ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ ಲಸಿಕೆ ಪ್ರಮಾಣಪತ್ರ ಹಂಚಿಕೊಳ್ಳುವ ಮುನ್ನ ಯೋಚಿಸಿ
ನವದೆಹಲಿ (ಮೇ. 26): ಕೋವಿಡ್ನ ಈ ಸಂಕಷ್ಟದ ಸಮಯದಲ್ಲಿ ಸೋಂಕಿನಿಂದ ಪಾರಾಗಲು ಇರುವ ಏಕೈಕ ಮಾರ್ಗ ಎಂದರೆ, ಲಸಿಕೆ ಮೊರೆ ಹೋಗುವುದು. ಈಗಾಗಲೇ ಸರ್ಕಾರ ಮೂರು ಹಂತದ ಲಸಿಕೆ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದೆ. ಅಲ್ಲದೇ ಲಸಿಕೆಯನ್ನು ತೆಗೆದುಕೊಳ್ಳುವಂತೆ ಮನವಿ ಮಾಡುತ್ತಿದೆ. ರಾಜಕೀಯ ನಾಯಕರು, ಸಿನಿಮಾ ಸೆಲೆಬ್ರಿಟಿಗಳು ಕೂಡ ಲಸಿಕೆ ಪಡೆಯುತ್ತಿರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಇತರರಿಗೂ ಲಸಿಕೆ ಪಡೆಯಲು ಉತ್ತೇಜಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಲಸಿಕೆ ಪ್ರಮಾಣ ಪತ್ರಗಳನ್ನು ಈಗ ಜನಸಾಮಾನ್ಯರು ಹಂಚಿಕೊಳ್ಳುವ ಮೂಲಕ ತಮ್ಮ ಲಸಿಕೆ ಪಡೆದ ಸಂತಸ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಈ ರೀತಿ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಅಪಾಯಕಾರಿ ಎಂದು ಭಾರತ ಸರ್ಕಾರ ಎಚ್ಚರಿಸಿದೆ.
ಲಸಿಕೆಯ ಮೂರನೇ ಹಂತದ ಕಾರ್ಯಚರಣೆ ವೇಳೆ ಅನೇಕ ಮಂದಿ ಯುವ ಪೀಳಿಗೆ ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಇವರಲ್ಲಿ ಬಹುತೇಕರು ತಮ್ಮ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು ಕಂಡು ಬಂದಿದೆ. ಈ ಪ್ರಮಾಣ ಪತ್ರದಲ್ಲಿ ಕೆಲವು ನಿರ್ಣಾಯಕ ಡೇಟಾಗಳಿದ್ದು, ಅವುಗಳನ್ನು ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಹಂಚುವುದು ಅಪಾಯಕಾರಿ ಎಂದು ಸರ್ಕಾರ ತಿಳಿಸಿದೆ
ಸೈಬರ್ ಸುರಕ್ಷತೆ ಮತ್ತು ಜಾಗೃತೆ ದೃಷ್ಠಿಯಿಂದಾಗಿ ಈ ರೀತಿಯ ಯಾವುದೇ ಲಸಿಕೆ ಪ್ರಮಾಣ ಪತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡದಂತೆ ಗೃಹ ಸಚಿವಾಲಯ ಟ್ವಿಟರ್ನಲ್ಲಿ ತಿಳಿಸಿದೆ. ಲಸಿಕೆ ಪ್ರಮಾಣ ಪತ್ರದಲ್ಲಿ ಹೆಸರು ಸೇರಿದಂತೆ ವ್ಯಕ್ತಿಯ ವೈಯಕ್ತಿಕ ವಿವರಗಳು ಒಳಗೊಂಡಿರುವ ಕಾರಣ ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಮಾಹಿತಿ ದುರುಪಯೋಗವಾಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನಲೆ ಈ ಬಗ್ಗೆ ಎಚ್ಚರವಹಿಸುವಂತೆ ಗೃಹ ಸಚಿವಾಲಯದ ಟ್ವೀಟ್ನಲ್ಲಿ ಎಚ್ಚರಿಸಿದೆ.
ಲಸಿಕೆ ಪ್ರಮಾಣಪತ್ರವು ಕೂಡ ಆಧಾರ್ ಕಾರ್ಡ್ನಂತೆ ಸಹಾಯಕಾರಿಯಾಗಿದೆ. ಯಾವುದೇ ನಗರ, ದೇಶಗಳಿಗೆ ಪ್ರಯಾಣಿಸುವಾಗ ಕೋವಿಡ್ ಲಸಿಕೆ ಪಡೆದ ಕುರಿತು ಪ್ರಮಾಣ ಪತ್ರ ಹಾಜರು ಪಡಿಸುವುದು ಅನಿವಾರ್ಯವಾಗಿದೆ. ಲಸಿಕೆ ಪಡೆಯಲು ಮೊಬೈಲ್ ಮೂಲಕ ನೋಂದಾಯಿಸಿಕೊಂಡಿರುವ ಹಿನ್ನಲೆ ಎಲ್ಲಾ ವಿವರಗಳನ್ನು ಪಡೆಯುವುದು ಸುಲಭವಾಗಿದೆ.
ಮೊದಲ ಡೋಸ್ ಪಡೆದಾಕ್ಷಣ ಸರ್ಕಾರ ಲಸಿಕೆ ಪ್ರಮಾಣ ಪತ್ರ ನೀಡುತ್ತದೆ, ಇದರಲ್ಲಿ ವಾಕ್ಸಿನೇಷನ್ ಪಡೆದ ಸಮಯ ಮತ್ತು ದಿನಾಂಕ ಕೂಡ ನಮೂದಾಗಿರುತ್ತದೆ. ಜೊತೆಗೆ ವಾಕ್ಸಿನೇಷನ್ ಕೇಂದ್ರದ ಹೆಸರು ಆಧಾರ್ ಕಾರ್ಡ್ನ ಕೊನೆಯ ನಾಲ್ಕು ಅಂಕೆಗಳನ್ನು ಹೊಂದಿದೆ. ಎರಡನೇ ಡೋಸ್ ವಾಕ್ಸಿನೇಷನ್ ಪಡೆಯುವ ದಿನಾಂಕವನ್ನು ಕೂಡ ಇಲ್ಲಿ ಉಲ್ಲೇಖಿಸಲಾಗಿದೆ.
ಎರಡನೇ ಡೋಸ್ ವಾಕ್ಸಿನೇಷನ್ ಪಡೆದ ಬಳಿಕ ಸಿಗಲಿರುವ ಪ್ರಮಾಣ ಪತ್ರ ಪೂರ್ಣ ಪ್ರಮಾಣದ ಅರ್ಹತೆ ಹೊಂದಿದ್ದು, ಮೊದಲ ಡೋಸ್ ಪ್ರಮಾಣಪತ್ರ ತಾತ್ಕಾಲಿಕವಾಗಿದೆ.( ಕೋವಿಡ್ ಎರಡನೇ ಅಲೆಗೆ ಈಗಾಗಲೇ ಸಾಕಷ್ಟು ಜನರು ತತ್ತರಿಸಿದ್ದಾರೆ. ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆ ಜನರು ಈ ಬಗ್ಗೆ ಕಾಳಜಿವಹಿಸುವುದು ಅತ್ಯಗತ್ಯ. ಈ ಹಿನ್ನಲೆ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಪದೇ ಪದೇ ಕೈ ತೊಳೆದುಕೊಳ್ಳುವ ಮೂಲಕ ಸೋಂಕಿನಿಂದ ಪಾರಾಗಬಹುದಾಗಿದೆ. ಅಲ್ಲದೇ ಹಲವೆಡೆ ಎಲ್ಲಾ ವಯೋ ಮಾನದವರಿಗೂ ಲಸಿಕೆ ಲಭ್ಯವಿದ್ದು, ಲಸಿಕೆ ಪಡೆಯಲು ಮುಂದಾಗಬೇಕಿದೆ ಎಂದು ಸರ್ಕಾರ ಮನವಿ ಮಾಡುತ್ತಿದ್ದು, KK ನ್ಯೂಸ್ ಕನ್ನಡದ ಕಾಳಜಿ ಕೂಡ ಇದೇ ಆಗಿದೆ)