Covid vaccine: 25 ಕೋಟಿ ಕೋವಿಶೀಲ್ಡ್, 19 ಕೋಟಿ ಕೋವಾಕ್ಸಿನ್ ಖರೀದಿಗೆ ಮುಂದಾದ ಕೇಂದ್ರ
ನವದೆಹಲಿ (ಜೂ. 8): ರಾಜ್ಯಗಳಿಗೆ ಲಸಿಕೆ ಹೊರೆ ತಪ್ಪಿಸಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡುವ ಕುರಿತು ಪ್ರಧಾನಿ ಮೋದಿ ನಿನ್ನೆಯಷ್ಟೇ ತಿಳಿಸಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಸೆರಾಂ ಸಂಸ್ಥೆಯಿಂದ 25 ಕೋಟಿ ಕೋವಿಶೀಲ್ಡ್ ಡೋಸ್ನ್ನು ಹಾಗೂ ಭಾರತ್ ಬಯೋಟೆಕ್ನಿಂದ 19 ಕೋಟಿ ಕೋವಾಕ್ಸಿನ್ ಡೋಸ್ ಅನ್ನು ಖರೀದಿಗೆ ಮುಂದಾಗಿದೆ. ಈ ಕುರಿತು ನೀತಿ ಆಯೋಗದ ಆರೋಗ್ಯ ವಿಭಾದ ಸದಸ್ಯ ವಿಕೆ ಪೌಲ್ ತಿಳಿಸಿದ್ದಾರೆ. ಇಂದು ಈ ಖರೀದಿ ಪ್ರಕ್ರಿಯೆಗೆ ಮಿಂದಾಗಲಾಗಿದೆ, ಹೆಚ್ಚುವರಿ ಲಸಿಕೆ ನೀಡುವ ಕುರಿತು ಎರಡು ತಯಾರಕರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜುಲೈವರೆಗೆ ಒಟ್ಟು 53.6 ಕೋಟಿ ಲಸಿಕೆ ಪೂರೈಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಸೇರಿ ಒಟ್ಟು 44 ಕೋಟಿ ಡೋಸ್ಗಳನ್ನು ಆಗಸ್ಟ್ ಮತ್ತು ಡಿಸೆಂಬರ್ ಒಳಗೆ ಸಿಗಲಿದೆ. ಹೆಚ್ಚವರಿಯಾಗಿ ಶೇ 30 ರಷ್ಟು ಲಸಿಕೆಗಳನ್ನು ಸೆರಾಂ ಸಂಸ್ಥೆ ಮತ್ತು ಭಾರತ್ ಬಯೋಟೆಕ್ ಬಿಡುಗಡೆ ಮಾಡಲಿದೆ. 18 ರಿಂದ 44ರ ವಯಸ್ಸಿನವರಿಗೆ ಲಸಿಕೆ ನೀಡುವ ಜವಾಬ್ದಾರಿಯನ್ನು ಸರ್ಕಾರವೇ ಪಡೆದಿರುವುದರಿಂದ ಇನ್ನು ಹೆಚ್ಚಿನ ಲಸಿಕೆಗೆ ಆದೇಶ ನೀಡಬಹುದು ಎಂದರು
ಇದೇ ವೇಳೆ ಸರ್ಕಾರ 30 ಕೋಟಿ ಪ್ರಮಾಣದ ಬಯೋಲಾಜಿಕಲ್ ಇ ಲಸಿಕೆಯನ್ನು ಖರೀದಿಸಲು ಮುಂದಾಗಿದೆ. ಸೆಪ್ಟೆಂಬರ್ ಒಳಗೆ ಈ ಲಸಿಕೆ ಸಿಗಲಿದೆ.
ಬಯೋಲಾಜಿಕಲ್ ಲಸಿಕೆ ಬೆಲೆಯನ್ನು ಘೋಷಿಸಲಿ ಎಂದು ನಾವು ಕಾಯುತ್ತಿದ್ದೇವೆ. ಕಂಪನಿಯೊಡಗಿನ ಮಾತುಕತೆ ಮೇಲೆ ಹೊಸ ನೀತಿ ಅಡಿಯಲ್ಲಿ ಕಂಪನಿ ದರ ನಿಗದಿಯಾಗಲಿದೆ. ಬಯೋಲಾಜಿಕಲ್ ಇ ಲಸಿಕೆ ಕಾರ್ಬೆವಾಕ್ಸ್ ವೈಜ್ಞಾನಿಕ ದತ್ತಾಂಶ ಸಾಕಷ್ಟಯ ಭರವಸೆಯುಳ್ಳದ್ದಾಗಿದೆ. ಹಿಂದಿನದು ಸೇರಿ ಒಟ್ಟು 127.6 ಕೋಟಿ ಲಸಿಕೆ ಕೇಂದ್ರಕ್ಕೆ ಪೂರೈಕೆಯಾಗಲಿದೆ ಎಂದು ಇದೇ ವೇಳೆ ತಿಳಿಸಿದರು
ಇಳಿಕೆ ಹಾದಿಯಲ್ಲಿ ಪ್ರಕರಣ, ಪರೀಕ್ಷೆ ಪ್ರಮಾಣದಲ್ಲಿ ಏರಿಕೆ
ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣದಲ್ಲಿ ಇಳಿಕೆ ಕಂಡು ಬಂದಿದೆ, ಆದರೆ, ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇರುವ ಹಿನ್ನಲೆ ಕೋವಿಡ್ ನಿಯಮಾವಳಿಗಳನ್ನು ಅನುಸರಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಮೇ ತಿಂಗಳ ಮಧ್ಯ ಭಾಗದಲ್ಲಿ ಕೊರೋನ ಎರಡನೇ ಅಲೆ ತಾರಕಕ್ಕೇ ಏರುತ್ತದೆ. ತಿಂಗಳ ಕೊನೆಯಲ್ಲಿ ಕಡಿಮೆ ಆಗುತ್ತದೆ ಎಂಬ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಅದೇ ರೀತಿ ಮೇ 6ರಂದು 4,14,188 ಪ್ರಕರಣಗಳು ಕಂಡುಬಂದಿದ್ದು ದೇಶದಲ್ಲಿ ದಿನ ಒಂದರಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳಾಗಿದ್ದವು. ನಂತರ ಕೆಳಮುಖವಾಗಿ ಸಾಗಿ ಮೇ 16ರಂದು ಮೊದಲ ಬಾರಿಗೆ ಮೂರು ಲಕ್ಷಕ್ಕೂ ಕಡಿಮೆ ಪ್ರಕರಣಗಳು (2,81,386) ಕಂಡು ಬಂದಿದ್ದವು. ಬರೊಬ್ಬರಿ 63 ದಿನಗಳ ಬಳಿಕ. ಜೊತೆಗೆ ಕೊರೋನಾದಿಂದ ಸಾಯುವವರ ಸಂಖ್ಯೆ ಕೂಡ ಇಳಿಮುಖವಾಗಿದೆ. ಇನ್ನೊಂದೆಡೆ ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಚಿಗುರುತ್ತಿದೆ. ಇದರಿಂದಾಗಿ ಈಗ ಕೊರೋನಾ ಎರಡನೇ ಅಲೆ ಕೊನೆಯಾಗಬಹುದು ಎಂಬ ಸ್ಪಷ್ಟ ಲಕ್ಷಣಗಳು ಗೋಚರಿಸತೊಡಗಿವೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 86,498 ಕೊರೋನಾ ಪ್ರಕರಣಗಳು ಪತ್ತೆ ಆಗಿವೆ. ಇವು ಕಳೆದ 66 ದಿನಗಳಲ್ಲಿ ಕಂಡು ಬಂದ ಕಡಿಮೆ ಪ್ರಕರಣಗಳು. ಇದರಿಂದ ದೇಶದ ಕೊರೋನಾ ಸೋಂಕಿತರ ಸಂಖ್ಯೆ 2,89,96,473ಕ್ಕೆ ಏರಿಕೆ ಆಗಿದೆ