ಕೊರೊನಾ ಮಧ್ಯೆ ಸುಲಿಗೆ… ಆರೋಪಿಗಳ ಬಂಧಿಸಿದ ಪೊಲೀಸರು
ಮಹಾಮಾರಿ ಕೊರೊನಾ ವೈರಸ್ ಹಾವಳಿ ಮಧ್ಯೆ ರಸ್ತೆಯಲ್ಲಿ ವಾಹನ ಸವಾರರ ಸುಲಿಗೆ ಮಾಡ್ತಿದ್ದ ಕೆಲ ಖತರ್ನಾಕ ಕಳ್ಳರ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲಬುರಗಿ: ಮಹಾಮಾರಿ ಕೊರೊನಾ ವೈರಸ್ನಂತಹ ಸಂಕಷ್ಟದ ಸ್ಥಿತಿಯಲ್ಲಿಯೂ ಮಾರಕಾಸ್ತ್ರ ಹಿಡಿದು ವಾಹನ ಸವಾರರ ಸುಲಿಗೆ ಮಾಡುತ್ತಿದ್ದ ಖತರ್ನಾಕ ಖದೀಮರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
ಮಿರ್ಜಾ ಇಮ್ರಾನ್ ಬೇಗ್ (21), ಮಿರ್ಜಾ ಜುಬೇರ್ ಬೇಗ್ (20) ಹಾಗೂ ಮೋಹಮ್ಮದ್ ಶಮೀರ್ (21) ಬಂಧಿತ ಆರೋಪಿಗಳು. ನಗರದ ಛೋಟಾ ರೋಜಾ ಬಡಾವಣೆಯ ನಿವಾಸಿಗಳಾದ ಇವರು, ಹಗಲು ಹೊತ್ತಿನಲ್ಲಿ ಆಟೋ ಚಲಾಯಿಸಿ ಕೂಲಿ ಕೆಲಸ ಮಾಡುತ್ತಿದ್ದರು. ರಾತ್ರಿಯಾಗುತ್ತಿದ್ದಂತೆ ಮಾರಕಾಸ್ತ್ರ ಹಿಡಿದು ಊರು ಹೊರಗೆ ಸಂಚಾರ ಮಾಡುವ ವಾಹನಗಳನ್ನು ತಡೆದು ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಮೂರು ಲಕ್ಷ ಮೌಲ್ಯದ ಅಟೋ, ಮೂರು ದ್ವಿಚಕ್ರ ವಾಹನಗಳು, ನಗದು ಹಣ, 5 ಮೊಬೈಲ್ಗಳು, ಕೃತ್ಯಕ್ಕೆ ಬಳಸುತ್ತಿದ್ದ ಮಾರಕಾಸ್ತ್ರ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.