ಪುಲ್ವಾಮ ಹುತಾತ್ಮ ವೀರ ಯೋಧ ವಿಭೂತಿ ಶಂಕರ್ ಪತ್ನಿ ಸೇನೆಗೆ ಸೇರ್ಪಡೆ: ಪತಿ ಸಾವಿನ ನೋವಿಗೆ ಸಾಧನೆಯ ಪ್ರತೀಕಾರ!
ಹೈಲೈಟ್ಸ್:
- ಪತಿ ಸಾವಿನ ನೋವಿಗೆ ಸಾಧನೆಯ ಪ್ರತೀಕಾರ ತೋರಿದ ಪತ್ನಿ
- ವಿಭೂತಿ ಶಂಕರ್ ಪತ್ನಿ ನಿತಿಕಾ ಕೌಲ್ ಈಗ ಸೇನಾ ಲೆಫ್ಟಿನೆಂಟ್
- ಪರೀಕ್ಷೆಯಲ್ಲಿ ಪಾಸ್ ಆಗಿ ತರಬೇತಿ ಪಡೆದು ಸೇನೆಗೆ ಸೇರ್ಪಡೆ
ಹೊಸದಿಲ್ಲಿ: ಸುಮಾರು ಎರಡು ವರ್ಷಗಳ ಹಿಂದಿನ ಘಟನೆಯದು. ಭಾರತೀಯ ಸೇನೆಯ ಯುವ ಅಧಿಕಾರಿ ಮೇಜರ್ ವಿಭೂತಿ ಶಂಕರ್ ಅವರ ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿತ್ತು. ಮದುವೆಯಾಗಿ ಒಂದು ವರ್ಷ ಕಳೆಯುವ ಮುನ್ನವೇ ಶಂಕರ್ ಅವರ ಪತ್ನಿ ನಿತಿಕಾ ಕೌಲ್ ಪಾಲಿಗೆ ಜೀವನವೇ ಶೂನ್ಯವಾಗಿ ಗೋಚರಿಸಿತ್ತು.
ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷೆ ಉಗ್ರರ ಜತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದರು. ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಮನೆಗೆ ಹೋಗಬೇಕೆಂದುಕೊಂಡಿದ್ದವರು ಶವವಾಗಿ ಮನೆಗೆ ತಲುಪಿದ್ದರು. ಆದರೆ ಎರಡು ವರ್ಷಗಳ ಬಳಿಕ ಇಡೀ ಕುಟುಂಬದ ಚಿತ್ರಣವೇ ಬದಲಾಗಿದೆ. ಅಂದು ಪತಿಯ ಸಾವಿನಿಂದ ಜರ್ಜರಿತಗೊಂಡಿದ್ದ ನಿತಿಕಾ ಕೌಲ್ ಇಂದು ಸ್ಫೂರ್ತಿಯ ಚಿಲುಮೆಯಾಗಿದ್ದರೆ.
ಸೇನಾ ಸಮವಸ್ತ್ರ ತೊಟ್ಟು ದೇಶ ಸೇವೆಗೆ ಸಜ್ಜಾಗಿದ್ದಾರೆ. ಪತ್ನಿಯ ಸಾವಿನ ನೋವನ್ನು ಮೆಟ್ಟಿನಿಂತು, ಛಲದಿಂದ ಅತಿ ಕಡಿಮೆ ಅವಧಿಯಲ್ಲಿ ಶಾರ್ಟ್ ಸರ್ವೀಸ್ ಕಮಿಷನ್ ಪರೀಕ್ಷೆ, ತರಬೇತಿ ಮುಗಿಸಿ ಸೇನೆಗೆ ಸೇರಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಯಲ್ಲಿ ತರಬೇತಿ ಮುಗಿಸಿದ ಲೆಫ್ಟಿನೆಂಟ್ ನಿತಿಕಾ ಅವರನ್ನು ಶನಿವಾರ ಲೆಫ್ಟಿನೆಂಟ್ ಜನರಲ್ ವೈ.ಕೆ. ಜೋಶಿ ಅವರು ಸೇನೆಗೆ ಬರಮಾಡಿಕೊಂಡಿದ್ದಾರೆ. ಪತಿಯ ಜಾಡಿನಲ್ಲೇ ಸೇನೆ ಸೇರುವ ನಿರ್ಧಾರಕ್ಕಾಗಿ ಕೌಲ್ ಅವರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಹೆಮ್ಮೆಯ ಕ್ಷಣವೆಂದ ಸೇನೆ!
”ಮೇಜರ್ ವಿಭೂತಿ ಶಂಕರ್ 2019ರಲ್ಲಿ ಪುಲ್ವಾಮಾದಲ್ಲಿಉಗ್ರರೊಂದಿಗ ಹೋರಾಟದ ವೇಳೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಅವರಿಗೆ ಮರಣೋತ್ತರವಾಗಿ ಶೌರ್ಯಚಕ್ರ ನೀಡಿ ಗೌರವಿಸಲಾಗಿತ್ತು. ಇಂದು ಅವರ ಪತ್ನಿ ನಿತಿಕಾ ಕೌಲ್ ಅವರು ಸೇನಾ ಸಮವಸ್ತ್ರ ತೊಡುವ ಮೂಲಕ ಪತಿಗೆ ನಿಜವಾದ ಗೌರವ ಸಲ್ಲಿಸಿದ್ದಾರೆ. ಲೆ.ಜನರಲ್ ವೈಕೆ ಜೋಶಿ ಅವರು ನಿತಿಕಾ ಅವರ ತೋಳಿಗೆ ‘ಸ್ಟಾರ್’ ತೊಡಿಸಿದ ಕ್ಷಣ ನಿಜಕ್ಕೂ ಹೆಮ್ಮೆಯ ಕ್ಷಣ,” ಎಂದು ಉಧಾಂಪುರದ ನಾರ್ತರ್ನ್ ಕಮಾಂಡ್ ಟ್ವೀಟ್ ಮಾಡಿದೆ.