Yaas Cyclone: ಚಂಡಮಾರುತದಿಂದ ತತ್ತರಿಸಿದರೂ ಬೇರೆ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ನಿಲ್ಲಿಸದ ಒಡಿಶಾ
ಒಡಿಶಾ(ಮೇ 27): ಯಾಸ್ ಚಂಡಮಾರುತದ(Yaas Cyclone) ಹೊಡೆತಕ್ಕೆ ಸಿಕ್ಕ ಕೆಲ ರಾಜ್ಯಗಳು ಅಕ್ಷರಶಃ ನಲುಗಿವೆ. ಆ ಸಾಲಿಗೆ ಒಡಿಶಾ ಕೂಡ ಸೇರ್ಪಡೆಯಾಗುತ್ತದೆ. ಯಾಸ್ ಚಂಡಮಾರುತದ ಆರ್ಭಟಕ್ಕೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಪರಿಸ್ಥಿರಿ ಹೀಗಿದ್ದರೂ ಸಹ ಒಡಿಶಾ ರಾಜ್ಯ ಸರ್ಕಾರ ಕೋವಿಡ್ ಪೀಡಿತ ರಾಜ್ಯಗಳಿಗೆ ಪ್ರಾಣವಾಯು ಪೂರೈಕೆ ಮಾಡುವುದನ್ನು ನಿಲ್ಲಿಸಿಲ್ಲ. ಹೌದು, ಸೈಕ್ಲೋನ್ ದಾಳಿಗೆ ಸಿಕ್ಕಿ ತತ್ತರಿಸಿದ್ದರೂ ಸಹ ಕೊರೋನಾ ಹೊಡೆತಕ್ಕೆ ಸಿಕ್ಕಿ ನಲುಗಿರುವ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ಅಡ್ಡಿ ಮಾಡಿಲ್ಲ. ನಿಯಮಿತವಾಗಿ ಪೂರೈಕೆ ಮಾಡುತ್ತಾ ಬಂದಿದೆ.
ಒಡಿಶಾ ಪೊಲೀಸ್ ಎಡಿಜಿ ಯಶ್ವಂತ್ ಕುಮಾರ್ ಜೆಥ್ವಾ ಇಂಡಿಯಾ ಟುಡೇ ಜೊತೆ ಮಾತನಾಡಿ, ಬೇರೆ ರಾಜ್ಯಗಳಿಗೆ ಆಕ್ಸಿಜನ್ ಟ್ಯಾಂಕರ್ಗಳನ್ನು ಸಾಗಿಸುವುದರ ಜೊತೆಗೆ, ಒಡಿಶಾದ ಆಸ್ಪತ್ರೆಗಳಿಗೂ ಸಹ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಈ ಬಗ್ಗೆ ರಾಜ್ಯ ಪೊಲೀಸರು ಸಹ ಖಚಿತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮಳೆ, ಗಾಳಿಯಿಂದಾಗಿ ಹೆದ್ದಾರಿಯಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ಬೀಳುತ್ತಿವೆ. ಇವುಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಲು ದುರ್ಬಲ ಜಿಲ್ಲೆಗಳಲ್ಲಿ ಒಡಿಶಾ ವಿಪತ್ತು ಕ್ಷಿಪ್ರ ಕ್ರಿಯಾ ಪಡೆ(ಒಡಿಆರ್ಎಎಫ್)ಯ ಸುಮಾರು 60 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಎಡಿಜಿ ಹೇಳಿದ್ದಾರೆ.
ಆಕ್ಸಿಜನ್ ಪೂರೈಕೆಗೆ ಸುಧಾರಿತ ಯೋಜನೆ ಮಾಡಲಾಗಿದ್ದು, ಎಸ್ಒಪಿಯನ್ನು ಸಿದ್ದಪಡಿಸಲಾಗಿದೆ. ಆಮ್ಲಜನಕ ಉತ್ಪಾದನಾ ಕೇಂದ್ರಗಳು, ಟ್ಯಾಂಕರ್ಗಳು, ಚಾಲಕರು ಹಾಗೂ ಇತರೆ ಸಿಬ್ಬಂದಿಯ ಸುರಕ್ಷತೆ ಬಗ್ಗೆ ಗಮನ ವಹಿಸಲಾಗಿದೆ ಎಂದೂ ಸಹ ಅವರು ಹೇಳಿದರು.
ಬುಧವಾರ ನಾಲ್ಕು ಆಕ್ಸಿಜನ್ ಟ್ಯಾಂಕರ್ಗಳನ್ನು ಅಂಗುಲ್ನಿಂದ ಹೈದ್ರಾಬಾದ್ ಮತ್ತು ವಿಶಾಖಪಟ್ಟಣಂಗಳಿಗೆ ಕಳುಹಿಸಲಾಗಿದೆ. ಒಡಿಶಾದಲ್ಲಿ ಎರಡು ಆಕ್ಸಿಜನ್ ಟ್ಯಾಂಕರ್ಗಳನ್ನು ಜಜ್ಪುರದಿಂದ ಬೆರ್ಹಾಂಪುರ ಮತ್ತು ಭುವನೇಶ್ವರ್ಗೆ ಒಡಿಶಾ ಪೊಲೀಸರ ಕಣ್ಗಾವಲಿನಲ್ಲಿ ಕಳುಹಿಸಿಕೊಡಲಾಗಿದೆ. ಎಲ್ಲಾ ನಿಗದಿನ ಆಕ್ಸಿಜನ್ ಟ್ಯಾಂಕರ್ಗಳನ್ನು ಯಾವುದೇ ಅಡೆತಡೆ ಇಲ್ಲದೇ ನಿಗದಿತ ಸ್ಥಳಗಳಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶ ಎಂದರೆ, ಕಳೆದ 34 ದಿನಗಳಲ್ಲಿ ಒಡಿಶಾ ಪೊಲೀಸರು(Odisha Police) 22542.895 ಮೆಟ್ರಿಕ್ ಟನ್ ಆಕ್ಸಿಜನ್ನ್ನು ಆಮ್ಲಜನಕ ಕೊರತೆ ಇರುವ ರಾಜ್ಯಗಳಿಗೆ ಮೀಸಲಾದ ಹಸಿರು ಕಾರಿಡಾರ್(Green Corridor) ಮೂಲಕ ಲೋಡ್ ಮಾಡಲು ಸಾಗಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ.7 ದಿನಗಳ ಪರಿಹಾರ ಘೋಷಿಸಿದ ಸಿಎಂ ನವೀನ್ ಪಟ್ನಾಯಕ್
ಯಾಸ್ ಚಂಡಮಾರುತದ ಹೊಡೆತಕ್ಕೆ ಸಿಕ್ಕಿ ನಲುಗಿರುವ ಪ್ರದೇಶದ ಜನರಿಗೆ 7 ದಿನಗಳ ಪರಿಹಾರವನ್ನು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಘೋಷಣೆ ಮಾಡಿದ್ದಾರೆ. ಯಾಸ್ ಚಂಡಮಾರುತದಿಂದ ಹಾನಿಗೊಳಗಾದ ಕರಾವಳಿ ಪ್ರದೇಶದಲ್ಲಿ ವಾಸಿಸುತ್ತಿರುವ 128 ಹಳ್ಳಿಗಳಿಗೆ 7 ದಿನಗಳ ಪರಿಹಾರವನ್ನು ನೀಡುವುದಾಗಿ ಹೇಳಿದ್ದಾರೆ.
ಯಾಸ್ ಚಂಡಮಾರುತದ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ, ಸೈಕ್ಲೋನ್ನಿಂದ ಹಾನಿಗೊಳಗಾದ ಎಲ್ಲಾ ಪ್ರಮುಖ ರಸ್ತೆಗಳನ್ನು ದುರಸ್ತಿ ಮಾಡಲು ಹಾಗೂ ಸೈಕ್ಲೋನ್ ಪೀಡಿತ ಜಿಲ್ಲೆಗಳಲ್ಲಿ ಶೇ.80ರಷ್ಟು ವಿದ್ಯುತ್ ಸರಬರಾಜನ್ನು ಮುಂದಿನ 24 ಗಂಟೆಗಳಲ್ಲಿ ಮರುಸ್ಥಾಪಿಸುವಂತೆ ಸಿಎಂ ನವೀನ್ ಪಟ್ನಾಯಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇನ್ನು, ಕರಾವಳಿ ತೀರ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರನ್ನು ಸಮಯಕ್ಕೆ ಸರಿಯಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅತ್ಯುತ್ತಮ ಕಾರ್ಯ ಮಾಡಿದ ಪಂಚಾಯತ್ ಪ್ರತಿನಿಧಿಗಳು, ಜಿಲ್ಲಾಡಳಿತ, ಸಮುದಾಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯನ್ನು ಸಿಎಂ ಅಭಿನಂದಿಸಿದರು. ಇದೇ ವೇಳೆ, ಚಂಡಮಾರುತ ಪೀಡಿತ ಜಿಲ್ಲೆಗಳಲ್ಲಿ ನಿರಂತರ ಆರೋಗ್ಯ ಸೇವೆ ಮಾಡಿದ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸಿಎಂ ನವೀನ್ ಪಟ್ನಾಯಕ್ ಧನ್ಯವಾದಗಳನ್ನು ತಿಳಿಸಿದರು.
ಮುಂದಿನ 12 ಗಂಟೆಗಳಲ್ಲಿ ಯಾಸ್ ಚಂಡಮಾರುತವು 100-110 ಕಿ.ಮೀ.ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಜೊತೆಗೆ ಮಯೂರ್ಭಂಜ್ ಜಿಲ್ಲೆಯಲ್ಲಿ ಚಂಡಮಾರುತ ವೇಗ ಪಡೆದುಕೊಳ್ಳಲಿದ್ದು, ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ.