Bengaluru Gangrape: ಬೆಂಗಳೂರು ಗ್ಯಾಂಗ್ರೇಪ್ ಕೇಸ್: ಆರೋಪಿಗಳ ಮೇಲೆ ಫೈರಿಂಗ್; ಪೋಲೀಸರು ಗುಂಡು ಹಾರಿಸಿದ್ದೇಕೆ?
ಬೆಂಗಳೂರು(ಮೇ 28): ರಾಮಮೂರ್ತಿನಗರ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ, ರಾಮಮೂರ್ತಿನಗರ ಪೊಲೀಸರು ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ರಾಮಮೂರ್ತಿನಗರದ ಕನಕನಗರದಲ್ಲಿ ಫೈರಿಂಗ್ ನಡೆದಿದೆ. ಪೊಲೀಸರು ಇಂದು ಬೆಳಗ್ಗೆ ಮಹಜರು ಮಾಡಲು ಆರೋಪಿಗಳನ್ನು ಅವರ ಮನೆಗೆ ಕರೆತಂದಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಆಗ ಪೊಲೀಸರು ಆತ್ಮ ರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಇನ್ಸ್‌ಪೆಕ್ಟರ್ ಮತ್ತು ಸಬ್ ಇನ್ಸ್‌ಪೆಕ್ಟರ್ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳು ವಾಸವಿದ್ದ ಕರೆಗೌಡ ಬಡಾವಣೆಯಲ್ಲಿ ಮಹಜರು ನಡೆಸುವಾಗ ಈ ಘಟನೆ ನಡೆದಿದೆ. ಆರೋಪಿ ಸಾಗರ್ ಮತ್ತು ಹೃದಯ್ ಎಂಬುವರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಶರಣಪ್ಪ, ಎಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಪೂರ್ವ ವಿಭಾಗ ಡಿಸಿಪಿ ಡಾ. ಶರಣಪ್ಪ, ನಿನ್ನೆ ಘಟನೆ ಸಂಬಂಧ ಎಸಿಪಿ ಸಖ್ರಿ, ಇನ್ಸ್‌ಪೆಕ್ಟರ್ ಮೆಲ್ವಿನ್ ಆರೋಪಿಗಳನ್ನ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಈ ವೇಳೆ ಎಸಿಪಿ ಸಖ್ರಿ, ಪೇದೆಯೊಬ್ಬರಿಗೆ ಗಾಯವಾಗಿದೆ. ಕೃತ್ಯ ನಡೆದ ಸ್ಥಳ ಪರಿಶೀಲನೆ ನಡೆಸಲು ಬಂದಾಗ ಈ ಘಟನೆ ನಡೆದಿದೆ. ಆಗ ಪೊಲೀಸರು ತಮ್ಮ ಆತ್ಮ ರಕ್ಷಣೆಗಾಗಿ ಆರೋಪಿಗಳಿಗೆ ಗುಂಡು ಹಾರಿಸಿದ್ದಾರೆ. ಹೃದಯ್ ಬಾಬುಗೆ ಬಲಗಾಲಿಗೆ, ಸಾಗರ್ ಗೆ ಎಡಗಾಲಿಗೆ ಗುಂಡು ಹಾರಿಸಲಾಗಿದೆ. ಇಂದು ಬೆಳಗ್ಗೆ 6.30 ರಲ್ಲಿ ಈ ಘಟನೆ ನಡೆದಿದೆ. ಗಾಯಾಳು ಆರೋಪಿಗಳನ್ನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಯುವತಿ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ. ಆರೋಪಿಗಳ ಹಿನ್ನೆಲೆ, ಕೆಲಸ, ಕಾರ್ಯಗಳ ಬಗ್ಗೆ ತನಿಖೆ ನಡೆಯುತ್ತಿದೆ. ರಾಮಮೂರ್ತಿನಗರ ಇನ್ಸ್‌ಪೆಕ್ಟರ್ ಮೆಲ್ವಿನ್ ಸಬ್ ಇನ್ಸ್‌ಪೆಕ್ಟರ್ ಅರವಿಂದ್ ಅವರು ಫೈರಿಂಗ್ ಮಾಡಿದ್ದಾರೆ ಎಂದು ಅವರು ಹೇಳಿದರು.
ದ್ವೇಷದಿಂದ ಅತ್ಯಾಚಾರ?
ರಾಮಮೂರ್ತಿನಗರ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಆರೋಪಿಗಳು ಸಂತ್ರಸ್ತೆ ಮೇಲಿನ ದ್ವೇಷದಿಂದ ಅತ್ಯಾಚಾರ ಎಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೊಹಮ್ಮದ್ ಶೇಕ್ ಎಂಬಾತನಿಗೆ ಸಂತ್ರಸ್ತ ಯುವತಿ ಪರಿಚಿತಳಾಗಿದ್ದಳು. ಶೇಕ್ ಯುವತಿಗೆ ಕೆಲಸದ ಅಮಿಷವೊಡ್ಡಿ ನಗರಕ್ಕೆ ಕರೆತಂದಿದ್ದ. ಆಗ ಆರೋಪಿಗಳು ನಗರದಲ್ಲಿ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ ವಿಷಯ ಯುವತಿಯ ಅರಿವಿಗೆ ಬಂದಿತ್ತು. ಶೇಕ್ನ ಒಳಸಂಚು ಅರಿತ ಯುವತಿ, ಆತನಿಂದ ತಪ್ಪಿಸಿಕೊಂಡು ಹೋಗಿದ್ದಳು. ಬಳಿಕ ಆರೋಪಿಗಳು ಯುವತಿಯನ್ನ ಪತ್ತೆ ಹಚ್ಚಿ ನಗರಕ್ಕೆ ಕರೆತಂದಿದ್ದರು.
ಆರೋಪಿಗಳು ಯುವತಿ ಮೇಲಿನ ದ್ವೇಷಕ್ಕೆ ಆಕೆಯ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದರು. ಆರೋಪಿಗಳು ಚಿತ್ರೀಕರಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಬಾಂಗ್ಲಾದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ಅಸ್ಸಾಂ ರಾಜ್ಯದ ಪೊಲೀಸರಿಂದಲೂ ವಿಡಿಯೋ ಕುರಿತಾಗಿ ತನಿಖೆ ನಡೆದಿತ್ತು. ಕೃತ್ಯದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಭಾಗಿಯಾರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಬಾಂಗ್ಲಾ ದೇಶದ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಾಗಿತ್ತು. ಆ ಬಳಿಕ ಬಾಂಗ್ಲಾ ಪೊಲೀಸರು ಸಂತ್ರಸ್ಥೆ ಕುಟುಂಬದ ಸದಸ್ಯರನ್ನು ಪತ್ತೆಮಾಡಿದ್ದರು. ಆರೋಪಿಗಳ ಕುರಿತು ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ಬಾಂಗ್ಲಾ ಪೊಲೀಸರು ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್ ಪಂತ್ ಗೆ ಮಾಹಿತಿ ನೀಡಿದ್ದರು.
ಕೂಡಲೇ ಪೂರ್ವ ವಿಭಾಗ ಡಿಸಿಪಿ ಡಾ. ಶರಣಪ್ಪ ಅವರಿಗೆ ತನಿಖೆ ನಡೆಸಲು ಕಮಲ್ ಪಂತ್ ಸೂಚನೆ ನೀಡಿದ್ದರು. ಅದರಂತೆ ತನಿಖೆ ನಡೆಸಲು ಮುಂದಾದ ಪೊಲೀಸರು ಆರೋಪಿಗಳ ಇರುವಿಕೆಯನ್ನು ಪತ್ತೆಹಚ್ಚಿದ್ದರು. ಆವಲಹಳ್ಳಿಯಲ್ಲಿ ಆರೋಪಿಗಳು ತಲೆಮರೆಸಿಕೊಂಡಿರುವುದನ್ನು ಪತ್ತೆ ಹಚ್ಚಿ ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಇನ್ನೂ ಪತ್ತೆಯಾಗದ ಸಂತ್ರಸ್ತ ಯುವತಿ
ಇಷ್ಟೆಲ್ಲಾ ಬೆಳವಣಿಗೆಗಳು ನಡೆದರೂ ಇನ್ನೂ ಸಹ ಸಂತ್ರಸ್ತೆ ಪತ್ತೆಯಾಗಿಲ್ಲ. ಯುವತಿಯನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚನೆ ಮಾಡಲಾಗಿದೆ. ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್ 376(D), 67 ಐಟಿ ಆಕ್ಟ್, 14 ಫಾರಿನರ್ಸ್ ಆಕ್ಟ್ ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಪೊಲೀಸರ ತನಿಖೆ ಹೇಗಿತ್ತು?
ಆರೋಪಿ ಹೃದಯ್ ಬಾಬು ಟಿಕ್ ಟಾಕ್ ಮಾಡ್ತಿದ್ದ. ಆ ವೇಳೆ ಬಾಂಗ್ಲಾ ದೇಶದ ತನ್ನ ಪರಿಚಿತರ ಜೊತೆ ಅತ್ಯಾಚಾರದ ವಿಡಿಯೋವನ್ನು ಶೇರ್ ಮಾಡಿದ್ದ. ನಂತರ ಬಾಂಗ್ಲಾ ದೇಶದ ಸ್ಥಳೀಯ ಸುದ್ದಿವಾಹಿನಿಯಲ್ಲಿ ವಿಡಿಯೋ ಪ್ರಸಾರವಾಗಿತ್ತು.ವಿಡಿಯೋ ಬಿತ್ತರವಾದ ಬಳಿಕ ಬಾಂಗ್ಲಾದೇಶ ಪೊಲೀಸರು ಆರೋಪಿಯ ಗುರುತು ಪತ್ತೆ ಹಚ್ಚಿದ್ದರು. ಆತನ ಮನಗೆ ಹೋಗಿ ಪರಿಶೀಲನೆ ನಡೆಸಿದಾಗ ಆತ ಬೆಂಗಳೂರಿನಲ್ಲಿ ಇರೋದು ಪತ್ತೆಯಾಗಿತ್ತು. ಬಳಿಕ ಬಾಂಗ್ಲಾ ಪೊಲೀಸರು ಬೆಂಗಳೂರು ಪೊಲೀಸರ ಸಂಪರ್ಕ ಮಾಡಿದ್ದರು. ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಗೆ ವಿಡಿಯೋ ಹಾಗೂ ಮಾಹಿತಿ ರವಾನೆ ಆಗಿತ್ತು. ನಂಬರ್ ಪರಿಶೀಲನೆ ನಡೆಸಿದಾಗ ಅದು ರಾಮಮೂರ್ತಿ ನಗರದ ಕಡೆ ಇರುವುದಾಗಿ ತೋರಿಸುತ್ತಿತ್ತು. ತಕ್ಷಣ ಡಿಸಿಪಿ ಶರಣಪ್ಪ ಹಾಗೂ ರಾಮಮೂರ್ತಿ ನಗರ ಪೊಲೀಸರ ತಂಡ ಆರೋಪಿಗಳನ್ನ ಬಲೆಗೆ ಬೀಳಿಸಿದ್ದಾರೆ.
ಆರೋಪಿಗಳು-ಸಂತ್ರಸ್ತೆ ನಡುವೆ ಜಗಳ
ಸಂತ್ರಸ್ತ ಯುವತಿ ಹಾಗೂ ಆರೋಪಿಗಳ ನಡುವೆ ಹಣಕಾಸು ವಿಚಾರಕ್ಕೆ ಗಲಾಟೆ ಆಗಿತ್ತು ಎಂಬ ವಿಷಯವೂ ಸಹ ಸದ್ಯಕ್ಕೆ ಬೆಳಕಿಗೆ ಬಂದಿದೆ. ಗಲಾಟೆ ಬಳಿಕ ಸಂತ್ರಸ್ತ ಯುವತಿ ಇಬ್ಬರು ಯುವತಿಯರ ಜೊತೆ ಕೇರಳಕ್ಕೆ ಹೋಗಿದ್ದಳು. ಕೇರಳಕ್ಕೆ ಹೋದವರನ್ನು ಆರೋಪಿಗಳು ವಾಪಸ್ ಕರೆಸಿಕೊಂಡಿದ್ದರು. ಕರೆಸಿಕೊಂಡು ಕಳೆದ ಆರು ದಿನಗಳ ಹಿಂದೆ ಮೀಟಿಂಗ್ ಮಾಡಿದ್ದರು. ಒಟ್ಟಿಗೆ ಎಣ್ಣೆ ಪಾರ್ಟಿ ಮಾಡಿದ್ದರು. ಆರೋಪಿಗಳು ಪಾರ್ಟಿ ಮಾಡಿರುವ ವಿಡಿಯೋಗಳನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಪಾರ್ಟಿ ಬಳಿಕ ಹಣಕಾಸು ವಿಚಾರಕ್ಕೆ ಮತ್ತೆ ಗಲಾಟೆ ಮಾಡಿದ್ದರು. ಗಲಾಟೆ ವೇಳೆ ಆರೋಪಿಗಳು ಯುವತಿ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದರು. ಬಳಿಕ ಲೈಂಗಿಕ ದೌರ್ಜನ್ಯ ಎಸಗಿ ವಿಕೃತಿ ಮೆರೆದಿದ್ದಾರೆ ಎಂಬ ವಿಷಯ ಬಯಲಾಗಿದೆ.
ಸಿಎಂಗೆ ಮಾಹಿತಿ ರವಾನೆ
ಇನ್ನು, ಯುವತಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ಮಾಹಿತಿ ನೀಡಿದ್ದಾರೆ. ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾಗಿ ಮಾಹಿತಿ ಕೊಟ್ಟಿದ್ದಾರೆ. ಯುವತಿ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳ ಬಂಧನ ಹಾಗೂ ಪ್ರಕರಣ ತನಿಖೆ ಬಗ್ಗೆ ಗೃಹ ಸಚಿವರು ಮಾಹಿತಿ ನೀಡಿದ್ದಾರೆ.