ಭಾರತದಲ್ಲಿ ಫೇಸ್ಬುಕ್-ವಾಟ್ಸ್ಆ್ಯಪ್ ಬ್ಯಾನ್ ಆತಂಕದ ಬೆನ್ನಲ್ಲೇ ಫೇಸ್ಬುಕ್ನಿಂದ ಮಹತ್ವದ ಸ್ಪಷ್ಟನೆ
ಹೊಸದಿಲ್ಲಿ: ಭಾರತದಲ್ಲಿ ಬುಧವಾರ (ಮೇ 26) ಜಾರಿಗೆ ಬರಲಿರುವ ಮಾಹಿತಿ ತಂತ್ರಜ್ಞಾನ ಕಾಯಿದೆಯ ಹೊಸ ನಿಯಮಗಳಿಗೆ ಅನುಗುಣವಾಗಿ ಕಾರ್ಯಾಚರಣೆ ಪ್ರಕ್ರಿಯೆಗಳಲ್ಲಿ ಸೂಕ್ತ ಮಾರ್ಪಾಡು ಮಾಡಿಕೊಳ್ಳಲಾಗುತ್ತಿದ್ದು, ಹೊಸ ನಿಯಮಗಳ ಪಾಲನೆಗೆ ಒತ್ತು ನೀಡಲಾಗುತ್ತಿದೆ ಎಂದು ಫೇಸ್ಬುಕ್ ಮಂಗಳವಾರ ತಿಳಿಸಿದೆ.
ಸಾಮಾಜಿಕ ಮಾಧ್ಯಮಗಳಿಗೆ ಹೊಸ ಮಾರ್ಗಸೂಚಿ ಪಾಲನೆಗೆ ಕೊನೆಯ ದಿನಾಂಕ ಸಮೀಪಿಸುತ್ತಿರುವ ವೇಳೆ, ದೇಶದಲ್ಲಿ ಫೇಸ್ಬುಕ್ ಮತ್ತು ವಾಟ್ಸ್ಆ್ಯಪ್ ನಿಷ್ಕ್ರೀಯಗೊಳ್ಳಲಿವೆಯೇ ಎಂಬ ಬಗ್ಗೆ ಆತಂಕ ಮೂಡಿದೆ. ಇದೇ ವೇಳೆ ಕಂಪನಿಯಿಂದ ಮಹತ್ವದ ಸ್ಪಷ್ಟನೆ ಹೊರಬಿದ್ದಿದೆ. ಕಳೆದ ಫೆಬ್ರುವರಿಯಲ್ಲಿ ಕೇಂದ್ರ ಸರಕಾರ ಘೋಷಿಸಿದ ಹೊಸ ಮಾರ್ಗಸೂಚಿಗಳು ಸಾಮಾಜಿಕ ಜಾಲತಾಣಗಳು ಹಾಗೂ ಇನ್ಸ್ಟಂಟ್ ಮೆಸೇಜಿಂಗ್ ಸೇವೆ ಒದಗಿಸುವ ಫೇಸ್ಬುಕ್, ವಾಟ್ಸ್ಆ್ಯಪ್, ಟ್ವಿಟರ್ಗಳಿಗೆ ಅನ್ವಯ ಆಗಲಿದೆ.
ಸದ್ಯ ಇರುವುದಕ್ಕಿಂತ ಹೆಚ್ಚಿನ ನಿಗಾವನ್ನು ಕಂಪನಿಗಳು ತಮ್ಮ ತಾಣಗಳಲ್ಲಿ ಹರಿದಾಡುವ ಪೋಸ್ಟ್ಗಳ ಮೇಲೆ ಇರಿಸಬೇಕಿದೆ. ಸುಳ್ಳು ಸುದ್ದಿಗೆ ಕಡಿವಾಣ, ಅಪಪ್ರಚಾರ, ಸೈಬರ್ ಬುಲ್ಲಿಯಿಂಗ್, ಅಶ್ಲೀಲ ಫೋಟೊ/ ವಿಡಿಯೊಗಳ ಪ್ರಸಾರ, ಬಳಕೆದಾರರ ಅಧಿಕೃತ ಖಾತೆಗಳ ಹ್ಯಾಕಿಂಗ್ ತಡೆ ಸೇರಿದಂತೆ ಬಳಕೆದಾರರು ದೂರುಗಳನ್ನು ಸಲ್ಲಿಸಲು ಸೂಕ್ತ ನೋಡಲ್ ಅಧಿಕಾರಿ ಅಥವಾ ಮುಖ್ಯ ದೂರು ನಿರ್ವಹಣಾ ಅಧಿಕಾರಿಯನ್ನು ಕೂಡ ಕಂಪನಿಗಳು ನೇಮಿಸಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಿರುವ ಪ್ರತಿಯೊಬ್ಬರೂ ತಮ್ಮ ಅನನುಕೂಲತೆ ಕುರಿತು ದೂರು ಸಲ್ಲಿಸಿದ ಕೂಡಲೇ ಅವರಿಗೆ ಸ್ವೀಕೃತಿ ದಾಖಲಾತಿ ಸಿಗಬೇಕು. ಅದನ್ನು ನಿಗದಿತ ಸಮಯದೊಳಗೆ ಪರಿಹರಿಸುವ ಜವಾಬ್ದಾರಿಯನ್ನು ಸರಕಾರ ಕಂಪನಿಗಳಿಗೆ ಹೊರಿಸಿದೆ.
ಪ್ರತಿ ತಿಂಗಳೂ ದೂರುಗಳನ್ನು ಇತ್ಯರ್ಥಪಡಿಸಿದ ವರದಿಯನ್ನು ಸಲ್ಲಿಸಬೇಕಿದೆ. ಮುಕ್ತ ಅಭಿವ್ಯಕ್ತಿಗೆ ಧಕ್ಕೆ ಆಗಲ್ಲ: ಸರಕಾರದ ಹೊಸ ಮಾರ್ಗಸೂಚಿಗೆ ಹೊಂದಿಕೊಳ್ಳುವ ಸುಳಿವು ನೀಡಿರುವ ಫೇಸ್ಬುಕ್ ಕಂಪನಿಯು, ಮುಂಚಿನಿಂದಲೂ ಫೇಸ್ಬುಕ್ ಬಳಕೆದಾರರಿಗೆ ಇರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಲ್ಲ ಎಂದು ಭರವಸೆ ನೀಡಿದೆ.