ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವವ ಅನರ್ಹರಿಗೆ ಮಹತ್ವದ ಮಾಹಿತಿ

ಬೆಂಗಳೂರು : ಸರ್ಕಾರ ನಿಗದಿಪಡಿಸಿದ ಮಾನದಂಡಗಳಿಗೆ ವಿರುದ್ಧವಾಗಿ ಆದ್ಯತಾ ಪಡಿತರ ಚೀಟಿ(ಅಂತ್ಯೋದಯ ಮತ್ತು ಬಿಪಿಎಲ್​) ಹೊಂದಿದ್ದರೆ ಅವುಗಳನ್ನು ಜೂನ್ 30ರೊಳಗೆ ತಹಶೀಲ್ದಾರರಿಗೆ ಹಿಂದಿರುಗಿಸಿ, ಆದ್ಯತೇತರ ಕಾರ್ಡ್​​ಗಳನ್ನು ಪಡೆಯಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಕಾಯಂ ನೌಕರರು ಅಂದರೆ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು, ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು, ನಿಗಮಗಳು/ಸ್ವಾಯತ್ತ ಸಂಸ್ಥೆಗಳಲ್ಲಿ ನೌಕರಿಯಲ್ಲಿರುವವರು, ಆದಾಯ ತೆರಿಗೆ, ಸೇವಾತೆರಿಗೆ, ವ್ಯಾಟ್​​, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟರ್​ಗಿಂತಲೂ ಹೆಚ್ಚಿನ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವುದು,

ನಗರ ಪ್ರದೇಶದಲ್ಲಿ ಸಾವಿರ ಅಡಿಗಳಿಗಿಂತಲೂ ಅಧಿಕವಾಗಿರುವ ವಿಸ್ತೀರ್ಣದ ಮನೆ ಹೊಂದಿರುವ ಕುಟುಂಬಗಳು, ಜೀವನ ಉಪಯೋಗಕ್ಕಾಗಿ ಸ್ವತ ಓಡಿಸುವ ಟ್ರ್ಯಾಕ್ಟರ್, ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ ಹೊರತುಪಡಿಸಿ ಉಳಿದ ನಾಲ್ಕು ಚಕ್ರವಾಹನ ಹೊಂದಿರುವ ಕುಟುಂಬಗಳು, ವಾರ್ಷಿಕ ಕುಟುಂಬ ಆದಾಯವು 1.20 ಲಕ್ಷಗಳಿಗಿಂತಲೂ ಅಧಿಕ ಇರುವ ಕುಟುಂಬಗಳು ಸರ್ಕಾರ ನಿಗದಿ ಪಡಿಸಿದ ಮಾನದಂಡಗಳ ಅನ್ವಯ ಅಂತ್ಯೋದಯ ಮತ್ತು ಆದ್ಯತಾ(ಬಿಪಿಎಲ್​) ಕಾರ್ಡ್​ ಹೊಂದಲು ಅನರ್ಹರಾಗಿರುತ್ತಾರೆ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಸಬಲರು ಮತ್ತು ಅನರ್ಹರು ಅಂತ್ಯೋದಯ ಮತ್ತು ಆದ್ಯತಾ ಕಾರ್ಡ್​ಗಳನ್ನ ಹಿಂತಿರುಗಿಸುವಂತೆ ಮನವಿ ಮಾಡಲಾಗಿದೆ. ಈ ಮನವಿಗಳಿಗೆ ಕೆಲವರು ಸ್ಪಂದಿಸಿ ಕಾರ್ಡ್​ ಹಿಂದಿರುಗಿಸಿ ಅರ್ಹ ಕಾರ್ಡ್​ ಪಡೆದುಕೊಂಡಿದ್ದಾರೆ. ಆದರೆ ಈಗಲೂ ಅನರ್ಹರಲ್ಲಿ ಅಂತ್ಯೋದಯ ಮತ್ತು ಬಿಪಿಎಲ್​ ಕಾರ್ಡ್​ಗಳು ಪತ್ತೆಯಾಗಿದ್ದು, ಅವುಗಳನ್ನ ಜೂನ್​ 30ರೊಳಗೆ ಹಿಂತಿರುಗಿಸುವಂತೆ ತಿಳಿಸಲಾಗಿದೆ.

ತದನಂತರ ಅವರ ಬಳಿ ಈ ಕಾರ್ಡ್​ಗಳು ಪತ್ತೆಯಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ಹಂಚಿಕೆ ಪಡೆದ ಆಹಾರ ಧಾನ್ಯಗಳ ಮೌಲ್ಯವನ್ನು ವಸೂಲಿ ಮಾಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *