ವೀರಪ್ಪನ್ ಹಾರಿಸಿದ ಗುಂಡುಗಳನ್ನು ತಲೆಯೊಳಗಿಟ್ಟುಕೊಂಡೇ 29 ವರ್ಷ ಕಾಲ ಕರ್ತವ್ಯನಿರತರಾಗಿದ್ದ ಪಿಎಸ್ಐ ನಿಧನ!
ಚಾಮರಾಜನಗರ (ಮೇ. 25) ಕಾಡುಗಳ್ಳ ವೀರಪ್ಪನ್ ಹಾರಿಸಿದ ಗುಂಡುಗಳನ್ನು ತಲೆಯಲ್ಲೇ ಇಟ್ಟುಕೊಂಡೇ 29 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಚಾಮರಾಜ ನಗರದ ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗ ಸಬ್ ಇನ್ಸ್ಪೆಕ್ಟರ್ ಸಿದ್ದರಾಜನಾಯಕ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರಿಗೆ 59 ವರ್ಷ ವಯಸ್ಸಾಗಿತ್ತು. ನಿವೃತ್ತಿಯ ಅಂಚಿನಲ್ಲಿದ್ದ ಅವರು ಕಳೆದ 75 ದಿನಗಳಿಂದ ರಜೆಯ ಮೇಲಿದ್ದರು. ರಜೆ ಮುಗಿಸಿ ನಿನ್ನೆ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಕಾಲಿಗೆ ಗಾಯವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಿನ್ನೆ ಬೆಳಿಗ್ಗೆ ಮತ್ತೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಬೆಳಗಿನ ಕರ್ತವ್ಯ ಮುಗಿಸಿ ಮದ್ಯಾಹ್ನ ಊಟಕ್ಕೆಂದು ಮನೆಗೆ ಹೋಗಿದ್ದ ಸಿದ್ದರಾಜನಾಯಕ ಅವರಿಗೆ ಇದ್ದಕ್ಕಿದ್ದಂತೆ ಚಳಿಜ್ವರ ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರನ್ನು ಜಿಲ್ಲಾ ಸ್ಪತ್ರೆಗೆ ಕರೆತರಲಾಯಿತು. ಆದರೆ ಆಸ್ಪತ್ರೆಗೆ ಒಳಗೆ ಹೋಗುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಸಿದ್ದರಾಜನಾಯಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ
ಚಾಮರಾಜನಗರ ಜಿಲ್ಲೆ ರಾಮಾಪುರ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿದ್ದ ಸಿದ್ದರಾಜನಾಯಕ ಕಾಡುಗಳ್ಳ ವೀರಪ್ಪನ ಜೊತೆ ಮೀಣ್ಯಂ ಬಳಿ ನಡೆದಿದ್ದ ಗುಂಡಿನ ಕಾಳಗದಲ್ಲಿ ಬದುಕುಳಿದಿದ್ದರು .1992ರಲ್ಲಿ ಎಸ್ಪಿ ಹರಿಕೃಷ್ಣ ಹಾಗೂ ಎಸ್ ಐ ಶಕೀಲ್ ಅಹಮದ್ ಜೊತೆ ವೀರಪ್ಪನ್ ವಿರುದ್ದ ಕಾರ್ಯಾಚರಣೆಯಲ್ಲಿ ಸಿದ್ದರಾಜನಾಯಕ ಭಾಗವಹಿಸಿದ್ದರು. ಈ ತಂಡದ ಮೇಲೆ ನರಹಂತಕ ವೀರಪ್ಪನ್ ಗುಂಡಿನ ಮಳೆಗೆರೆದಿದ್ದ.
ಎಸ್ಪಿ ಹರಿಕೃಷ್ಣ ಹಾಗೂ ಎಸ್.ಐ ಶಕೀಲ್ ಅವರು ನರಹಂತಕ ಗುಂಡಿನ ದಾಳಿಗೆ ಬಲಿಯಾಗಿದ್ದರು. ಆದರೆ ಸಿದ್ದರಾಜನಾಯಕ, ಏಳು ಗುಂಡುಗಳು ದೇಹವನ್ನು ಹೊಕ್ಕಿದ್ದರೂ ಬದುಕುಳಿದಿದ್ದರು. ನಾಲ್ಕು ಗುಂಡುಗಳನ್ನ ಅಪರೇಷನ್ ಮೂಲಕ ಹೊರ ತೆಗೆಯಲಾಗಿತ್ತು ಇನ್ನೂ ಮೂರು ಗುಂಡುಗಳು ತಲೆಯಲ್ಲೆ ಇದ್ದವು. ಈ ಗುಂಡು ಗಳನ್ನು ತೆಗೆಯಲು ಹೋದರೆ ಅವರ ಜೀವಕ್ಕೆ ಅಪಾಯ ಎಂದು ಹಾಗೇ ಬಿಡಲಾಗಿತ್ತು.
ಹೀಗೆ ಮೂರು ಗುಂಡು ಗಳನ್ನು ತಲೆಯಲ್ಲೇ ಇಟ್ಟುಕೊಂಡು ಅಂದಿನಿಂದ 29 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಎರಡು ವರ್ಷಗಳ ಹಿಂದೆ ಬಡ್ತಿ ಪಡೆದಿದ್ದ ಸಿದ್ದರಾಜನಾಯಕ ಚಾಮರಾಜನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕಳೆದ ವರ್ಷ ಕೊರೋನಾ ಮೊದಲ ಅಲೆ ಸಂದರ್ಭದಲ್ಲಿ ಸತತ 75 ದಿನಗಳ ಕಾಲ ರಜಾ ತೆಗೆದುಕೊಳ್ಳದೆ ಕೊರೋನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಿದ ಸಿದ್ದರಾಜ ನಾಯಕ ಯುವಕರು ನಾಚಿವಂತೆ ತಮ್ಮ ಇಳಿವಯಸ್ಸಿನಲ್ಲು ಚುರುಕಾಗಿ ಕರ್ತವ್ಯ ನಿರ್ವಹಿಸಿದ್ದರು. ಕೇವಲ ಇನ್ನು 5 ದಿನದಲ್ಲಿ ಕರ್ತವ್ಯದಿಂದ ನಿವೃತ್ತಿ ಹೊಂದಬೇಕಿದ್ದ ಸಿದ್ದರಾಜನಾಯಕ ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜನಸ್ನೇಹಿ ಆಗಿದ್ದ , ಮೃದು ಸ್ವಭಾವದ ಸಿದ್ದರಾಜನಾಯಕ ಅವರ ಅಕಾಲಿಕ ನಿಧನಕ್ಕೆ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ.