‘ಇಂದೆಂತಹ ಗೋ ರಕ್ಷಣೆ?’: ಬಿಜೆಪಿ, ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೈಲೈಟ್ಸ್‌:

  • ಮೂರು ಜಿಲ್ಲೆಗಳಲ್ಲಿ ರಾಸುಗಳಿಗೆ ಗಂಭೀರ ಕಾಲುಬಾಯಿ ಜ್ವರ ಪತ್ತೆ
  • ಎಫ್‌ಎಂಡಿ ನಿಯಂತ್ರಣಕ್ಕೆ ಲಸಿಕೆ ಅಭಿಯಾನ ನಡೆಸದ ಕೇಂದ್ರ ಸರ್ಕಾರ
  • ಸಾವಿನ ಬಾಯಿಗೆ ದೂಡಿರುವುದು ಎಂತಹ ಗೋರಕ್ಷಣೆ?
  • ನಾನು ಅಧಿಕಾರದಲ್ಲಿದ್ದಾಗ ವೈಯಕ್ತಿಕವಾಗಿ ರೈತರಿಗೆ ಪರಿಹಾರ ನೀಡಿದ್ದೆ

ಬೆಂಗಳೂರು: ಗೋಸಂರಕ್ಷಣೆ ಬಗ್ಗೆ ಪ್ರಚಾರ ನಡೆಸುವ ಬಿಜೆಪಿ, ಹಸುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಲುಬಾಯಿ ಜ್ವರದ ಚಿಕಿತ್ಸೆಗೆ ಸ್ಪಂದಿಸದೆ ಇರುವುದನ್ನು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಜಾನುವಾರುಗಳಲ್ಲಿ ಕಾಲುಬಾಯಿ ಜ್ವರವು ಸಾಂಕ್ರಾಮಿಕವಾಗಿ ಹರಡುತ್ತಿದೆ. ಇದು ಬಹಳ ಗಂಭೀರ ಕಾಯಿಲೆಯಾಗಿದ್ದು, ಕೇಂದ್ರ ಸರ್ಕಾರದ ವತಿಯಿಂದ ಲಸಿಕೆ ಅಭಿಯಾನ ನಡೆಯಬೇಕಿತ್ತು. ಆದರೆ ಅದನ್ನು ನಡೆಸದೆ ಗೋವುಗಳ ಸಾವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಾರಣವಾಗುತ್ತಿವೆ. ಇದು ಯಾವ ರೀತಿಯ ಗೋರಕ್ಷಣೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

‘ಗೋ’ ರಕ್ಷಣೆ ಬಗ್ಗೆ ಬಿಜೆಪಿ ಹಾದಿಬೀದಿಯಲ್ಲಿ ಅರಚುತ್ತದೇ ಹೊರತು, ಗೋವುಗಳ ರಕ್ಷಣೆ ಮಾಡುವುದಿಲ್ಲ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಹಸುಗಳಲ್ಲಿ ಕಾಣಿಸಿಕೊಳ್ಳುವ ಗಂಭೀರ ಕಾಯಿಲೆಯಾದ ಕಾಲುಬಾಯಿ ಜ್ವರದ–FMD ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸಿಯೇ ಇಲ್ಲ. ರಾಜ್ಯ ಸರ್ಕಾರ ಕೇಳಿಲ್ಲ. ಈಗ ರಾಸುಗಳು ನರಳುತ್ತಿವೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಸಾಂಕ್ರಾಮಿಕ ರೋಗ ಕಾಲುಬಾಯಿ ಜ್ವರ ಭೀಕರ ಕಾಯಿಲೆ. ಅದು ಬಹುಬೇಗ ಹರಡುತ್ತದೆ. ಹಸುಗಳು ನರಳಾಡಿ ಸಾಯುತ್ತವೆ. ಗೋವುಗಳ ಪಾಡು ನೋಡಲಾಗದೇ ರೈತ ಕೊರಗಿ ಕುಗ್ಗಿಹೋಗುತ್ತಾನೆ. ರಾಜ್ಯದ ಮೂರು ಜಿಲ್ಲೆಗಳಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು, ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸದೇ ಇರುವುದೇ ಇದಕ್ಕೆ ಕಾರಣ ಎಂಬ ಅಂಶ ಬಯಲಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ರಾಸುಗಳಿಗೆ ಲಸಿಕೆ ಅಭಿಯಾನ ನಡೆಸಬೇಕಿತ್ತು. ಆದರೆ, ಕೋವಿಡ್‌ 19 ಕಾರಣದಿಂದ ಲಸಿಕೆ ಹಾಕಿಲ್ಲ ಎಂದು ಪಶುವೈದ್ಯರು ಹೇಳಿದ್ದಾರೆ. ಲಸಿಕೆ ಅಭಿಯಾನ ನಡೆಸದೇ ಈಗ ಗೋವುಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂಥ ಗೋರಕ್ಷಣೆ? ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದೆ ನಿಂತು ಮಾಡಿದ ಗೋವಧೆಯಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾ. ಮತ್ತು ರಾಮನಗರ ಜಿಲ್ಲೆಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿದೆ. ಹೈನೋದ್ಯಮವನ್ನು ಕಂಗೆಡಿಸುವ ಈ ಕಾಯಿಲೆ ಸಾಂಕ್ರಾಮಿಕವಾಗುವುದನ್ನು ತಡೆಯಲು ಸರ್ಕಾರ ಕೂಡಲೇ ಕಾರ್ಯಪ್ರವೃತ್ತವಾಗಬೇಕು. ಮುಂದೆ ಜೂನ್‌ನಲ್ಲಿ ನಡೆಯಲಿರುವ ಲಸಿಕೆ ಅಭಿಯಾನವನ್ನು ಯಾವ ಕಾರಣಕ್ಕೂ ತಪ್ಪಿಸದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕಾಯಿಲೆಗೆ ಬಲಿಯಾಗಿರುವ ರಾಸುಗಳ ಮಾಲೀಕರಿಗೆ ಸರ್ಕಾರ ಪರಿಹಾರ ನೀಡಲಿ. ಹಿಂದೆ ಬಿಜೆಪಿಯೇ ಅಧಿಕಾರದಲ್ಲಿದ್ದಾಗಲೂ ಕಾಲುಬಾಯಿ ಜ್ವರಬಂದಿತ್ತು. ಆಗ ನಾನೇ ವೈಯಕ್ತಿಕವಾಗಿ ರೈತರಿಗೆ ಪರಿಹಾರ ಹಣ ನೀಡಿದ್ದೆ. ಅದರಿಂದ ಎಚ್ಚೆತ್ತ ಸರ್ಕಾರ ತಾನೂ ಪರಿಹಾರ ನೀಡಿತ್ತು. ಗೋವುಗಳ ಬಗ್ಗೆ ದೊಡ್ಡದಾಗಿ ಮಾತಾಡುವ ಬಿಜೆಪಿ ಈಗ ಗೋವುಗಳ ರಕ್ಷಣೆ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *