Karnataka Rain: ಕೇರಳದಲ್ಲಿ ಜೂನ್ 3ಕ್ಕೆ ಮುಂಗಾರು ಪ್ರವೇಶ; ನಾಳೆಯಿಂದ ಕರ್ನಾಟಕದಲ್ಲಿ ಭಾರೀ ಮಳೆ
ಬೆಂಗಳೂರು (ಮೇ 31): ಕರ್ನಾಟಕದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕೆಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಇಂದು ಕೇರಳಕ್ಕೆ ಮುಂಗಾರು ಪ್ರವೇಶಿಸಬೇಕಿದ್ದ ಮುಂಗಾರು 3 ದಿನ ತಡವಾಗಿ ಎಂಟ್ರಿ ಕೊಡಲಿದ್ದು, ಜೂನ್ 3ರಿಂದ ಕೇರಳದಲ್ಲಿ ಮುಂಗಾರಿನ ಪ್ರವೇಶವಾಗಲಿದೆ. ಇದರ ಪರಿಣಾಮವಾಗಿ ನಾಳೆಯಿಂದ (ಜೂನ್ 1) ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದಿನಿಂದ 5 ದಿನಗಳವರೆಗೆ ಕೇರಳ ಮತ್ತು ಮಾಹೆ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ.
ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ನಾಳೆಯಿಂದ ಮೂರು ದಿನ ಭಾರೀ ಮಳೆಯಾಗಲಿದೆ. ಇಂದಿನಿಂದ ಕೇರಳ, ಅಸ್ಸಾಂ, ಮೇಘಾಲಯ, ಆಂಧ್ರಪ್ರದೇಶದ ಕರಾವಳಿ ಪ್ರದೇಶ, ಅರುಣಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲೂ ಇಂದು ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎನ್ನಲಾಗಿತ್ತು. ಆದರೆ, ಜೂನ್ 3ರಿಂದ ಕೇರಳದಲ್ಲಿ ಮುಂಗಾರು ಮಳೆಯಾಗಲಿದೆ. ಜೂನ್ 1ರಿಂದ ಕರ್ನಾಟಕದಲ್ಲಿಯೂ ಭಾರೀ ಮಳೆಯಾಗಲಿದೆ. ರಾಜ್ಯದಲ್ಲಿ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶವಾಗಲಿದ್ದು, ಮಳೆಗಾಲ ಶುರುವಾಗಲಿದೆ ಎಂದು ಕರ್ನಾಟಕ ಪ್ರಾದೇಶಿಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 3 ಅಥವಾ 4ರಂದು ಕರ್ನಾಟಕದಲ್ಲಿ ಮುಂಗಾರು ಮಳೆಯಾಗಲಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೆಎಸ್ಎನ್ಡಿಎಂಸಿ ಸೈಂಟಿಫಿಕ್ ಆಫೀಸರ್ ಎಸ್.ಎಸ್.ಎಂ. ಗವಾಸ್ಕರ್, ಒಂದು ಬಾರಿ ಮುಂಗಾರು ಆರಂಭವಾದ ನಂತರ ಅದರ ಪರಿಣಾಮ ಯಾವ ರೀತಿ ಇರಬಹುದು ಎಂದು ನಾವು ಅಂದಾಜಿಸಬಹುದು. ಜೂನ್ನಿಂದ ಸೆಪ್ಟೆಂಬರ್ವರೆಗೆ ಮಳೆಯ ಆರ್ಭಟವಿರಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಈ ವರ್ಷ ಸಾಧಾರಣದಿಂದ ಧಾರಾಕಾರ ಮಳೆಯಾಗಲಿದೆ. ಜೂನ್ ಮೊದಲ ವಾರದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕರ್ನಾಟಕದ ಧಾರವಾಡ, ಬೆಳಗಾವಿ, ಗದಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ, ಈ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರಿನಲ್ಲಿ ಇಂದಿನಿಂದ ಮಳೆಯ ಅಬ್ಬರ ಹೆಚ್ಚಾಗಲಿದೆ.