ಕೊರೋನಾ ಪ್ಯಾಕೇಜ್ ಸರ್ಕಾರದ ಕಣ್ಣೊರೆಸುವ ತಂತ್ರ ಪ್ರತಿ ಬಿಪಿಲ್ ಕುಟುಂಬಕ್ಕೆ ರೂ 10,000 ನೀಡುವಂತೆ: ಪ್ರಿಯಾಂಕ್ ಖರ್ಗೆ ಆಗ್ರಹ

ಕಲಬುರಗಿ :ರಾಜ್ಯ ಸರ್ಕಾರ ಘೋಷಿಸಿರುವ ರೂ 1250 ಕೋಟಿ ಲಾಕ್ ಡೌನ್ ಪ್ಯಾಕೇಜ್ ಇತರೆ ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಅತ್ಯಲ್ಪವಾಗಿದ್ದು ಸರ್ಕಾರದ ಕಣ್ಣೊರೆಸುವ ತಂತ್ರವಾಗಿದೆ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ‌ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಅವರು ಟೀಕಿಸಿದ್ದು ಪ್ರತಿಯೊಂದು ಬಿಪಿಲ್ ಕುಟುಂಬಕ್ಕೆ ರೂ 10000 ಹಣ ಆರ್ಥಿಕ ಸಹಾಯ ನೀಡುವಂತೆ ಅವರು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದ ಲಾಕ್ ಡೌನ್ ಪ್ಯಾಕೇಜ್ ಹೃದಯಶೂನ್ಯವಾಗಿದ್ದು ತಾರತಮ್ಯದಿಂದ ಕೂಡಿದೆ ಎಂದು ಹೇಳಬೇಕಾಗಿದೆ.

ರಾಜ್ಯದ ಕೋಟ್ಯಾಂತರ ರೈತರ ಪೈಕಿ ಕೇವಲ 89,000 ರೈತರನ್ನು ಪರಿಗಣಿಸಲಾಗುತ್ತಿದೆ. ರಾಜ್ಯದ 15-20 ಲಕ್ಷ ಆಟೋ ಮತ್ತು ಟ್ಯಾಕ್ಸಿ ಚಾಲಕರ ಪೈಕಿ ಕೇವಲ 2.5 ಲಕ್ಷ ಚಾಲಕರನ್ನು ಮಾತ್ರ ಈ ಪ್ಯಾಕೇಜ್ ವ್ಯಾಪ್ತಿಗೆ ಒಳಪಡಿಸಲು ಸರ್ಕಾರ ಯೋಚಿಸಿತ್ತಿದೆ. ಅಸಂಘಟಿತ ವಲಯದ 50 ಲಕ್ಷ ಕಾರ್ಮಿಕರ ಪೈಕಿ ಕೇವಲ 3 ಲಕ್ಷ ಕಾರ್ಮಿಕರನ್ನು ಮಾತ್ರ ಪರಿಗಣಿಸಿ ಉಳಿದವರಿವರಿಗೆ ಅನ್ಯಾಯವೆಸಲಾಗುತ್ತಿದೆ. ಕುಟುಂಬ ನಿರ್ವಹಣೆಗಾಗಿ ಹತ್ತಾರು ಲಕ್ಷ‌ ಕುಟುಂಬಗಳು ಬೀದಿಬದಿಯ ವ್ಯಾಪಾರವನ್ನೇ ಅವಲಂಬಿಸಿವೆ. ಆದರೆ ಅವರ ಪೈಕಿ ಕೇವಲ 2.2 ಲಕ್ಷ ರೂ 2000 ರಂತೆ ಮಾತ್ರ ಪರಿಗಣಿಸಲಾಗುತ್ತಿದೆ. ಇದು ರಾಜ್ಯ ಸರ್ಕಾರ ಮಾಡುತ್ತಿರುವ ತಾರತಮ್ಯವಲ್ಲವೇ ? ಎಂದು ಅವರು ಪ್ರಶ್ನಿಸಿದ್ದಾರೆ.

ದಕ್ಷಿಣದ ಬೇರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಲಾಕ್ ಡೌನ್ ಪ್ಯಾಕೇಜ್ ಅತ್ಯಲ್ಪವಾಗಿದೆ ಎಂದಿರುವ ಶ್ರೀ ಪ್ರಿಯಾಂಕ್ ಖರ್ಗೆ ಅವರು ತಮಿಳುನಾಡು ಸರ್ಕಾರ ಅಲ್ಲಿನ 2.07 ಕೋಟಿ ಪಡಿತರ‌ ಕುಟುಂಬಗಳಿಗೆ ತಲಾ ರೂ‌ 4,000 ಘೋಷಿಸಿದೆ. ಆಂಧ್ರ ಸರ್ಕಾರ ಚಾಲಕರಿಗೆ ರೂ 10,000, ವಿವಿಧ ವರ್ಗದ ಕಾರ್ಮಿಕರಿಗೆ ರೂ 5,000, ಹಾಗೂ ಸ್ವಯಂ ಉದ್ಯೋಗದಾರರಿಗೆ ರೂ 15,000 ನೀಡುತ್ತಿದೆ. ಕೇರಳ ಸರ್ಕಾರ ರೂ 20,000 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದೆ. ಜೊತೆಗೆ ಆಕ್ಷಿಜನ್ ಕೊರತೆಯಿಂದ ಇತ್ತೀಚಿಗೆ ತಿರುಪತಿಯಲ್ಲಿ ಮೃತರಾದ ಪ್ರತಿಯೊಬ್ಬ ವ್ಯಕ್ತಿಗಳ ಕುಟುಂಬ ವರ್ಗದವರಿಗೆ ತಲಾ 10 ಲಕ್ಷ ಪರಿಹಾರ ಘೋಷಿಸಿದೆ. ಆದರೆ, ರಾಜ್ಯ ಸರ್ಕಾರ ಇದೇ ರೀತಿ ಆಕ್ಷಿಜನ್ ಕೊರತೆಯಿಂದ ಚಾಮರಾಜನಗರ ದಲ್ಲಿ ಮೃತರಾದವರಿಗೆ ತಲಾ 2 ಮಾತ್ರ ಘೋಷಿಸಿದೆ. ಪ್ರಮಖ ಅಂಶವೆಂದರೆ, ಇದೇ ರೀತಿ ಘಟನೆಗಳು ನಡೆದು ಕೋಲಾರ ಹಾಗೂ ಕಲಬುರಗಿ ಯಲ್ಲೂ ಸಾವನ್ನಪ್ಪಿದವರಿಗೆ ಯಾವುದೆ ಪರಿಹಾರ ಘೋಷಿಸಿಲ್ಲ. ಕಡಿಮೆ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿರುವ ಅಥವಾ ಕಡಿಮೆ ಆರ್ಥಿಕ ಸ್ಥಿತಿಗತಿಯನ್ನು ಹೊಂದಿರುವ ನಮ್ಮ ನೆರೆಯ ರಾಜ್ಯಗಳು ಅಲ್ಲಿನ‌ ಜನರಿಗೆ ಹೆಚ್ಚಿನ ನೆರವು ನೀಡುತ್ತಿದೆ. ಆದರೆ, ಹೆಚ್ಚಿನ ಆರ್ಥಿಕ ಸಂಪನ್ಮೂಲ ಹೊಂದಿರುವ ನಮ್ಮ ರಾಜ್ಯದಲ್ಲಿ ಸರ್ಕಾರ ಅತ್ಯಂತ ಕಡಿಮೆ ಪರಿಹಾರ ಘೋಷಿಸಿದೆ ನಗರದಲ್ಲಿ ಎಂದು ಅವರು ವಿವರಿಸಿದ್ದಾರೆ.

ರಾಜ್ಯ ಸರ್ಕಾರ ಕಳೆದ ವರ್ಷ ಘೋಷಿಸಿದ ಪ್ಯಾಕೇಜ್ ನ‌ ಒಟ್ಟು ಪರಿಹಾರದಲ್ಲಿ ರೂ 700 ಕೋಟಿ ಕೂಡಾ ಪಾವತಿಸಿಲ್ಲ ಎಂದು ಹೇಳಿರುವ ಶಾಸಕರು ಅಂಕಿ ಅಂಶ ಸಮೇತ ರಾಜ್ಯ ಸರ್ಕಾರದ ತಾರತಮ್ಯ ನೀತಿಯನ್ನು ವಿವರಿಸಿದ್ದಾರೆ.

ಕಳೆದ ಸಲ ತೋಟಗಾರಿಕೆ ಬೆಳೆಗಾರರರಿಗೆ ಒಟ್ಟು 137 ಕೋಟಿ ಘೋಷಿಸಲಾಗಿತ್ತು. ಆದರೆ ಪಾವತಿಸಿದ್ದು ಕೇವಲ 58 ಕೋಟಿ ಮಾತ್ರ. ಅದೇ ರೀತಿ, ಹೂವು ಬೆಳೆಗಾರರಿಗೆ ರೂ 31 ಕೋಟಿ‌ ಘೋಷಿಸಲಾಗಿತ್ತು ಆದರೆ ಪಾವತಿಸಿದ್ದ ಕೇವಲ ರೂ 15 ಕೋಟಿ ಮಾತ್ರ. ಸವಿತಾ ಸಮಾಜದ 2.5 ಲಕ್ಷ ಕುಟುಂಬಳಿಗೆ ತಲಾ ರೂ 5,000 ಘೋಷಿಸಲಾಗಿತ್ತು. ಆದರೆ, ಪಾವತಿಸಿದ್ದು ಕೇವಲ 55,466 ಕುಟುಂಬಗಳಿಗೆ ಮಾತ್ರ. ರಾಜ್ಯದ 7.75 ಲಕ್ಷ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ತಲಾ ರೂ 5,000 ಘೋಷಿಸಲಾಗಿತ್ತು ಆದರೆ ಪಾವತಿಸಿದ್ದು ಕೇವಲ 2.14 ಲಕ್ಷ ಚಾಲಕರಿಗೆ. 16.48 ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ ರೂ 5,000 ಘೋಷಿಸಲಾಗಿತ್ತು. ಆದರೆ, ಕೇವಲ 5 ಲಕ್ಷ ಕಾರ್ಮಿಕರಿಗೆ ಮಾತ್ರ ಪಾವತಿಸಲಾಗಿದೆ. ಹಾಗೆ, 1,25,000 ನೇಕಾರರಿಗೆ ತಲಾ ರೂ 2,000 ಘೋಷಿಸಲಾಗಿತ್ತು. ಆದರೆ ಪಾವತಿಸಿದ್ದು ಮಾತ್ರ ಕೇವಲ 49,745 ಜನರಿಗೆ ಮಾತ್ರ. ಈ ಎಲ್ಲ ಸಂಗತಿಗಳನ್ನು ಹಾಗೂ ಅಂಕಿ‌ಅಂಶಗಳನ್ನು ಗಮನಿಸಿದರೆ ರಾಜ್ಯ ಸರ್ಕಾರದ ಈ ಸಲದ ಲಾಕ್ ಡೌನ್ ಪ್ಯಾಕೇಜ್ ಕೂಡಾ ಕಣ್ಣೊರೆಸುವ ತಂತ್ರದಂತೆ ಕಂಡುಬರುತ್ತಿದೆ.

ರಾಜ್ಯ ಸರ್ಕಾರ ಈ ಕೂಡಲೇ ಬಿಪಿಲ್ ಕಾರ್ಡುದಾರರಿಗೆ ತಲಾ ರೂ 10,000 ಪರಿಹಾರ ನೀಡುವ ಮೂಲಕ ಲಾಕ್ ಡೌನ್ ನಿಂದಾದ ಸಂಕಷ್ಟದ ಸಮಯದಲ್ಲಿ ನೆರವು ನೀಡಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *