Rohini Sindhuri vs Shlipa Nag: ಲೆಕ್ಕ ಕೇಳಿದ್ದಕ್ಕೆ ಹೀಗೆ ಮಾಡ್ತಿದಾರೆ; ಶಿಲ್ಪಾನಾಗ್ ಆರೋಪಕ್ಕೆ ರೋಹಿಣಿ ಸಿಂಧೂರಿ ಕಿಡಿ
ಮೈಸೂರು(ಜೂ. 04): ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರ ಜಟಾಪಟಿ ಮುಂದುವರೆದಿದೆ. ಕೋವಿಡ್ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಮೈಸೂರಿನಲ್ಲಿ ರೋಹಿಣಿ ಸಿಂಧೂರಿ ಮೇಲೆ ಆಕ್ರೋಶ ಹೆಚ್ಚಾಗಿದೆ. ಪಾಲಿಕೆ ಸದಸ್ಯರು ಸೇರಿದಂತೆ ಮೈಸೂರಿನ ಎಲ್ಲಾ ಜನಪ್ರತಿನಿಧಿಗಳು ಪಾಲಿಕೆ ಆಯುಕ್ತೆ ಬೆನ್ನಿಗೆ ನಿಂತಿದ್ದು, ರಾಜೀನಾಮೆ ವಾಪಸ್ ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಡಿಸಿ ರೋಹಿಣಿ ಸಿಂಧೂರಿ ಬಗ್ಗೆ ವಿರೋಧಿ ಅಲೆ ಹೆಚ್ಚಾಗಿದೆ.
ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜೀನಾಮೆ ನೀಡಿದ ಬಳಿಕ, ಇದೇ ಮೊದಲ ಬಾರಿಗೆ ಡಿಸಿ ರೋಹಿಣಿ ಸಿಂಧೂರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಶಿಲ್ಪಾನಾಗ್ ಆರೋಪಕ್ಕೆ ರೋಹಿಣಿ ಪ್ರತ್ಯುತ್ತರ ನೀಡಿದ್ದಾರೆ. ನನ್ನ ವಿರುದ್ಧ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಮಾಡಿರುವ ಕಿರುಕುಳದ ಆರೋಪಕ್ಕೆ ಯಾವುದೇ ಆಧಾರ ಇಲ್ಲ. ನನ್ನ ಮೇಲಿನ ಆರೋಪ ಆಧಾರ ರಹಿತವಾಗಿದೆ. ನನ್ನಿಂದ ಕಿರುಕುಳ ನಡೆದಿದೆ ಅನ್ನೋದು ಸುಳ್ಳು. ಜಿಲ್ಲಾಧಿಕಾರಿಯಾದ ನನಗೆ ಕೊರೋನಾ ನಿಯಂತ್ರಣದ ಜವಾಬ್ದಾರಿ ಇದೆ. ಕೋವಿಡ್ ಸಂದರ್ಭದಲ್ಲಿ ಎಲ್ಲರ ಸಹಕಾರ ಬೇಕಾಗುತ್ತೆ. ಶಿಲ್ಪಾನಾಗ್ ಲೆಕ್ಕ ಕೇಳಿದ್ದಕ್ಕೆ ನನ್ನ ಮೇಲೆ ಆರೋಪ ಮಾಡ್ತಿದಾರೆ ಎಂದರು.
ನಾವು ಅಂಕಿ ಅಂಶಗಳನ್ನು ಅಧಿಕೃತವಾಗಿ ಕೊಡ್ತಿದ್ದೇವೆ. ಕೊರೋನಾ ವಿಚಾರದಲ್ಲಿ ಅಂಕಿ ಅಂಶ ತಪ್ಪಾಗಬಾರದು ಎಂದು ಹೇಳಿದರು. ವಾರ್ಡ್ ಪಂಚಾಯಿತಿಗಳಲ್ಲಿ ಈವತ್ತು 40 ನಾಳೆ 400 ಬರಬಾರದು. ಅಂಕಿ ಅಂಶ ಸರಿ ಇರಬೇಕು ಎಂಬ ಕಾರಣಕ್ಕೆ ನಾನು ಒತ್ತಡ ಹಾಕಿದ್ದೇನೆ ಅಷ್ಟೇ. ನಾನು ಅಥಾರಿಟಿ ಅಲ್ಲ ಅನ್ನೋದನ್ನ ಸಿಎಸ್(ಸರ್ಕಾರದ ಮುಖ್ಯ ಕಾರ್ಯದರ್ಶಿ) ಸ್ಪಷ್ಟ ಮಾಡ್ತಾರೆ. ಆಫೀಸರ್ಸ್ ಏನೇ ಸಮಸ್ಯೆ ಇದ್ದರೂ ಫೋರಂ ಇರುತ್ತೆ ಅಲ್ಲಿ ಹೇಳಬಹುದು. ಹೈಯರ್ ಆರ್ಮಿ ಇರುತ್ತೆ ಅಲ್ಲಿ ಹೇಳಬಹುದಿತ್ತು ಎಂದು ಸಿಂಧೂರಿ ಅಸಮಾಧಾನ ಹೊರಹಾಕಿದರು.
ಜುಲೈ ಒಳಗೆ ಜಿಲ್ಲೆಯನ್ನ ಕೋವಿಡ್ ಮುಕ್ತ ಮಾಡಬೇಕು. ಅಧಿಕೃತ ಮಾಹಿತಿ ತಪ್ಪಾಗಬಾರದು ಎಂಬುದು ನನ್ನ ಉದ್ದೇಶ. ಸಿಎಸ್ ಬರ್ತಿದ್ದಾರೆ. ಎಲ್ಲವನ್ನು ಅವರ ಗಮನಕ್ಕೆ ತರ್ತೇನೆ. ಈಗಾಗಲೇ ನಾನು ಹೇಳಬೇಕಾದುದನೆಲ್ಲಾ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದೇನೆ. ಸಮನ್ವಯತೆ ಸಮಸ್ಯೆಯಾಗಿತ್ತು ಎಂಬ ಭಾವನೆ ನನಗಿಲ್ಲ ಎಂದರು.
ಇವರ ಆರೋಪಕ್ಕೆ ತಿರುಗೇಟು ನೀಡಿರುವ ಶಿಲ್ಪಾನಾಗ್, ನಾನು ದುಡುಕಿ ರಾಜೀನಾಮೆ ನೀಡಿಲ್ಲ. ಅವರ ಕಿರುಕುಳದಿಂದ ಮನನೊಂದು ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.
ಐಎಎಸ್ ಅಧಿಕಾರಿಗಳ ಸಂಘರ್ಷ ವಿಚಾರವಾಗಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗೂಡಾರ್ಥವಾಗಿ ಮಾತನಾಡಿದ್ದಾರೆ. ಇನ್ನು ಎರಡು ದಿನಗಳಲ್ಲಿ ಏನಾಗುತ್ತೆ ಕಾದು ನೋಡಿ ಎಂದು ಹೇಳಿದ್ದಾರೆ. ಕೋವಿಡ್ ನಿಯಂತ್ರಣ ಮಾಡೋದು ನನ್ನ ಆದ್ಯತೆ. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಯಾರು ಸರಿ ಯಾರು ತಪ್ಪು ಅಂತ ಹೇಳಲ್ಲ. ಎಲ್ಲವನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಇನ್ನು, ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ರಾಜೀನಾಮೆ ಅಂಗೀಕರಿಸದಂತೆ, ಶಾಸಕ ರಾಮದಾಸ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಶಿಲ್ಪಾನಾಗ್ ಕಾರ್ಯವೈಖರಿ ವಿವರಿಸಿ ಪತ್ರ ಬರೆದಿರುವ ಅವರು, ಶಿಲ್ಪಾನಾಗ್ ಮೈಸೂರಿಗೆ ಬಂದ ಮೇಲೆ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಅವರು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ ಎಂದು ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಈ ರೀತಿ ಆಗಬಾರದು. ಯಾರನ್ನೂ ರಾಜೀನಾಮೆ ನೀಡಲು ಒತ್ತಾಯಿಸುತ್ತಿಲ್ಲ. ಶಿಲ್ಪಾನಾಗ್ ರಾಜೀನಾಮೆ ಅಂಗೀಕಾರ ಬೇಡ ಎಂದಿದ್ದೇನೆ. ತಕ್ಷಣವೇ ರಾಜ್ಯ ಸರ್ಕಾರ ಇದನ್ನ ಶಮನ ಮಾಡುವ ಕೆಲಸ ಮಾಡಬೇಕು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೂಡಾ ಇದರ ಬಗ್ಗೆ ಗಮನಹರಿಸಬೇಕು ಎಂದರು.