ರಾಜ್ಯ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಲಾಗಿದೆಯಾ ಎನ್ನುವ ಪ್ರಶ್ನೆ ರಾಜಕೀಯ ವಲಯದಲ್ಲಿ ಎದ್ದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕೆಲವು ರಾಜಕೀಯ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು ರಾಜ್ಯ ರಾಜಕಾರಣದ ಕುರಿತು ಚರ್ಚೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ದೊರೆತಿದೆ. ಹಾಗಾದ್ರೆ ಆಗಿದ್ದೇನು..? ಈ ಸ್ಟೋರಿ ನೋಡಿ..!
ರಾಜ್ಯದಲ್ಲಿ ಸಿಎಂ ಬದಲಾವಣೆಯಾಗುತ್ತೆ ಎನ್ನುವ ಮಾತುಗಳು ಹಲವು ತಿಂಗಳುಗಳಿಂದ ಕೇಳಿ ಬರುತ್ತಿತ್ತು. ಬಿ.ಎಸ್.ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಭಾರೀ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿತ್ತು. ಈ ಮಾತಿಗೆ ಇದೀಗ ಮತ್ತಷ್ಟು ಬಲ ಸಿಕ್ಕಂತಾಗಿದೆ. ರಾಜ್ಯದ 20 ಮಂದಿ ಶಾಸಕರು ಇದೀಗ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಕಳೆದ 2 ದಿನದ ಹಿಂದೆಯೇ ದೆಹಲಿಯಲ್ಲಿರುವ ನಾಯಕರು ನಾಯಕತ್ವ ಬದಲಾವಣೆ ಬಗ್ಗೆ ಬಿಜೆಪಿ ಹೈಕಮಾಂಡ್ ಜೊತೆ ಮಾತುಕತೆಗೆ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಮೊದಲು ಬೆಂಗಳೂರಿನಿಂದ ಚೆನ್ನೈಗೆ ತೆರಳಿದ ಶಾಸಕರು ಚೆನ್ನೈನಿಂದ ದೆಹಲಿ ತಲುಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈಗಾಗಲೇ 20 MLAಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎನ್ನುವ ವಿಚಾರವನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ. ಈಗಾಗಲೇ ಸಿಎಂ ಸ್ಥಾನದ ರೇಸ್ನಲ್ಲಿ ಶಾಸಕ ಅರವಿಂದ ಬೆಲ್ಲದ್, ಪ್ರಹ್ಲಾದ್ ಜೋಶಿ, ಡಿಸಿಎಂ ಅಶ್ವತ್ಥ್ ನಾರಾಯಣ ಹೆಸರು ಕೇಳಿ ಬಂದಿದೆ. ಈ ಎಲ್ಲಾ ರಾಜಕೀಯ ಹೈಡ್ರಾಮಗಳಿಗೆ ಸಿ.ಪಿ ಯೋಗೇಶ್ವರ್ ಮಾಸ್ಟರ್ಮೈಂಡ್ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಇನ್ನು ವಯಸ್ಸಿನ ಕಾರಣ ನೀಡಿ ಸಿಎಂ ಬಿಎಸ್ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ತಯಾರಿ ನಡೆಸಲಾಗಿದೆ ಎನ್ನುವ ಮಾತುಗಳೂ ಕೇಳಿ ಬಂದಿದೆ. ಒಟ್ಟಾರೆಯಾಗಿ ಇನ್ನು ಒಂದೆರಡು ದಿನಗಳಲ್ಲಿ ಈ ಎಲ್ಲಾ ಗೊಂದಲಗಳಿಗೆ ಉತ್ತರ ಸಿಗಲಿದೆಯೋ ಕಾದು ನೋಡಬೇಕಿದೆ.