ಪತ್ರಕರ್ತರೊಬ್ಬರ ಮೊಬೈಲ್ ನಂಬರ್ ಕೊಟ್ಟ 17 ಸೋಂಕಿತರು ?
ಕಲಬುರಗಿ,ಮೇ.24:ಸೋಂಕಿತರು ತಮ್ಮ ಮೊಬೈಲ್ ಸಂಖ್ಯೆ ಬದಲಾಗಿ ಪತ್ರಕರ್ತರೊಬ್ಬರ ಮೊಬೈಲ್ ನಂಬರ್ ನೀಡಿರುವ ಪ್ರಕರಣ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಶಹಾಬಾದ್ ಪಟ್ಟಣದಲ್ಲಿ ವರದಿಯಾಗಿದೆ.
ಕೊರೋನಾ ತಪಾಸಣೆ ವೇಳೆ ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನೀಡಬೇಕಾಗಿರುವುದು ನಿಯಮ. ಆದಾಗ್ಯೂ, ಶಹಾಬಾದ್ ಪಟ್ಟಣದಲ್ಲಿ 17 ಜನರು ತಪಾಸಣೆ ವೇಳೆ ವರದಿಗಾರ ದಾಮೋಧರ್ ಭಟ್ಟ ಎಂಬುವವರ ಮೊಬೈಲ್ ಸಂಖ್ಯೆ ನೀಡಿದ್ದಾರೆ.
ಆರೋಗ್ಯ ಇಲಾಖೆ, ನಗರಸಭೆ ಸಿಬ್ಬಂದಿ ಪದೇ ಪದೇ ಕಾಲ್ ಮಾಡಿ ನೀವು ಹೋಮ್ ಐಸೋಲೇಷನ್‍ನಲ್ಲಿ ಇದ್ದೀರಾ, ಆರೋಗ್ಯದ ಸ್ಥಿಗತಿ ಹೇಗಿದೆ? ಎಂದೆಲ್ಲ ವಿಚಾರಿಸಿದ್ದಾರೆ.
ಇದರಿಂದ ರೋಸಿಹೋದ ದಾಮೋಧರ್ ಅವರು ವಿಚಾರಿಸಿದಾಗ ಅರೋಗ್ಯ ಇಲಾಖೆಯ ಆಪ್‍ದಲ್ಲಿ 17 ಜನರು ಇದೇ ಮೊಬೈಲ್ ನಂಬರ್ ಕೊಟ್ಟಿರುವುದು ಬಯಲಾಗಿದೆ.
ವಿಶೇಷ ಅಂದರೆ ಮೊಬೈಲ್ ನಂಬರ್ ಹೊಂದಿರುವ ಧಾಮೋದರ್ ಅವರಿಗೆ ಸೋಂಕು ಇಲ್ಲ. ಯಾವುದೇ ತಪಾಸಣೆಗೂ ಒಳಗಾಗಿಲ್ಲ. ಆದರೂ ಅವರ ಸಂಖ್ಯೆ ಹೋಗಿದ್ದಾದರೂ ಹೇಗೆ? ಎಂಬ ಪ್ರಶ್ನೆ ಉದ್ಭವಿಸಿದೆ.
17 ಜನ ಒಂದೇ ಮೊಬೈಲ್ ಸಂಖ್ಯೆ ಕೊಟ್ಟಿದ್ದಾದರೂ ಹೇಗೆ? ಓಟಿಪಿ ಪಡೆದಿದ್ದಾರೂ ಹೇಗೆ?, ಹೋಮ್ ಐಸೋಲೇಷನ್ ಇರುವವರಿಗೆ ಆರೋಗ್ಯ ಇಲಾಖೆ ನೀಡಬೇಕಾದ ಮೆಡಿಸಿನ್ ಕಿಟ್ ನೀಡಿದ್ದಾದರೂ ಹೇಗೆ? ಎಂಬ ಹತ್ತು ಹಲವು ಅನುಮಾನಗಳು ಕಾಡುತ್ತಿವೆ.
ಮೇಲ್ನೋಟಕ್ಕೆ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಕೈವಾಡ ಇದ್ದಂತೆ ಕಂಡುಬರುತ್ತದೆ. ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್ ಅವರನ್ನು ಕೇಳಿದರೆ, ತಾಲ್ಲೂಕು ಅಧಿಕಾರಿಗಳಿಗೆ ವರದಿ ನೀಡಲು ಸೂಚಿಸಲಾಗಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.