ಡೈಮಂಡ್ ಉದ್ಯಮಿ Mehul Choksi ಬಂಧನ: ಆಂಟಿಗುವಾ ಪೊಲೀಸರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭ
ಡೈಮಂಡ್ ಉದ್ಯಮಿ, ಬ್ಯಾಂಕ್ಗಳಿಗೆ ಬಹುಕೋಟಿ ವಂಚಿಸಿ ತಲೆಮರೆಸಿಕೊಂಡಿದ್ದ ಮೇಹುಲ್ ಚೋಕ್ಸಿ ಇದೀಗ ಡೊಮಿನಿಕಾದಲ್ಲಿ ಬಂಧನವಾಗಿದ್ದಾರೆ. ಸಿಬಿಐ ಇಂಟರ್ಪೋಲ್ ಮುಖಾಂತರ ಮೇಹುಲ್ ಚೋಕ್ಸಿ ಮೇಲೆ ಯೆಲ್ಲೋ ಕಾರ್ನರ್ ನೊಟೀಸ್ ಜಾರಿಮಾಡಿತ್ತು. ಸದ್ಯ, ಡೊಮಿನಿಕಾದಿಂದ ಆಂಟಿಗುವಾ ಪೊಲೀಸರಿಗೆ ಹಸ್ತಾಂತರಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಮೇಹುಲ್ ಚೋಕ್ಸಿ ಕಾಣೆಯಾಗಿದ್ದಾರೆ ಎಂದು ಕುಟುಂಬಸ್ಥರೊಬ್ಬರು ಭಾನುವಾರ ಮಾಹಿತಿ ನೀಡಿದ್ದರು. ನಂತರ ಡೊಮಿನಿಕಾ ಪೊಲೀಸರು ಚೋಕ್ಸಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆಂಟಿಗುವಾ ಮತ್ತು ಬರ್ಬುದಾ ಸ್ಥಳೀಯ ಮಾಧ್ಯಮಗಳ ಮಾಹಿತಿ ಅನ್ವಯ, ಚೋಕ್ಸಿಯನ್ನು ಆಂಟಿಗುವಾ ಪೊಲೀಸರಿಗೆ ಹಸ್ತಾಂತರಿಸಲು ಡೊಮಿನಿಕಾ ಪೊಲೀಸರು ಅಗತ್ಯ ಹಸ್ತಾಂತರ ಪ್ರಕ್ರಿಯೆ ಆರಂಭಿಸಿದ್ದಾರೆ.
ಭಾರತದಿಂದ ತಲೆಮರೆಸಿಕೊಂಡು ಹೋಗಿದ್ದ ಚೋಕ್ಸಿ, ಆಂಟಿಗುವಾ ಮತ್ತು ಬರ್ಬುದಾ ದೇಶದ ಪೌರತ್ವ ಪಡೆದುಕೊಂಡಿದ್ದರು. 2018ರ ಜನವರಿಯಲ್ಲಿ ದೇಶ ಬಿಟ್ಟು ಚೋಕ್ಸಿ ಪರಾರಿಯಾಗಿದ್ದರು.
ಭಾರತದಿಂದ ಯೆಲ್ಲೋ ಕಾರ್ನರ್ ನೊಟೀಸ್ ಜಾರಿಯಾದ ನಂತರ, ದೇಶಬಿಟ್ಟು ಪರಾರಿಯಾಗಲು ಚೋಕ್ಸಿ ಯತ್ನಿಸಿದರೆ ಪೌರತ್ವ ಹಿಂಪಡೆಯುವುದಾಗಿ ಆಂಟಿಗುವಾ ಹೇಳಿತ್ತು. ಮೇಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಇಬ್ಬರೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇಂದ ರೂ. 13,500 ಕೋಟಿ ಸಾಲ ಪಡೆದು ವಂಚಿಸಿದ್ದರು. ಜಾರಿ ನಿರ್ದೇಶನಾಲಯಕ್ಕೆ ವಂಚನೆಯ ವಾಸನೆ ಬಂದ ತಕ್ಷಣ ಇಬ್ಬರೂ ದೇಶ ಬಿಟ್ಟು ಕಾಲ್ಕಿತ್ತಿದ್ದರು. ಸದ್ಯ ನೀರವ್ ಮೋದಿ ಇಂಗ್ಲೆಂಡ್ನ ಜೈಲಿನಲ್ಲಿದ್ದು, ಕೋರ್ಟ್ ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದೆ. ಆದರೆ ನೀರವ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿದ್ದಾರೆ.
ಈ ಹಿಂದೆ ನಡೆದಿದ್ದೇನು?:
ಕಳೆದ ವರ್ಷ ಆಂಟಿಗುವಾ ಪ್ರಧಾನಿ ಗ್ಯಾಸ್ಟನ್ ಬ್ರೌನ್, ಚೋಸ್ಕಿ ಅವರ ಎಲ್ಲಾ ಕಾನೂನು ಆಯ್ಕೆಗಳು ಮುಗಿದ ನಂತರ ಪೌರತ್ವವನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದ್ದರು.ಕೆರಿಬಿಯನ್‌ನ ಅನೇಕ ದೇಶಗಳಂತೆ ತಮ್ಮ ದೇಶವು ಅಪರಾಧಿಗಳಿಗೆ, ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿರುವವರಿಗೆ ಸುರಕ್ಷಿತ ತಾಣ ಒದಗಿಸುವುದಿಲ್ಲ ಎಂದು ಬ್ರೌನ್ ಸ್ಪಷ್ಟಪಡಿಸುತ್ತ ಬಂದಿದ್ದಾರೆ. “ಪೌರತ್ವದ ಪ್ರಕ್ರಿಯೆ ನಡೆದ ಬಳಿಕ ಚೋಸ್ಕಿ ಪ್ರವೇಶಿಸಿದ್ದಾರೆ. ನಮಗೆ ಬೇರೆ ಪ್ರಕ್ರಿಯೆ ಕೂಡ ಇವೆ. ವಾಸ್ತವವೆಂದರೆ ಅವರ ಪೌರತ್ವವನ್ನು ಹಿಂತೆಗೆದುಕೊಳ್ಳಲಾಗುವುದು ಮತ್ತು ಅವರನ್ನು ಭಾರತಕ್ಕೆ ಗಡೀಪಾರು ಮಾಡಲಾಗುವುದು” ಎಂದು ಬ್ರೌನ್ ಹೇಳಿದ್ದಾರೆ ಎಂದು ಆಂಟಿಗುವಾ ಅಬ್ಸರ್ವರ್ ವರದಿ ಮಾಡಿತ್ತು.
ಆಂಟಿಗುವಾನ್ ಸಿವಿಲ್ ನ್ಯಾಯಾಲಯವು ಪೌರತ್ವವನ್ನು ರದ್ದುಪಡಿಸಿದೆ ಎಂಬ ಮಾಧ್ಯಮ ವರದಿಗಳು ಸುಳ್ಳು ಎಂದು ಮಾರ್ಚ್‌ನಲ್ಲಿ ಚೋಕ್ಸಿ ಅವರ ವಕೀಲರು ಹೇಳಿದ್ದರು. ಮೆಹುಲ್ ಚೋಕ್ಸಿ ಆಂಟಿಗುವಾನ್ ಪ್ರಜೆಯಾಗಿ ಉಳಿದಿದ್ದಾರೆ ಎಂದು ವಕೀಲ ಅಗರವಾಲ್ ಹೇಳಿದ್ದರು. ಎಎನ್‌ಐ ಜೊತೆಗಿನ ತಮ್ಮ ಹಿಂದಿನ ಸಂದರ್ಶನದಲ್ಲಿ ಚೋಕ್ಸಿ, ತಮ್ಮ ವಿರುದ್ಧದ ಆರೋಪಗಳು ಸುಳ್ಳು, ಆಧಾರರಹಿತ ಮತ್ತು ರಾಜಕೀಯ ಪ್ರೇರಿತವಾಗಿವೆ ಎಂದು ಹೇಳಿದ್ದರು.
ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಕಳೆದ ತಿಂಗಳು ಬ್ರಿಟಿಷ್ ಸರ್ಕಾರ ಅನುಮತಿಸಿತ್ತು. ಆದರೆ ನೀರವ್ ಮೋದಿ ಬ್ರಿಟಿಷ್ ಹಸ್ತಾಂತರದ ಆದೇಶವನ್ನು ಯುಕೆ ಹೈಕೋರ್ಟ್ ಮುಂದೆ ಪ್ರಶ್ನಿಸಬಹುದು. 2019 ರ ಫೆಬ್ರವರಿಯಲ್ಲಿ ಸಹಿ ಮಾಡಿದ ಹಸ್ತಾಂತರ ಆದೇಶದ ವಿರುದ್ಧ ನ್ಯಾಯಾಲಯಕ್ಕೆ ಹೋದ ಮದ್ಯದ ದೊರೆ ವಿಜಯ್ ಮಲ್ಯ ಅವರ ಪ್ರಕರಣದಲ್ಲಿ ಕಂಡುಬರುವಂತೆ, ಈ ಪ್ರಕ್ರಿಯೆಯು ತಿಂಗಳುಗಳು ಅಥವಾ ವರ್ಷಗಳನ್ನು ತೆಗೆದುಕೊಳ್ಳಬಹುದು ಎನ್ನಲಾಗಿದೆ.
ಈಗಾಗಲೇ ಸಿಬಿಐ ಇಬ್ಬರ ಮೇಲೂ ದೋಷಾರೋಪ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಸಿದೆ. ಇದೇ ರೀತಿ ಕರ್ನಾಟಕ ಮೂಲದ ಉದ್ಯಮಿ, ಮದ್ಯದ ದೊರೆ ವಿಜಯ್ ಮಲ್ಯಾ ಕೂಡ ದೇಶಬಿಟ್ಟು ಇಂಗ್ಲೆಂಡ್ ಸೇರಿದ್ದಾರೆ. ಅವರ ಹಸ್ತಾಂತರ ಪ್ರಕ್ರಿಯೆ ಸಂಬಂಧವೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.