ಕಲಬುರಗಿ : ಲಾಕ್‍ಡೌನ್‍ನಲ್ಲಿ ಕಾರ್ಮಿಕರಿಗೆ ನೆರವಾಗಲು ಗುತ್ತಿಗೆದಾರರಿಂದ ವಾಹನಗಳ ಸೌಲಭ್ಯ
ಕಲಬುರಗಿ :ಕೋವಿಡ್ ಎರಡನೇ ಅಲೆಯ ಸೋಂಕು ನಿಯಂತ್ರಣಕ್ಕಾಗಿ ಜಾರಿಗೆ ತಂದ ಲಾಕ್‍ಡೌನ್‍ನಲ್ಲಿ ಸಂತ್ರಸ್ತ ಕಾರ್ಮಿಕರ ನೆರವಿಗಾಗಿ ಜಿಲ್ಲಾ ಕಾಂಟ್ರ್ಯಾಕ್ಟರ್ ಅಸೋಶಿಯೇಶನ್ ವತಿಯಿಂದ ಸೋಮವಾರ ಉಚಿತ ವಾಹನಗಳ ಸೇವೆಗೆ ಅಧ್ಯಕ್ಷ ಜಗನ್ನಾಥ್ ಬಿ. ಶೇಗಜಿ ಅವರು ಚಾಲನೆ ನೀಡಿದರು.
ಶೇಗಜಿ ಅವರು ಮಾತನಾಡಿ, ಕೋವಿಡ್-19 ನಿಯಮಗಳಂತೆ ಸಂಪೂರ್ಣ ಲಾಕ್‍ಡೌನ್ ಆಗಿದ್ದರಿಂದ ಜಿಲ್ಲೆಯಲ್ಲಿ ರಸ್ತೆ ಹಾಗೂ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಗುತ್ತಿಗೆದಾರರ ಪಾಲಿಗೆ ದೇವರಾಗಿರುವ ಮತ್ತು ತಾಯಿ ಬೇರಿನಂತಿರುವ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಕೆಲಸ, ಕಾರ್ಯಗಳಿಲ್ಲದೇ ದಿನನಿತ್ಯ ಹೊಟ್ಟೆಪಾಡಿಗಾಗಿ ಪರದಾಡುತ್ತಿದ್ದಾರೆ. ಅಂಥವರಿಗೆ ಈ ಸಂದರ್ಭದಲ್ಲಿ ಉದಾರವಾಗಿ ನೆರವು ನೀಡುವುದು ನಮ್ಮ ಅದ್ಯ ಕರ್ತವ್ಯವಾಗಿದೆ ಎಂದರು.
ಜಿಲ್ಲೆಯ ಎಲ್ಲ ಗುತ್ತಿಗೆದಾರರು ತಮ್ಮ ಕೆಲಸ, ಕಾರ್ಯಗಳಿಗೆ ಶ್ರಮಿಸುತ್ತಿರುವ ಕಾರ್ಮಿಕರಿಗೆ ಆಹಾರ ಧಾನ್ಯ ಹಾಗೂ ಹಣಕಾಸಿನ ನೆರವು ನೀಡಬೇಕು ಎಂದು ಕರೆ ನೀಡಿದ ಅವರು, ಅದಕ್ಕಾಗಿ ಗುತ್ತಿಗೆದಾರರ ಕಾರ್ಯನಿರ್ವಹಣೆಗಾಗಿ ಉಚಿತ ವಾಹನಗಳನ್ನು ಒದಗಿಸಲಾಗಿದೆ. ಇದರ ಸದುಪಯೋಗ ಪಡೆಯಬೇಕು ಎಂದು ಅವರು ಕೋರಿದರು.
ರಸ್ತೆ ಹಾಗೂ ಕಟ್ಟಡ ಕಾರ್ಮಿಕರಿಗೆ ಆಸ್ಪತ್ರೆಗೆ ಹಾಗೂ ಅವರು ಕೆಲಸ ಮಾಡುವ ಸ್ಥಳಗಳಿಗೆ ಓಡಾಡಲು ವಾಹನಗಳ ಬಳಕೆಯನ್ನು ಮಾಡಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಸೋಶಿಯೇಶನ್ ಉಪಾಧ್ಯಕ್ಷ ಎಸ್.ಎಸ್. ಮುಲಗೆ, ಮೋಹಸಿನ್ ಎಂ. ಪಟೇಲ್, ಪ್ರಧಾನ ಕಾರ್ಯದರ್ಶಿ ಚನ್ನಯ್ಯ ಮಠ್, ಎಂ.ಕೆ. ಪಾಟೀಲ್, ಸಂಜಯ್ ಆರ್.ಕೆ. ಮುಂತಾದವರು ಉಪಸ್ಥಿತರಿದ್ದರು.