Buddha Purnima 2021: ಇಂದು ಬುದ್ಧ ಪೂರ್ಣಿಮೆ.. ಏನಿದರ ವೈಶಿಷ್ಟ್ಯ? ಆಚರಣೆ ಹೇಗೆ ? ಬುದ್ಧನ ಮಾತುಗಳ ಮಹತ್ವ ಇಲ್ಲಿದೆ
Buddha Purnima 2021: ಭಾರತೀಯರು ನಾನಾ ಹಬ್ಬಗಳನ್ನು ಆಚರಿಸುತ್ತಾರೆ. ಇಲ್ಲಿ ವಿವಿಧ ಧರ್ಮಗಳ ಐಕ್ಯತೆ ಇರುವುದರಿಂದ ಎಲ್ಲಾ ಧರ್ಮಗಳ ಜನರೂ ತಂತಮ್ಮ ಆಚರಣೆಗೆ ತಕ್ಕಂತೆ ಹಬ್ಬಗಳನ್ನು ವೈವಿಧ್ಯವಾದ ರೀತಿಯಲ್ಲಿ ಅನುಸರಿಸುತ್ತಾರೆ. ಇಂದು ಬುದ್ಧ ಪೂರ್ಣಿಮೆ. ಜಗತ್ತಿಗೆ ಅಹಿಂಸೆಯ ಮಾರ್ಗವನ್ನು ತೋರಿಸಿಕೊಟ್ಟ ಸಂತ ಬುದ್ಧನ ಜನ್ಮ ದಿನ ಇಂದು (ಮೇ 26, 2021). ವೈಶಾಖ ಬುದ್ಧ ಪೂರ್ಣಿಮೆ ಅಥವಾ ವೈಸಾಕ್ ಎಂದೂ ಇಂದಿನ ದಿನವನ್ನು ಕರೆಯುತ್ತಾರೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ವೈಶಾಖ ಮಾಸ ಬರುವುದರಿಂದ ಬುದ್ಧ ಪೂರ್ಣಿಮೆಗೆ ಆ ಹೆಸರು ಬಂದಿದೆ. ಇಂದು ಬುದ್ಧನ 2583ನೇ ಜನ್ಮ ದಿನಾಚರಣೆ. ಕ್ರಿ ಪೂ 563ರಲ್ಲಿ ಲುಂಬಿನಿ ಉದ್ಯಾನದಲ್ಲಿ ರಾಜಕುಮಾರ ಸಿದ್ಧಾರ್ಥನ ಜನನವಾಗಿತ್ತು. ಅನೇಕರು ಬುದ್ಧನನ್ನು ವಿಷ್ಣುವಿನ ಒಂಭತ್ತನೇ ಅವತಾರವೆಂದು ಪರಿಗಣಿಸುತ್ತಾರೆ.
ಬೌದ್ಧರಿಗೆ ಪ್ರತಿ ತಿಂಗಳ ಹುಣ್ಣಿಮೆ ವಿಶೇಷ ದಿನ. ಬುದ್ಧನ ಜನನ, ನಂತರ ಕಠಿಣ ತಪ್ಪಸ್ಸಿನಿಂದಾಗಿ ಬೋಧಿ ಮರದ ನೆರಳಿನಲ್ಲಿ ಜ್ಞಾನೋದಯ ಪಡೆದದ್ದು ಕೂಡಾ ಮೇ ತಿಂಗಳ ಹುಣ್ಣಿಮೆಯ ದಿನ. ಅಂದೇ ಗಯಾದಲ್ಲಿ ಗೌತಮ ಬುದ್ಧನಾಗಿ ಬದಲಾದದ್ದು. ಇನ್ನು ಅಹಿಂಸೆ ಮತ್ತು ಬದುಕಿನ ಸತ್ಯಗಳನ್ನು ಜಗತ್ತಿಗೆ ಬೋಧಿಸಿದ ನಂತರ ಎಂಭತ್ತು ವರ್ಷದವರಾಗಿದ್ದಾಗ, ಕುಸಿನಾರದಲ್ಲಿ ನಿಬ್ಬಾಣಕ್ಕೆ ಒಳಗಾಗಿದ್ದು ಕೂಡಾ ಹುಣ್ಣಿಮೆಯ ದಿನವೇ ಆಗಿದೆ. ಆದ್ದರಿಂದ ಪೌರ್ಣಿಮೆ ಬೌದ್ಧರಿಗೆ ವಿಶೇಷವಾಗಿದೆ.
ಬೌದ್ಧ ಧರ್ಮ ಭಾರತ ಮಾತ್ರವಲ್ಲದೆ ನೇಪಾಳ, ಭೂತಾನ್, ಬರ್ಮಾ, ಥೈಲ್ಯಾಂಡ್, ಟಿಬೆಟ್, ಚೀನಾ, ಕೊರಿಯಾ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಕಾಂಬೋಡಿಯಾ, ಸಿಂಗಾಪುರ, ಇಂಡೋನೇಷ್ಯಾ ದೇಶಗಳಲ್ಲಿ ಪ್ರಚಲಿತದಲ್ಲಿದೆ. ಪ್ರತೀ ದೇಶವೂ ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತದೆ.
ಬುದ್ಧ ಪೂರ್ಣಿಮೆಯ ದಿನ ಅನೇಕ ಭಕ್ತರು ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇದರಿಂದ ಪಾಪಗಳು ತೊಳೆದು ಉತ್ತಮ ಬದುಕು ನಡೆಸಲು ಮತ್ತೊಂದು ಅವಕಾಶ ದೊರೆಯುವ ನಂಬಿಕೆ ಇದೆ. ಅಲ್ಲದೇ ಇಡೀ ದಿನ ಉಪವಾಸ, ಧ್ಯಾನ ಮತ್ತು ಬುದ್ಧನ ಉಪದೇಶಗಳ ಚರ್ಚೆ ನಡೆಸುತ್ತಾರೆ.