ಪ್ರೊ. ವಸಂತ ಕುಷ್ಟಗಿ ನಿಧನ, ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ
ಕಲಬುರಗಿ,ಜೂ.4(ಕ.ವಾ) ಹೃದ್ರೋಗ ಮತ್ತು ರಕ್ತದೊತ್ತಡ ಸಮಸ್ಯೆಯಿಂದ ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದ ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಅವರ ಅಂತ್ಯಕ್ರಿಯೆ ಮಧ್ಯಾಹ್ನ 3.30 ಗಂಟೆ ಸುಮಾರಿಗೆ ನಗರದ ಸಂತ್ರಾಸವಾಡಿಯ ರುದ್ರಭೂಮಿಯಲ್ಲಿ ಪೊಲೀಸ್ ಗೌರವದೊಂದಿಗೆ ನಡೆಯಿತು.
ವಾರದ ಹಿಂದೆಯೆ ರಕ್ತದೊತ್ತಡ ಕಡಿಮೆ ಕಾರಣ ಖಾಸಗಿ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದರು.
ಮೃತರ ಗೌರವಾರ್ಥ ರಾಜ್ಯ ಸರ್ಕಾರವು ತೀವ್ರ ಸಂತಾಪ ವ್ಯಕ್ತಪಡಿಸುತ್ತಾ ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ಆದೇಶಿಸಿತ್ತು.
ಅದರಂತೆ ಕಲಬುರಗಿ ತಹಶೀಲ್ದಾರ ಪ್ರಕಾಶ ಕುದರೆ ಅವರು ಜಿಲ್ಲಾಡಳಿತ ಪರವಾಗಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಮೃತರ ಗೌರವಾರ್ಥ ಪೊಲೀಸರು ಗುಂಡು ಹಾರಿಸಿ ಗೌರವ ಸಲ್ಲಿಸಿದರು.