ಹಣ ಕೊಟ್ಟು ಲಸಿಕೆ ಹಾಕಿಸಿಕೊಳ್ಳಿ.. ಖಾಸಗಿ ಆಸ್ಪತ್ರೆ ಪರ ಸಂಸದ ತೇಜಸ್ವಿ ಸೂರ್ಯ ಪ್ರಚಾರ; ಜನರಿಂದ ತರಾಟೆ!

ಬೆಂಗಳೂರು (ಮೇ 25); ಚಾಮರಾಜನಗರದಲ್ಲಿ ಆಕ್ಸಿಜನ್​ ಪೂರೈಕೆ ಇಲ್ಲದೆ 24 ಜನ ಕೊರೋನಾ ರೋಗಿಗಳು ಮೃತಪಟ್ಟ ಎರಡು ದಿನಗಳಲ್ಲೇ ಬೆಡ್​ ಬ್ಲಾಕಿಂಗ್ ದಂಧೆಯನ್ನು ಬಯಲಿಗೆ ಎಳೆದಿದ್ದವರು ಸಂಸದ ತೇಜಸ್ವಿ ಸೂರ್ಯ. ಹತ್ತಾರು ವಿಮರ್ಶೆಗಳ ನಡುವೆಯೂ ಅವರ ಕೆಲಸ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ನಡುವೆ ಕೋವಿಡ್​ ವಾರ್​ ರೂಮ್​ಗೆ ದಾಳಿ ಇಟ್ಟಿದ್ದ ಅವರು ಒಂದೇ ಸಮುದಾಯದ 16 ಜನರ ಹೆಸರನ್ನು ಉಲ್ಲೇಖಿಸಿ, “ಇದೇನು ಹಜ್ ಭವನವೇ?” ಎಂದು ಪ್ರಶ್ನೆ ಮಾಡಿದ್ದರು. ಅವರ ಈ ವರ್ತನೆ ಸಮಾಜದ ನಡುವೆ ಎರಡು ಕೋಮುಗಳ ನಡುವೆ ಕಂದಕ ಉಂಟು ಮಾಡುವ ಕೆಲಸ ಎಂಬ ಟೀಕೆಗೆ ಒಳಗಾಗಿತ್ತು. ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಸಂಸದನ ವರ್ತನೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಆನಂತರ ತೇಜಸ್ವಿ ಸೂರ್ಯ ವಿವಾದಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಿದ ಪ್ರಸಂಗವೂ ನಡೆದಿತ್ತು. ಆದರೆ, ಯುವ ಸಂಸದ ಇದೀಗ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಜನ ಉಚಿತ ಕೊರೋನಾ ಲಸಿಕೆಗೆ ಬೇಡಿಕೆ ಇಡುತ್ತಿದ್ದರೆ, ತೇಜಸ್ವಿ ಸೂರ್ಯ “ಹಣ ಕೊಟ್ಟು ಲಸಿಕೆ ಹಾಕಿಸಿಕೊಳ್ಳಿ” ಎಂದು ಖಾಸಗಿ ಆಸ್ಪತ್ರೆಯ ಪರ ಬಹಿರಂಗ ಪ್ರಚಾರ ಮಾಡುವ ಮೂಲಕ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ. 

ದೇಶದಲ್ಲಿ ಪ್ರಸ್ತುತ ಕೊರೋನಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಆದರೆ, 18 ವರ್ಷಕ್ಕೆ ಮೇಲ್ಪಟ್ಟ ಸುಮಾರು 80 ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡುವುದು ಸದ್ಯಕ್ಕಂತು ಆಗದ ಕೆಲಸ ಎಂಬಂತಾಗಿದೆ. ಲಸಿಕೆ ಕಾರ್ಯಕ್ರಮ ಎಲ್ಲಾ ರಾಜ್ಯದಲ್ಲೂ ಕುಂಟುತ್ತಾ ಸಾಗಿದೆ. ಲಸಿಕೆ ಲಭ್ಯವಿಲ್ಲದ ಬಗ್ಗೆ, ಪೂರೈಕೆ ಬೇಕು ಎಂದು ರಾಜ್ಯಗಳು ಕೇಂದ್ರವನ್ನು ಒತ್ತಾಯಿಸುತ್ತಿವೆ. ಇವುಗಳ ಮಧ್ಯೆ ಸಂಸದ ತೇಜಸ್ವಿ ಸೂರ್ಯ, ಖಾಸಗಿ ಆಸ್ಪತ್ರೆಯಲ್ಲಿ ಹಣ ನೀಡಿ ಲಸಿಕೆ ಪಡೆದುಕೊಳ್ಳಿ ಎಂದು ಪ್ರಚಾರ ನಡೆಸಿದ್ದಾರೆ. ಈ ಬ್ಯಾನರ್‌ಗಳು ಜಯನಗರದ ಮೈದಾನದಲ್ಲಿ ಹಾಕಲಾಗಿವೆ.

ರಾಜ್ಯದಲ್ಲಿ ಲಸಿಕೆ ರಾಜಕೀಯ ಮುಂದುವರೆದಿದ್ದು, ‘ತೇಜಸ್ವಿ ಸೂರ್ಯ ಕಚೇರಿಯಿಂದ ಬೆಂಬಲಿತವಾಗಿದೆ’ ಎಂಬ ಪೋಸ್ಟರ್ ಜಯನಗರದ ಬಿಬಿಎಂಪಿ ಕೇಂದ್ರದ ಪಕ್ಕದಲ್ಲಿ ಕಾಣಿಸಿಕೊಂಡಿವೆ. ಶಾಲಿನಿ ಮೈದಾನದಲ್ಲಿ ವಾಸವಿ ಆಸ್ಪತ್ರೆಯಲ್ಲಿ 900 ರೂಪಾಯಿಗೆ ಲಸಿಕೆ ನೀಡಲಾಗುತ್ತದೆ ಎಂಬ ಬ್ಯಾನರ್‌ಗಳು ಕಾಣಿಸಿಕೊಂಡಿವೆ. ಎಲ್ಲಾ ಬ್ಯಾನರ್‌ಗಳಲ್ಲಿಯೂ ಸಂಸದ ತೇಜಸ್ವಿ ಸೂರ್ಯ ಬೆಂಬಲಿತ ಎಂಬ ಬರಹ ಮತ್ತು ಅವರ ಫೋಟೋ ಹಾಕಲಾಗಿದೆ. ಈ ಪೋಸ್ಟರ್‌ಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಹಲವು ನೆಟ್ಟಿಗರು ತಮ್ಮ ಖಾತೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಇರುವ ಬ್ಯಾನರ್‌ಗಳನ್ನು ಹಂಚಿಕೊಂಡು, ಇಂತಹ ರಾಜಕಾರಣ ಬಿಡಿ, ಜನರು ಲಸಿಕೆ ಇಲ್ಲದೆ ಆತಂಕದಲ್ಲಿರುವಾಗ ಖಾಸಗಿ ಆಸ್ಪತ್ರೆಯ ಲಸಿಕೆ ಅಭಿಯಾನ ಹೇಗೆ ಬೆಂಬಲಿಸುತ್ತಿರಿ ಎಂದು ಪ್ರಶ್ನಿಸಿದ್ದಾರೆ.

ಭೂಷಣ್ ಎಂಬವರು ಈ ಬಗ್ಗೆ ಟ್ವೀಟ್ ಮೂಲಕ ಕಿಡಿಕಾರಿದ್ದು, “ಶಾಲಿನಿ ಮೈದಾನದಲ್ಲಿ ವಾಸವಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ 900 ರೂಪಾಯಿ ತೆಗೆದುಕೊಳ್ಳುವ ಮೂಲಕ ಲಸಿಕೆ ಹಾಕುತ್ತಾರೆ. ಸಂಪೂರ್ಣ ಕಾರ್ಯಕ್ರಮದ ಕ್ರೆಡಿಟ್ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೆಗೆದುಕೊಳ್ಳುತ್ತಾರೆ. ಬಿಬಿಎಂಪಿಯಲ್ಲಿ ಲಸಿಕೆ ಇಲ್ಲದಿದ್ದಾಗ ಖಾಸಗಿ ಆಸ್ಪತ್ರೆಯನ್ನು ಸಂಸದರು ಹೇಗೆ ಉತ್ತೇಜಿಸಬಹುದು..? ಈ ಕೆಲಸಕ್ಕೆ ಅವರು ಎಷ್ಟು ಕಮಿಷನ್ ಪಡೆಯುತ್ತಿದ್ದಾರೆ..? ವಾಸವಿ ಆಸ್ಪತ್ರೆ ಲಸಿಕೆ ಖರೀದಿ ಸರಕುಪಟ್ಟಿ ತೋರಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಯುವ ನಾಯಕ ಶ್ರೀವತ್ಸಾ, “ತೇಜಸ್ವಿ ಸೂರ್ಯನಂತಹ ಬಿಜೆಪಿ ಸಂಸದರು ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು ಮತ್ತು ಪ್ರತಿ ಡೋಸ್‌ಗೆ 900 ರೂಪಾಯಿ ಶುಲ್ಕ ವಿಧಿಸಬಹುದು. ಆದರೆ ಕಾಂಗ್ರೆಸ್ ಸಂಸದರು, ಶಾಸಕರು, ಸಂಸದರು, ಎಂಎಲ್‌ಎಡಿಎಸ್ ಮತ್ತು ಪಾರ್ಟಿ ಫಂಡ್‌ಗಳನ್ನು ಬಳಸಿಕೊಂಡು ಲಸಿಕೆ ಖರೀದಿಸಲು ಸರ್ಕಾರ ಏಕೆ ಅವಕಾಶ ನೀಡುತ್ತಿಲ್ಲ..? ಈ ಪಕ್ಷಪಾತ ಏಕೆ..?” ಎಂದು ಪ್ರಶ್ನಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *