭಸೂಚನೆಯೇ ? ಅಶುಭ ಸೂಚನೆಯೇ ? ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ.
ಆಕಾಶ ವೀಕ್ಷಣೆಯ ಹವ್ಯಾಸವುಳ್ಳವರಿಗೂ, ಫೋಟೋಗ್ರಫಿ ಹವ್ಯಾಸಿಗರಿಗೆ ಆಸಕ್ತರಿಗೆ ಇವತ್ತು ಹಬ್ಬ. ಸೂರ್ಯೋದಯ, ಸೂರ್ಯಾಸ್ತ ಫೋಟೋ ತೆಗೀತಾ ಇದ್ದವರು ಇವತ್ತು ಸೂರ್ಯ ನೆತ್ತಿಗೆ ಬರುವ ಸಮಯದಲ್ಲೂ ಫೋಟೋ ತೆಗೆಯುತ್ತಿದ್ದಾರೆ.
ಅಸಲಿಗೆ ಇದು ಸೂರ್ಯನ ಸುತ್ತ ಕಂಡು ಬರುವ ಅಪರೂಪದ 22° ಹ್ಯಾಲೋ. ಇದು ಇಂದು ಬೆಳಗ್ಗಿನಿಂದ ಗೋಚರವಾಗಿದ್ದು, ವೃತ್ತಾಕಾರದಲ್ಲಿ ಕಾಮನ ಬಿಲ್ಲು ಕೂಡ ಗಮನ ಸೆಳೆಯಿತು
ವೈಜ್ಞಾನಿಕವಾಗಿ ವಾತಾವರಣದಲ್ಲಿ ನೀರಿನ ಹನಿಗಳು ಜಾಸ್ತಿ ಇದ್ದರೆ ಬೆಳಕಿನ ಪ್ರತಿಫಲನ ಹಾಗೂ ವಕ್ರೀಭವನ ಆಗುವುದೇ ಕಾಮನಬಿಲ್ಲಿಗೆ ಕಾರಣವಾಗುತ್ತದೆಂದು ಹೇಳಲಾಗುತ್ತಿದೆ. ಸೂರ್ಯನ ಪ್ರಭಾ ವಲಯದಿಂದ ಕಿರಣಗಳು ಮಳೆ ಮೋಡವನ್ನು ಭೇದಿಸಿಕೊಂಡು ಭೂಮಿಗೆ ಬರುವಾಗ ಏಳು ಬಣ್ಣಗಳ ವೃತ್ತಾಕಾರ ಮೂಡುತ್ತದೆ. ಈ ಅಪರೂಪದ 22° ಹ್ಯಾಲೋ ವಿದ್ಯಮಾನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೋಡಗಳಲ್ಲಿರುವ ಮಂಜುಗಡ್ಡೆ ಹರಳುಗಳು ಸೂರ್ಯನಿಗೆ 22 ಡಿಗ್ರಿ ಅಥವಾ ಹೆಚ್ಚಿನ ಕೋನದಲ್ಲಿ ವಕ್ರೀಭವನಕ್ಕೀಡಾಗುತ್ತವೆ ಮತ್ತು ಸೂರ್ಯನ ಸುತ್ತ ವೃತ್ತಾಕಾರವಾಗಿ ಹರಡಿಕೊಳ್ಳುತ್ತವೆ. ಈ ಹರಳುಗಳ ಮೂಲಕ ಸೂರ್ಯನ ಬೆಳಕು ಹಾದುಹೋಗುವಾಗ, ಬಿಳಿಯ ಕಿರಣವು ಕಾಮನಬಿಲ್ಲಿನ ಏಳು ಬಣ್ಣಗಳಾಗಿ ಚದುರಿ, ಆಕರ್ಷಕ ಕಾಮನಬಿಲ್ಲು ಗೋಚರಿಸುತ್ತದೆ. ಇದು ತೀರಾ ಅಪರೂಪವೇನಲ್ಲ ಎನ್ನುತ್ತಾರೆ ಖಗೋಳಶಾಸ್ತ್ರಜ್ಞರು.