ಕಲಬುರಗಿ : ಮುಂದಿನ 30 ವರ್ಷಗಳಲ್ಲಿ ಕಲಬುರಗಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಚಿಂತನೆ “ಕಲಬುರಗಿ ವಿಜನ್-2050” ಕನಸು ಬಿಚ್ಚಿಟ್ಟ ಸಚಿವ ನಿರಾಣಿ
ಕಲಬುರಗಿ : ಮುಂದಿನ 30 ವರ್ಷಗಳಲ್ಲಿ ಕಲಬುರಗಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ “ಕಲಬುರಗಿ ವಿಜನ್-2050” ಎಂಬ ಅಭಿವೃದ್ಧಿ ಕಾರ್ಯಕ್ರಮ ಮಾಡಲು ಚಿಂತನೆ ನಡೆಸಿರುವುದಾಗಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ತಿಳಿಸಿದರು.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಅವರು, ಇಡೀ ರಾಜ್ಯದಲ್ಲೇ ಈ ಯೋಜನೆ ಪ್ರಥಮವಾಗಿದ್ದು, ಈ ಕಾರ್ಯಕ್ರಮ ಇನ್ನೂ ಚರ್ಚೆ ಹಂತದಲ್ಲಿದೆ ಎಂದು ಹೇಳಿದರು.
ಈ ಕುರಿತು ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ ಮುಂತಾದ ಕ್ಷೇತ್ರಗಳ 15 ಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿಗಳಲ್ಲಿ ಶಾಸಕರು, ನಿವೃತ್ತಿ ಹೊಂದಿದವರು, ಆಯಾ ಕ್ಷೇತ್ರಗಳಲ್ಲಿ ಅನುಭವ-ಪರಿಣತಿ ಹೊಂದಿರುವವರು ಸೇರಿಸಿಕೊಳ್ಳಲಾಗುವುದು. ಆಯಾ ಇಲಾಖೆಯ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳನ್ನು ಆಯಾ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳನ್ನಾಗಿ ಮಾಡಲಾಗುವುದು ಎಂದು ಅವರು ವಿವರಿಸಿದರು.
ಈ ಎಲ್ಲಾ ಸಮಿತಿಯ ಅಧ್ಯಕ್ಷರುಗಳು ಪ್ರಧಾನ ಸಮಿತಿ ಸದಸ್ಯರಾಗಿರುತ್ತಾರೆ. ಪ್ರಧಾನ ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು ಮುಂತಾದವರು ಸದಸ್ಯರಿರುತ್ತಾರೆ.
ಯಾವುದೇ ಫಲಾಪೇಕ್ಷೆ ಬಯಸದ ಕಲಬುರಗಿ ಜಿಲ್ಲೆಯ ಬುದ್ಧಿಜೀವಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುವುದು. ರಾಜ್ಯದ ನಿವೃತ್ತ ಮುಖ್ಯಕಾರ್ಯದರ್ಶಿ ರಂಗನಾಥ್, ಹಿರಿಯ ಐಎಎಸ್ ಅಧಿಕಾರಿ ಡಾ.ಶಾಲಿನಿ ರಜನೀಶ್ ಅವರು ಹೇಳಿದರು. ಸಮಿತಿ ರಚನೆಯಾದ ಮೇಲೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಮುಖರಿಂದ ಸದಸ್ಯರಿಗೆ ತರಬೇತಿ ಕೊಡಿಸಲಾಗುವುದು ಎಂದರು.
“ಕಲಬುರಗಿ ವಿಜನ್-2050” ನಿಟ್ಟಿನಲ್ಲಿ ಬಹಳಷ್ಟು ಕೆಲಸ ಮಾಡುವುದಿದೆ. ಭಾರತ ಸೇರಿದಂತೆ 154 ದೇಶಗಳಲ್ಲಿ ಕನ್ಸಲ್ಟೆನ್ಸಿ ಸೇವೆ ಒದಗಿಸುತ್ತಿರುವ ಐಎಲ್‍ಅಂಡ್‍ಎಫ್‍ಎಸ್‍ಎಲ್ ಮತ್ತು ಅಮೇರಿಕಾ ಮೂಲದ ಇ ಅಂಡ್ ವೈ ಕಂಪೆನಿಗಳಿಂದ ಕಲಬುರಗಿ ಅಭಿವೃದ್ಧಿ ಸಲುವಾಗಿ ಸೇವೆ ಪಡೆಯುವ ನಿಟ್ಟಿನಲ್ಲಿ ಅಲೋಚಿಸಲಾಗಿದೆ ಎಂದು ಅವರು ಹೇಳಿದರು.
ಕಲಬುರಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಸರಿಸಬೇಕಿದೆ. ಕಲ್ಯಾಣ ಕರ್ನಾಟಕ ಎಂಬ ಹೆಸರು ಕೇವಲ ನಾಮಕರಣ ಎಂಬುದಕ್ಕೆ ಸೀಮಿತವಾಗದೆ, ಅಭಿವೃದ್ಧಿಯ ವಸ್ತುಸ್ಥಿತಿಯಾಗಬೇಕು ಎಂದು ಅವರು ಪ್ರತಿಪಾದಿಸಿದರು.
ತಮ್ಮ ಸ್ವಕ್ಚೇತ್ರ ಬಾಗಲಕೋಟೆಯ ಬೀಳಗಿಯಲ್ಲಿ ಶಿಕ್ಷಣ ಅಭಿವೃದ್ಧಿಯಲ್ಲಿ ಮಾಡಿರುವ ಸಾಧನೆಗಳನ್ನು ಉಲ್ಲೇಖಿಸಿದ ಅವರು, “ಕಲಬುರಗಿ ವಿಜನ್-2050”ಯಲ್ಲಿ ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಏಳ್ಗೆ ಸಾಧಿಸಬಹುದಾಗಿದೆ ಎಂದು ಒತ್ತಿ ಹೇಳಿದರು.
ನೀರಿನ ವ್ಯವಸ್ಥೆ, ಲೈಮ್ ಸ್ಟೋನ್‍ಗಳಿಂದ ಕಲಬುರಗಿ ಜಿಲ್ಲೆ ಶ್ರೀಮಂತವಾಗಿದೆ. ಆದರೆ, ಉದ್ದಿಮೆಗಳಿಗೆ ಇವುಗಳನ್ನು ಬಳಸಿಕೊಂಡು ಕರ್ನಾಟಕದ ಹೊರಗಿನವರು ಇಲ್ಲಿ ಅಭಿವೃದ್ಧಿಯಾಗುತ್ತಿದ್ದಾರೆ. ಜಿಲ್ಲೆಯ ಎಂಬಿಎ, ಎಂಟೆಕ್, ಪಿಎಚ್‍ಡಿ ಪದವೀಧರರಿಗೆ ಸಣ್ಣ-ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಿಕೊಟ್ಟರೆ, ಮುಂದಿನ ದಿನ 10-20 ವರ್ಷಗಳಲ್ಲಿ ನೂರಾರು ಜನರಿಗೆ ಉದ್ಯೋಗ ನೀಡುವ ಉದ್ಯೋಗದಾತರಾಗಲಿದ್ದಾರೆ ಎಂದು ಹೇಳಿದರು.
ಈ ಕುರಿತು ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಎಲ್ಲಾ ವರ್ಗದವರ ಅಭಿಪ್ರಾಯ ಪಡೆಯುವುದಾಗಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ, ಕನೀಜ್ ಫಾತಿಮಾ, ಎಂ.ವೈ.ಪಾಟೀಲ, ವಿಧಾನ ಪರಿಷತ್ತಿನ ಸದಸ್ಯರಾದ ಶಶಿಲ ಜಿ. ನಮೋಶಿ, ಸುನೀಲ ವಲ್ಯಾಪುರೆ, ಬಿ.ಜಿ.ಪಾಟೀಲ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಮಗದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಕಲಬುರಗಿ ನಗರ ಪೆÇಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ಎಸ್.ಪಿ. ಡಾ.ಸಿಮಿ ಮರಿಯಮ್ ಜಾರ್ಜ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ದಿಲೀμï ಶಶಿ, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ, ಇ.ಎಸ್.ಐ.ಸಿ. ಡೀನ್ ಡಾ. ಇವಾನೋ ಲೊಬೋ, ಡಿ.ಹೆಚ್.ಓ ಡಾ.ಶರಣಬಸಪ್ಪ ಗಣಜಲಖೇಡ್, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಆರ್.ಸಿ.ಹೆಚ್.ಓ ಡಾ.ಪ್ರಭುಲಿಂಗ ಮಾನಕರ, ಸಹಾಯಕ ಔಷಧ ನಿಯಂತ್ರಕ ಡಾ.ಗೋಪಾಲ ಭಂಡಾರಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.