SSLC Exam: ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಹೇಗಿರುತ್ತೆ? ಪ್ರಶ್ನೆ ಪತ್ರಿಕೆ ಎಷ್ಟಿರುತ್ತೆ? ನಿಮಗಿರುವ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ
ಬೆಂಗಳೂರು(ಜೂ.04): ಕೊರೋನಾ ಸಂದರ್ಭದಲ್ಲಿ 2nd PUC ಮತ್ತು SSLC ಪರೀಕ್ಷೆ ನಡೆಸುವ ಬಗ್ಗೆ ಹಲವು ಗೊಂದಲಗಳು ಸೃಷ್ಟಿಯಾಗಿದ್ದವು. ಈಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ. ಆದರೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇದೆ ಎಂಬುದನ್ನು ಇದೇ ಸಮಯದಲ್ಲಿ ಸಚಿವರು ಖಚಿತಪಡಿಸಿದ್ದಾರೆ. ಜುಲೈ 3ನೇ ವಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಅಂದರೆ ಸಚಿವರು ನೀಡಿರುವ ಮಾಹಿತಿ ಪ್ರಕಾರ, ಜುಲೈ 18ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗಬಹುದು. ಆದರೆ ಇದೇ ಅಂತಿಮ ನಿರ್ಧಾರವಲ್ಲ ಎಂದೂ ಸಹ ಹೇಳಿದ್ದಾರೆ. ಪರೀಕ್ಷೆ ಸಮಯದಲ್ಲಿ ಕೊರೋನಾ 3ನೇ ಅಲೆ ಶುರುವಾದರೆ ಪರೀಕ್ಷೆ ನಡೆಸುವುದು ಅನುಮಾನ ಎನ್ನಲಾಗುತ್ತಿದೆ.
ಒಂದು ವೇಳೆ ಜುಲೈ ತಿಂಗಳಿನಲ್ಲಿ ಪರೀಕ್ಷೆ ನಡೆಸಿದರೆ ಪ್ರಶ್ನೆ ಪತ್ರಿಕೆ ಹೇಗಿರುತ್ತೆ? ವಿದ್ಯಾರ್ಥಿಗಳು ಪರೀಕ್ಷೆಗೆ ಹೇಗೆ ತಯಾರಿ ನಡೆಸಿಕೊಳ್ಳಬೇಕು? ಶಿಕ್ಷಣ ಇಲಾಖೆ ಈ ಬಾರಿ ಯಾವ ಮಾದರಿಯ ಪ್ರಶ್ನೆ ಪತ್ರಿಕೆ ನೀಡುತ್ತದೆ? ಹೀಗೆ ಹತ್ತು-ಹಲವು ಗೊಂದಲಗಳು ಈಗ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಕಾಡಲು ಶುರುವಾಗಿವೆ. ಈ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಪರಿಹಾರ.
2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 8 ಲಕ್ಷ 75 ಸಾವಿರ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳ ಕಲಿಕಾ ಮಟ್ಟ ನಿರ್ಧರಿಸುವುದು ಕಷ್ಟ. ಜೊತೆಗೆ ಕಳೆದ ವರ್ಷ 9ನೇ ತರಗತಿ ಪರೀಕ್ಷೆಯೂ ನಡೆದಿಲ್ಲ. ಹೀಗಾಗಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಇಲಾಖೆ ಮುಂದಾಗಿದೆ.
ಪ್ರಶ್ನೆ ಪತ್ರಿಕೆ ಹೇಗಿರುತ್ತೆ?
ರಾಜ್ಯದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ 2 ಪರೀಕ್ಷೆಗಳು ಇರುತ್ತವೆ. ಸಮಾಜ ವಿಜ್ಞಾನ, ಗಣಿತ, ವಿಜ್ಞಾನ- ಈ 3 ವಿಷಯಗಳನ್ನು ಸೇರಿಸಿ ಒಂದು ಪರೀಕ್ಷೆ ನಡೆಸಲಾಗುತ್ತದೆ. 3 ಭಾಷಾ ವಿಷಯಗಳ ಪ್ರಶ್ನೆ ಪತ್ರಿಕೆ ಅಂದರೆ ಕನ್ನಡ, ಇಂಗ್ಲಿಷ್, ಹಿಂದಿ(ಮೊದಲ ಭಾಷೆ, ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆ ಐಚ್ಛಿಕ ಭಾಷೆಗಳು)- ಈ 3 ವಿಷಯಗಳನ್ನು ಸೇರಿಸಿ ಒಂದು ಪ್ರಶ್ನೆ ಪತ್ರಿಕೆ ಸಿದ್ದಪಡಿಸಿ ಒಂದು ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಮಲ್ಟಿಪಲ್ ಚಾಯ್ಸ್ ನೀಡಲಾಗಿರುತ್ತದೆ. ಪ್ರಶ್ನೆಗಳು ಸರಳವಾಗಿರುತ್ತೆ. ನೇರವಾಗಿರುತ್ತೆ. ಬಹು ಆಯ್ಕೆ ಪ್ರಶ್ನೆಗಳು ಇರುತ್ತವೆ.
ವಿದ್ಯಾರ್ಥಿಗಳು ತಾವಿರುವ ಸ್ಥಳದಲ್ಲೇ ಪರೀಕ್ಷೆ ಬರೆಯಬಹುದಾಗಿದೆ. ಅಂದರೆ ವಿದ್ಯಾರ್ಥಿ ಬೆಂಗಳೂರು ಶಾಲೆಯಲ್ಲಿ ಓದುತ್ತಿದ್ದು, ರಜೆಯ ಕಾರಣದಿಂದಾಗಿ ಬೇರೆ ಪ್ರದೇಶ ಅಥವಾ ಹಳ್ಳಿಗೆ ತೆರಳಿದ್ದರೆ ಅಲ್ಲಿಯೇ ಪರೀಕ್ಷೆ ಬರೆಯುವ ಅವಕಾಶ ನೀಡಲಾಗುತ್ತದೆ. ಅಂದರೆ ವಲಸೆ ಹೋದವರಿಗೆ ಊರಲ್ಲೇ ಪರೀಕ್ಷೆ ನಡೆಸಲಾಗುತ್ತದೆ.
ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಕೊರೋನಾ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು. ಈ ಬಾರಿ 6000 ಸಾವಿರ ಪರೀಕ್ಷಾ ಕೇಂದ್ರಗಳಿವೆ. ಕಳೆದ ವರ್ಷ ಮೂರು ಸಾವಿರ ಮಾತ್ರ ಇದ್ದವು. ಒಂದು ಡೆಸ್ಕ್ ನಲ್ಲಿ ಒಬ್ಬ ವಿದ್ಯಾರ್ಥಿಯನ್ನು ಕೂರಿಸಲಾಗುತ್ತದೆ. ಒಂದು ರೂಮ್ ನಲ್ಲಿ 10 ರಿಂದ 12 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಪರೀಕ್ಷೆ ಬರೆಯಲು ಬರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಎನ್-95 ಮಾಸ್ಕ್ ನೀಡಲಾಗುತ್ತದೆ.
ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಲಾಗುತ್ತದೆ. 20 ದಿನಗಳ ಮೊದಲೇ ಪರೀಕ್ಷಾ ದಿನಾಂಕ ಪ್ರಕಟ ಮಾಡಲಾಗುತ್ತದೆ. ಆಗಸ್ಟ್ ಮೊದಲ ವಾರದಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ನೀಡಲಾಗುತ್ತದೆ.
ಈ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಕೊರೋನಾ ನಿಯಂತ್ರಣಕ್ಕೆ ಬಂದರೆ ಮಾತ್ರ ಪರೀಕ್ಷೆ ನಡೆಸುವುದಾಗಿ ತಿಳಿಸಿದ್ದಾತೆ. ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವುದಾಗಿ ಸುರೇಶ್ ಕುಮಾರ್ ಹೇಳಿದ್ದಾರೆ. ಆದರೆ ಇದು ತಾತ್ಕಾಲಿಕ ನಿರ್ಧಾರವಾಗಿದೆ. ಕೊರೋನಾ ನಿಯಂತ್ರಣಕ್ಕೆ ಬಂದರೆ ಮಾತ್ರ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ಕೊರೋನಾ ಪ್ರಕರಣಗಳು ಹೆಚ್ಚಾದರೆ, ಪರೀಕ್ಷೆ ನಡೆಸುವ ನಿರ್ಧಾರವನ್ನು ಕೈಬಿಡಲಾಗುತ್ತದೆ. ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಬಿಎಸ್ವೈ ಸ್ಪಷ್ಟನೆ ನೀಡಿದ್ದಾರೆ.