ಡಾ. ರಾಜ್ ಜೊತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದ ಹಿರಿಯ ನಟಿ ಸುರೇಖಾ ಇನ್ನಿಲ್ಲ
ಹೈಲೈಟ್ಸ್:
- ಕನ್ನಡ ಚಿತ್ರರಂಗಕ್ಕೆ ಎದುರಾಯ್ತು ಮತ್ತೊಂದು ಆಘಾತ
- ಹೃದಯಾಘಾತದಿಂದ ಸಾವನ್ನಪ್ಪಿದ ಜನಪ್ರಿಯ ಹಿರಿಯ ನಟಿ ಸುರೇಖಾ
- ಡಾ. ರಾಜ್‌ಕುಮಾರ್ ಅವರ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಕಲಾವಿದೆ
ಕೆಲ ದಿನಗಳ ಹಿಂದಷ್ಟೇ ಹಿರಿಯ ನಟಿ ಬಿ. ಜಯಾ ಅವರನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿತ್ತು. ಇದೀಗ ಮತ್ತೋರ್ವ ಜನಪ್ರಿಯ ಹಿರಿಯ ನಟಿ ಸುರೇಖಾ ಅವರು ನಮ್ಮನ್ನಗಲಿದ್ದಾರೆ. ಡಾ. ರಾಜ್‌ಕುಮಾರ್ ಸೇರಿದಂತೆ ಕನ್ನಡದ ಹಲವು ನಟರ ಜೊತೆಗೆ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಸುರೇಖಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ನೃತ್ಯ ಕಲಾವಿದೆಯೂ ಆಗಿದ್ದ ಸುರೇಖಾ, ವಿವಾಹವಾಗಿರಲಿಲ್ಲ.
ಸುರೇಖಾ ಅವರು ನೃತ್ಯ ಕಲಾವಿದೆಯಾಗಿದ್ದರು. ಆಗಾಗ ಅವರಿಗೆ ಮಂಡಿ ನೋವು ಬರುತ್ತಿತ್ತು. ಚೆನ್ನಾಗಿಯೇ ಇದ್ದ ಅವರು ಶನಿವಾರ ರಾತ್ರಿ 9.30ರ ಸುಮಾರಿಗೆ ಟಿವಿ ನೋಡುತ್ತ ಕುಳಿತಿದ್ದರು. ಆಗ ಅವರಿಗೆ ತೀವ್ರ ಹೃದಯಾಘಾತವಾಯಿತು’ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ. ಸುರೇಖಾ ಅವರಿಗೆ ಹೃದಯಾಘಾತವಾದ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರು ಎಳೆದಿದ್ದಾರೆ. ಅವರಿಗೆ ಶಾರದಾ ಮತ್ತು ಪ್ರೇಮಾ ಎಂಬ ಇಬ್ಬರು ಸಹೋದರಿಯರು ಇದ್ದಾರೆ. ಇಂದು (ಜೂ.6) ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಸುರೇಖಾ ಅವರ ಅಂತ್ಯಕ್ರಿಯೆಯನ್ನು ಕುಟುಂಬ್ಥರು ನೆರವೇರಿಸಿದ್ದಾರೆ.
ಡಾ. ರಾಜ್ ಕುಮಾರ್ ಅಭಿನಯದ ತ್ರಿಮೂರ್ತಿ, ಒಲವು ಗೆಲುವು, ಗಿರಿ ಕನ್ಯೆ, ಸಾಕ್ಷಾತ್ಕಾರ, ಕಸ್ತೂರಿ ನಿವಾಸ, ಹುಲಿಯ ಹಾಲಿನ ಮೇವು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಮಾಯಾ ಮನುಷ್ಯ, ನಾನು ಬಾಳಬೇಕು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಅವರು, ತಾಯಿ ದೇವರು, ಶಿವಕನ್ಯೆ, ಕಾವೇರಿ, ಕೆಸರಿನ ಕಮಲ, ಬ್ಯಾಂಕರ್ ಮಾರ್ಗಯ್ಯ, ನಾಗರ ಹೊಳೆ ಸೇರಿದಂತೆ 150ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಜೊತೆಗೆ ತಮಿಳಿನ ‘ನಾನು ಅವನಿಲ್ಲೈ’ ಚಿತ್ರದಲ್ಲೂ ನಟಿಸಿದ್ದರು ಅವರು. ಕೆ.ಬಾಲಚಂದರ್ ಅದರ ನಿರ್ದೇಶಕರು.