ಜಮೀರ್‌ ಕ್ಷೇತ್ರದಲ್ಲಿ ಸಿದ್ದರಾಮಯ್ಯ ರೌಂಡ್ಸ್‌ ! ಕುತೂಹಲ ಕೆರಳಿಸಿದ ಮಾಜಿ ಸಿಎಂ ನಡೆ

ಹೈಲೈಟ್ಸ್‌:

  • ಜಮೀರ್‌ ಕ್ಷೇತ್ರದಲ್ಲಿ ಸಿದ್ದರಾಮಯ್ಯ ರೌಂಡ್ಸ್‌ !
  • ಕುತೂಹಲ ಕೆರಳಿಸಿದ ಮಾಜಿ ಸಿಎಂ ನಡೆ
  • ಕ್ಷೇತ್ರ ಬದಲಾವಣೆ ಮಾಡುತ್ತಾರಾ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಕ್ಷೇತ್ರದಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವುದು ಕಾಂಗ್ರೆಸ್ ಪಾಳಯದಲ್ಲಿ ಗುಸು-ಗುಸು ಚರ್ಚೆಗೆ ಗ್ರಾಸವಾಗಿದೆ. ಕೋವಿಡ್‌ ಸಂದರ್ಭದಲ್ಲಿ ಜಮೀರ್ ಕ್ಷೇತ್ರ ಚಾಮರಾಜನಗರದಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳಲ್ಲೂ ಸಿದ್ದರಾಮಯ್ಯ ಭಾಗಿಯಾಗುತ್ತಿದ್ದಾರೆ. ತಮ್ಮ ಸ್ವಕ್ಷೇತ್ರ ಬಾದಾಮಿ ಹಾಗೂ ಇತರ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಹೆಚ್ಚಾಗಿ ಕಾಣಿಸಿಕೊಳ್ಳದೆ ಇದ್ದರೂ ಚಾಮರಾಜನಗರ ಪದೇ ಪದೇ ರೌಂಡ್ಸ್ ಹಾಕುವ ಹಿಂದಿನ ಮರ್ಮವೇನು ಎಂಬುವುದು ಕುತೂಹಲ ಕೆರಳಿಸಿದೆ.

ಮೇ 21, ಶನಿವಾರದಂದು ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಲ್ಲಿ 80 ಆಕ್ಸಿಜನ್ ಬೆಡ್ ಗಳ ನಾನ್ ಕೋವಿಡ್ ಆಸ್ಪತ್ರೆಯನ್ನು ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಮೇ 19 ರಂದು ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು.

ಮೇ 24, ಸೋಮವಾರದಂದು ಜಮೀರ್ ಅಹಮದ್ ಸಿದ್ಧಪಡಿಸಿರುವ ದಿನಸಿ ಕಿಟ್ ಗಳನ್ನು ಚಲನಚಿತ್ರ ರಂಗದ ಕಾರ್ಮಿಕರಿಗೆ ಸಿದ್ದರಾಮಯ್ಯ ಅವರು ವಿತರಿಸಿದ್ದರು. ಇದೀಗ ಬುಧವಾರ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದ ಆಟೋ ಚಾಲಕರಿಗೆ ಪರಿಹಾರ ವಿತರಿಸುವ ಕಾರ್ಯಕ್ರಮವನ್ನು ಜಮೀರ್ ಹಮ್ಮಿಕೊಂಡಿದ್ದಾರೆ. ಚಾಮರಾಜಪೇಟೆ ಮುಖ್ಯ ರಸ್ತೆಯ ಶಾಸಕರ ಕಚೇರಿ ಬಳಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.

ಹೀಗೆ ಚಾಮರಾಜನಗರ ಕ್ಷೇತ್ರದಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ಕಾಣಿಸಿಕೊಂಡಿದ್ದಾರೆ. ಸಹಜವಾಗಿ ಇದು ಕುತೂಹಲವನ್ನು ಕೆರಳಿಸಿದೆ. ಸಿದ್ದರಾಮಯ್ಯ ಅವರು ತಮ್ಮ ಸ್ವಕ್ಷೇತ್ರ ಬಾದಾಮಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೆ ಜಮೀರ್‌ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಮಿಸ್ ಮಾಡುತ್ತಿಲ್ಲ ಎಂಬ ಮಾತು ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಏನು ಕಾರಣ ಎಂಬುವುದು ತಿಳಿದಿಲ್ಲ.

ಕ್ಷೇತ್ರ ಬದಲಾವಣೆ ಮಾಡುತ್ತಾರಾ ಸಿದ್ದರಾಮಯ್ಯ?

ಸಿದ್ದರಾಮಯ್ಯ ಪದೇ ಪದೇ ಚಾಮರಾಜನಗರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಸಹಜವಾಗಿ ಇಂತಹದೊಂದು ಚರ್ಚೆ ಆರಂಭಗೊಂಡಿದೆ. ಬಾದಾಮಿ ಕ್ಷೇತ್ರದಲ್ಲಿ ಶಾಸಕರಾಗಿರುವ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ತಮ್ಮ ಕ್ಷೇತ್ರವನ್ನು ಬದಲಾವಣೆ ಮಾಡುತ್ತಾರಾ? ಎಂಬ ವದಂತಿಗಳು ಹರಡುತ್ತಿವೆ. ಜಮೀರ್ ತಮ್ಮ ನಾಯಕ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ತ್ಯಾಗ ಮಾಡುತ್ತಾರಾ ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಆದರೆ ಇಂತಹ ಸಾಧ್ಯತೆಗಳು ಇಲ್ಲ ಎಂಬುವುದು ಸಿದ್ದರಾಮಯ್ಯ ಆಪ್ತರ ಅಭಿಪ್ರಾಯ.

ಜಮೀರ್ ಜೊತೆಗೆ ಸಿದ್ದರಾಮಯ್ಯ ರಾಜಕೀಯ ಆಪ್ತತೆ ಹೊಂದಿರುವುದು ಕಾಂಗ್ರೆಸ್‌ನ ಕೆಲವೊಂದು ಮುಸ್ಲಿಂ ಶಾಸಕರಿಗೆ ಅಸಮಾಧಾನವನ್ನು ಉಂಟು ಮಾಡಿದೆ. ಈ ಕಾರಣಕ್ಕಾಗಿಯೇ ರೋಷನ್ ಬೇಗ್, ಸಿ.ಎಂ ಇಬ್ರಾಹಿಂ ಒಳಗೊಂಡು ಕೆಲವು ಮುಸ್ಲಿಂ ನಾಯಕರು ಮುನಿಸಿಕೊಂಡಿದ್ದರು. ಆದರೆ ಸಿದ್ದರಾಮಯ್ಯ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಂಡತ್ತಿಲ್ಲ. ಅದೇನೇ ಇದ್ದರೂ ಸಿದ್ದರಾಮಯ್ಯ ಅವರು ಪದೇ ಪದೇ ಜಮೀರ್‌ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚರ್ಚೆಯನ್ನು ಹುಟ್ಟುಹಾಕಿದೆ ಎಂಬುವುದಂತೂ ಸತ್ಯ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *