ನಟ ದರ್ಶನ್ ಮನವಿಗೆ ಪ್ರಾಣಿ ಪ್ರಿಯರ ಸ್ಪಂದನೆ; 2 ದಿನದಲ್ಲಿ ಮೃಗಾಲಯಗಳ ನೆರವಿಗೆ ₹24.75 ಲಕ್ಷ ದೇಣಿಗೆ
ಹೈಲೈಟ್ಸ್:
- ಲಾಕ್ಡೌನ್ನಿಂದ ರಾಜ್ಯದ ಮೃಗಾಲಯಗಳಿಗೆ ಆರ್ಥಿಕ ಸಂಕಷ್ಟ
- ಪ್ರಾಣಿಗಳನ್ನು ದತ್ತು ಪಡೆಯುವಂತೆ ಮನವಿ ಮಾಡಿದ ನಟ ದರ್ಶನ್
- ಚಾಲೆಂಜಿಂಗ್ ಸ್ಟಾರ್ ಮನವಿಗೆ ಪ್ರಾಣಿ ಪ್ರಿಯರ ಸಖತ್ ರೆಸ್ಪಾನ್ಸ್
- ಎರಡೇ ದಿನದಲ್ಲಿ ಸಾರ್ವಜನಿಕರಿಂದ ಒಟ್ಟು ₹24.75 ಲಕ್ಷ ಸಂಗ್ರಹ
- ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ದರ್ಶನ್ ತೂಗುದೀಪ್
ಮೈಸೂರು: ಪರಿಸರ ದಿನಾಚರಣೆ ಪ್ರಯುಕ್ತ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ರಾಜ್ಯದ ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವಂತೆ ನಟ ದರ್ಶನ್ ನೀಡಿದ್ದ ಕರೆಗೆ ಪ್ರಾಣಿ ಪ್ರಿಯರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ.
ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ದರ್ಶನ್ ತೂಗುದೀಪ್, ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಮೃಗಾಲಯಗಳ ನೆರವಿಗೆ ಧಾವಿಸಬೇಕು ಎಂದು ಕರೆ ನೀಡಿದ್ದರು. ಕರೆ ಹಿನ್ನೆಲೆಯಲ್ಲಿ ಒಂದೇ ದಿನ ರಾಜ್ಯದ 9 ಮೃಗಾಲಯಗಳಿಗೆ ₹8,58,983 ರೂ. ನೆರವು ಸಿಕ್ಕಿದೆ. ಎರಡು ದಿನದಲ್ಲಿ ಒಟ್ಟು ₹24.75 ಲಕ್ಷ ರೂ. ಸಂಗ್ರಹವಾಗಿದೆ. ದರ್ಶನ್ ಅವರ ಮನವಿ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಸಾರ್ವಜನಿಕರು 50 ರೂ.ನಿಂದ 1ಲಕ್ಷ ರೂ.ವರೆಗೆ ದೇಣಿಗೆ ನೀಡಿದ್ದಾರೆ. ಹೆಚ್ಚು ಮಂದಿ ಒಂದೇ ದಿನ ಲಾಗ್ಇನ್ ಆದ ಪರಿಣಾಮ ಸಾಫ್ಟ್ವೇಟ್ ಕ್ರ್ಯಾಶ್ ಆಗಿ ಒಟಿಪಿ ಸಮಸ್ಯೆ ಆಗಿದೆ. ತಕ್ಷಣ ಸರಿಪಡಿಸಲಾಗುವುದು ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ಮೃಗಾಲಯಕ್ಕೆ ಹೆಚ್ಚು ನೆರವು: ರಾಜ್ಯದ ಮೃಗಾಲಯಗಳಲ್ಲೇ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿದ್ದ ಮೈಸೂರು ಮೃಗಾಲಯಕ್ಕೆ ಒಂದೇ ದಿನದಲ್ಲಿ ₹4,31,309 ರೂ. ನೆರವು ಬಂದಿದೆ. ನಟ ದರ್ಶನ್ ಸಹಾ ಮೈಸೂರಿನವರೇ ಆಗಿದ್ದು, ದರ್ಶನ್ ಅಭಿಮಾನಿಗಳು ಕೂಡ ಮೈಸೂರಲ್ಲೇ ಹೆಚ್ಚಿರುವ ಹಿನ್ನೆಲೆ ಮೈಸೂರು ಮೃಗಾಲಯಕ್ಕೆ ಹೆಚ್ಚು ನೆರವು ಒದಗಿ ಬಂದಿದೆ. ಪ್ರಾಧಿಕಾರವು ದರ್ಶನ್ ಮಾಡಿರುವ ಮನವಿಯ ವಿಡಿಯೋ ಹೇಳಿಕೆಯನ್ನು ತನ್ನ ಟ್ವಿಟ್ಟರ್ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ದರ್ಶನ್ ತೂಗುದೀಪ್ ಮನವಿ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಸಾರ್ವಜನಿಕರು ದೇಣಿಗೆ ನೀಡಿದ್ದಾರೆ.
ಯಾವ್ಯಾವ ಮೃಗಾಲಯಗಳಿಗೆ ಎರಡನೇ ದಿನ ಎಷ್ಟೆಷ್ಟು ದೇಣಿಗೆ ಸಂಗ್ರಹವಾಗಿದೆ?
ಮೃಗಾಲಯಗಳು | ಮೈಸೂರು | ಬನ್ನೇರುಘಟ್ಟ | ಶಿವಮೊಗ್ಗ | ಬೆಳಗಾವಿ | ಕಲಬುರಗಿ | ಗದಗ | ದಾವಣಗೆರೆ | ಹಂಪಿ | ಚಿತ್ರದುರ್ಗ | ಒಟ್ಟು |
ಹಣ ಸಂಗ್ರಹ | ₹13,66,312 | ₹7,30,239 | ₹1,01,430 | ₹32,689 | ₹48,383 | ₹38,939 | ₹62,974 | ₹64,089 | ₹30,013 | ₹24,75,073 |