Lockdown Effect: ಮೇ ತಿಂಗಳು ವಾಹನಗಳ ಟ್ಯಾಕ್ಸ್ ಕಟ್ಟುವಂತಿಲ್ಲ; ವಿನಾಯಿತಿ ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು(ಮೇ 30): ಕೊರೋನಾ ಮಹಾಮಾರಿ ಜನರನ್ನು ಬೆಂಬಿಡದೆ ಕಾಡುತ್ತಿದೆ. ಹೀಗಾಗಿ ರಾಜ್ಯಾದ್ಯಂತ ಲಾಕ್​ಡೌನ್​ ಹೇರಲಾಗಿದೆ. ಜೂನ್​ 7ರವರೆಗೆ ಲಾಕ್​ಡೌನ್​ ಜಾರಿಯಲ್ಲಿರಲಿದೆ. ಈ ನಡುವೆ ವಾಹನ ಸವಾರರಿಗೊಂದು ಸಿಹಿಸುದ್ದಿ ಇದೆ.  ಕೊರೋನಾ ಲಾಕ್​ಡೌನ್​ ಹಿನ್ನೆಲೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರುವುದರಿಂದ ಮೇ ತಿಂಗಳ ಮೋಟಾರು ವಾಹನ ತೆರಿಗೆಯನ್ನು ಕಟ್ಟುವಂತಿಲ್ಲ. ತೆರಿಗೆ ಪಾವತಿ ಮಾಡುವುದರಿಂದ ವಿನಾಯಿತಿ ನೀಡಿ ಕರ್ನಾಟಕ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹೌದು, ಸದ್ಯ ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಲ್ಲಿದ್ದು, ವಾಹನ ಸಂಚಾರಕ್ಕೆ ನಿಷೇಧ ಇರುವುದರಿಂದ ಕರ್ನಾಟಕ ಸರ್ಕಾರ ವಾಹನ ಸವಾರರಿಗೆ ಈ ವಿನಾಯಿತಿ ನೀಡಿದೆ. ರಾಜ್ಯದಲ್ಲಿ ನೋಂದಾಯಿಸಿರುವ ಎಲ್ಲಾ ಸಾರಿಗೆ ಪ್ರಯಾಣಿಕ ವಾಹನಗಳಿಗೆ ಮಾತ್ರ ಅನ್ವಯವಾಗುವಂತೆ 2021ರ ಮೇ ತಿಂಗಳ ಅವಧಿಗೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಕರ್ನಾಟಕ ರಾಜ್ಯ ಸರ್ಕಾರ ಆದೇಶಿಸಿದೆ. ಹೊಸ ವಾಹನಗಳ ನೊಂದಣಿಯನ್ನು ಹೊರತುಪಡಿಸಿ ಈ ಆದೇಶ ಹೊರಡಿಸಲಾಗಿದೆ.

ಕೊರೋನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆ, ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಹೀಗಾಗಿ ಖಾಸಗಿ ವಾಹನಗಳ ಸಂಚಾರಕ್ಕೂ ಸರ್ಕಾರ ನಿರ್ಬಂಧ ಹೇರಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮೇ ತಿಂಗಳ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿದೆ.

ಸದ್ಯ ರಾಜ್ಯದಲ್ಲಿ ಕೊರೋನಾ ಆರ್ಭಟ ತುಸು ತಗ್ಗಿದೆ. ಕರ್ನಾಟಕದಲ್ಲಿ ಶನಿವಾರ 20,628 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ 4,889 ಕೊರೋನಾ ಕೇಸ್​ಗಳು ವರದಿಯಾಗಿವೆ. ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.14.95ರಷ್ಟಿದ್ದರೆ, ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.8.97ರಷ್ಟಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 42,444 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ. ಬೆಂಗಳೂರಿನಲ್ಲಿ 21,126 ಜನರು ಕೊರೋನಾದಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿ ಕೊರೊನಾ ಕೇಸ್ ಭಾರೀ ಇಳಿಕೆ ಕಂಡಿದೆ.  ಬೆಂಗಳೂರಲ್ಲಿ 5 ಸಾವಿರಕ್ಕೂ ಕಡಿಮೆ ಕೇಸ್​ ಪತ್ತೆಯಾಗಿವೆ ಎಂದು ಸುಧಾಕರ್​ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಪರಿಣಾಮಕಾರಿ ಲಾಕ್​ಡೌನ್ ಜಾರಿ ಮಾಡಿದ್ದರಿಂದ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಸಚಿವರು ಹೇಳುತ್ತಿದ್ದಾರೆ.

ಇನ್ನು, ಶನಿವಾರ ಸಿಎಂ ಬಿಎಸ್​ ಯಡಿಯೂರಪ್ಪ ಕೊರೋನಾ ಸೋಂಕು ಹೆಚ್ಚಿರುವ ಜಿಲ್ಲೆಗಳ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿದ್ದರು. ಸೋಂಕು(Coronavirus) ಹೆಚ್ಚಿರುವ ಹಳ್ಳಿಗಳ ಮೇಲೆ ನಿಗಾ ವಹಿಸುವಂತೆ ಸಿಎಂ ಬಿಎಸ್​ವೈ ಸೂಚನೆ ನೀಡಿದ್ದರು. ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗಿದ್ದಲ್ಲಿ ಅಲ್ಲಿ ಅಗತ್ಯ ಚಿಕಿತ್ಸೆ ಕ್ರಮ ವಹಿಸಬೇಕು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಕಡಿಮೆ ಸೋಂಕು ಇರುವ ಹಳ್ಳಿಗಳಲ್ಲಿ ಇನ್ಮುಂದೆ ಸೋಂಕು ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ಸರ್ಕಾರದಿಂದ ಎಲ್ಲ ರೀತಿಯ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ. ಅದನ್ನು ಬಳಸಿಕೊಂಡು ಕೊವೀಡ್ ಕಡಿಮೆ ಮಾಡಲು ಕ್ರಮ ವಹಿಸಬೇಕು. ನಗರ ಪ್ರದೇಶಗಳಲ್ಲಿ ಕೊವೀಡ್ ಹೆಚ್ಚಳವಾಗದ ರೀತಿ ಶ್ರಮ ವಹಿಸಬೇಕು. ಇವತ್ತಿನ ಸಭೆಯಲ್ಲಿ ಜನಪ್ರತಿನಿಧಿಗಳು ಸಲಹೆ ಕೊಡಿ ಎಂದು ಸಿಎಂ ಯಡಿಯೂರಪ್ಪ ಸೂಚಿಸಿದ್ದರು.

ಕೋವಿಡ್ ಎರಡನೇ ಅಲೆ(Corona second Wave) ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ಸದ್ಯ ಪ್ರಕರಣಗಳು ಕಡಿಮೆ ಆಗ್ತಿರೋದು ನೆಮ್ಮದಿ ವಿಚಾರ. ಕೇಸ್ ಕಡಿಮೆ‌ ಆಗ್ತಿದೆ ಎಂದು ಕೈಕಟ್ಟಿ ಕೂರುವಂತಿಲ್ಲ. ಹಳ್ಳಿಗಳಲ್ಲಿ ಟೆಸ್ಟ್ (corona test)ಹೆಚ್ಚೆಚ್ಚು ನಡೆಸಬೇಕು. ಅಗತ್ಯ ಔಷಧಿಗಳನ್ನ ಆಸ್ಪತ್ರೆಗಳಿಗೆ ಒದಗಿಸಬೇಕು ಎಂದು ಹೇಳಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *