ರಾಜ್ಯದಲ್ಲಿ ಸಹಸ್ರ ದಾಟಿದ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ, 100ಕ್ಕೂ ಅಧಿಕ ಸಾವು
ಹೈಲೈಟ್ಸ್:
- ಮೇ 21 ರಂದು ರಾಜ್ಯದಲ್ಲಿ 130 ಇದ್ದ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ ಸಂಖ್ಯೆ ಮೇ 29ಕ್ಕೆ 1040ಕ್ಕೆ ಏರಿಕೆ
- ಖಾಸಗಿ ಆಸ್ಪತ್ರೆಯಲ್ಲಿ 722, ಸರಕಾರಿ ಆಸ್ಪತ್ರೆಯಲ್ಲಿ 318 ಕಪ್ಪು ಶಿಲೀಂಧ್ರ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ
- ಬ್ಲ್ಯಾಕ್ ಫಂಗಸ್ನಿಂದ ವಿಕ್ಟೋರಿಯಾದಲ್ಲಿ 25, ಬೌರಿಂಗ್ನಲ್ಲಿ 21 ಸಾವುಗಳು ಸಂಭವಿಸಿವೆ
- ಇತರೆ ಜಿಲ್ಲೆಗಳಲ್ಲಿ ಒಟ್ಟಾರೆ 43 ಜನರನ್ನು ಫಂಗಸ್ ಬಲಿ ಪಡೆದಿದ್ದು, ಸಾವಿನ ಸಂಖ್ಯೆ 100 ಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ
ಬೆಂಗಳೂರು: ರಾಜ್ಯಾದ್ಯಂತ ಕಪ್ಪು ಶಿಲೀಂಧ್ರ ಮೂರೇ ವಾರದಲ್ಲಿ ಸಾವಿರಕ್ಕೂ ಹೆಚ್ಚು ಜನರನ್ನು ಆಕ್ರಮಿಸಿದೆ. ಇದು ಆರಂಭಿಕ ಹಂತ ಎಂದು ತಜ್ಞ ವೈದ್ಯರು ಉಲ್ಲೇಖಿಸಿದ್ದಾರೆ. ಸೂಕ್ತ ಸಮಯದಲ್ಲಿ ಸಾಕಷ್ಟು ಔಷಧ ಸಿಗದಿದ್ದಲ್ಲಿ ಅಪಾಯ ಹೆಚ್ಚಲಿದೆ.
ಮೇ 21 ರಂದು 130 ಪ್ರಕರಣಗಳಿದ್ದ ಸಂಖ್ಯೆ ಮೇ 29ಕ್ಕೆ 1040ಕ್ಕೆ ಏರಿದೆ. ಖಾಸಗಿ ಆಸ್ಪತ್ರೆಯಲ್ಲಿ 722, ಸರಕಾರಿ ಆಸ್ಪತ್ರೆಯಲ್ಲಿ 318 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇ 28 ರಂದು 930 ಜನ ಚಿಕಿತ್ಸೆ ಪಡೆಯುತ್ತಿದ್ದರು. ಮೇ 29 ರಂದು ನೂರಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಒಟ್ಟಾರೆ 1040 ಕ್ಕೂ ಹೆಚ್ಚು ಜನರಿಗೆ ರಾಜ್ಯಾದ್ಯಂತ ಕಪ್ಪು ಶಿಲೀಂಧ್ರ ಸೋಂಕು ಆವರಿಸಿದೆ.
ಕೈಗಾರಿಕಾ ಆಕ್ಸಿಜನ್ ಬಳಕೆ, ಅನಿಯಮಿತ ಸ್ಟಿರಾಯ್ಡ್, ಜಿಂಕ್ ಮಾತ್ರೆ ಬಳಕೆಯಿಂದಲೂ ಬ್ಲ್ಯಾಕ್ ಫಂಗಸ್ ಹರಡುತ್ತಿದೆ ಎಂಬ ಗಾಳಿಸುದ್ದಿಗಳು ಹಬ್ಬಿದ್ದವು. ಈ ನಡುವೆ ಯುಕೆ ಮತ್ತು ಭಾರತೀಯ ವೈರಸ್ ಮಿಶ್ರ ತಳಿಗಳ ಅಸಹಜ ಕಣ ವಿಭಜನೆಯೂ ಫಂಗಸ್ ಹಬ್ಬಲು ಕಾರಣ ಇರಬಹುದು ಎಂಬುದನ್ನು ಏಮ್ಸ್ ಶಂಕಿಸಿದೆ. ಫಂಗಸ್ ಉಲ್ಬಣಿಸುವ ವೇಗಕ್ಕೆ ಅನುಗುಣವಾಗಿ ಔಷಧ ಸಿಗದಿದ್ದಲ್ಲಿ ಸಾವಿನ ಪ್ರಮಾಣ ಶೇ.70%ಕ್ಕೂ ಹೆಚ್ಚಿರಲಿದೆ ಎಂಬುದು ವೈದ್ಯರ ಅಭಿಪ್ರಾಯ.
ಆಂಫೋಟೆರಿಸಿನ್ ಬಿ ಔಷಧ ಸಮರ್ಪಕ ಪೂರೈಕೆಗೆ ಕೇಂದ್ರ ಸಚಿವ ಸದಾನಂದಗೌಡರ ಜತೆ ಹಲವು ಬಾರಿ ಚರ್ಚಿಸಲಾಗಿದೆ. ಕೇಂದ್ರವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
100ಕ್ಕೂ ಹೆಚ್ಚು ಸಾವು?
ಬ್ಲ್ಯಾಕ್ ಫಂಗಸ್ನಿಂದ ವಿಕ್ಟೋರಿಯಾದಲ್ಲಿ 25, ಬೌರಿಂಗ್ನಲ್ಲಿ 21 ಸಾವುಗಳು ಸಂಭವಿಸಿವೆ. ಇತರೆ ಜಿಲ್ಲೆಗಳಲ್ಲಿ ಒಟ್ಟಾರೆ 43 ಜನರನ್ನು ಫಂಗಸ್ ಬಲಿ ಪಡೆದಿದೆ. ಸಾವಿನ ಸಂಖ್ಯೆ 100 ಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ.