ಕೋವಿಡ್ ಅನ್‌ಲಾಕ್‌: ಜಿಲ್ಲಾಧಿಕಾರಿಗಳ ಜೊತೆ ಬಿಎಸ್‌ವೈ ನಡೆಸಲಿದ್ದಾರೆ ಮಹತ್ವದ ಸಭೆ, ಸರ್ಕಾರದ ಪ್ಲ್ಯಾನ್‌ ಏನು?

ಹೈಲೈಟ್ಸ್‌:

  • ಕೋವಿಡ್ ಅನ್‌ಲಾಕ್‌ ಪ್ರಕ್ರಿಯೆ ಆರಂಭದ ಕುರಿತಾಗಿ ಸರ್ಕಾರ ಚಿಂತನೆ
  • ಜಿಲ್ಲಾಧಿಕಾರಿಗಳ ಜೊತೆ ಬಿಎಸ್‌ವೈ ನಡೆಸಲಿದ್ದಾರೆ ಮಹತ್ವದ ಸಭೆ
  • ಜಿಲ್ಲೆಯ ಸ್ಥಿತಿಗತಿಗಳ ಕುರಿತಾಗಿ ಮಾಹಿತಿ ಪಡೆದುಕೊಳ್ಳಲಿರುವ ಸಿಎಂ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಾರಿಗೊಳಿಸಲಾಗಿರುವ ಲಾಕ್‌ಡೌನ್ ಅವಧಿ ಜೂನ್ 14 ಕ್ಕೆ ಮುಕ್ತಾಯಗೊಳ್ಳಲಿದ್ದು ಅನ್‌ಲಾಕ್‌ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಕುರಿತಾಗಿ ಚರ್ಚೆ ನಡೆಸಲು ಸಿಎಂ ಬಿಎಸ್‌ ಯಡಿಯೂರಪ್ಪ ಗುರುವಾರ ಬೆಳಗ್ಗೆ 11.30 ಕ್ಕೆ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಲಿದ್ದಾರೆ.

ಸದ್ಯ ಕೋವಿಡ್‌ ಪ್ರಕರಣಗಳು ಇಳಿಕೆಯಾಗುತ್ತಿವೆ. ರಾಜ್ಯದಲ್ಲಿ ಬುಧವಾರ ಹೊಸ ಕೋವಿಡ್ ಪ್ರಕರಣಗಳು 10,959 ವರದಿಯಾಗಿವೆ. ಕೋವಿಡ್‌ ಸೋಂಕಿಗೆ ತುತ್ತಾಗಿ 192 ಮಂದಿ ಮೃತ ಪಟ್ಟಿದ್ದಾರೆ. ಸದ್ಯ ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ 6.68 ಕ್ಕೆ ಇಳಿಕೆಯಾಗಿದೆ.

ಈ ನಿಟ್ಟಿನಲ್ಲಿ ಹಂತ ಹಂತವಾಗಿ ಅನ್‌ಲಾಕ್ ಪ್ರಕ್ರಿಯೆ ಆರಂಭಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸಿಎಂ ಜಿಲ್ಲೆಗಳ ಸ್ಥಿತಿಗತಿಗಳ ಕುರಿತಾಗಿ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಈ ಬಳಿಕ ಸಚಿವರ ಜೊತೆಗೂ ಸಭೆಯನ್ನು ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಅನ್‌ಲಾಕ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಾಂತ್ರಿಕ ಸಲಹಾ ಸಮಿತಿ ಕೆಲವೊಂದು ಶಿಫಾರಸುಗಳನ್ನು ಕೂಡಾ ಮಾಡಿದೆ. ಮೊದಲ ಹಂತದಲ್ಲಿ ಮಾರುಕಟ್ಟೆ ವ್ಯಾಪಾರ ಅವಧಿಯನ್ನು 2ಗಂಟೆ ಹೆಚ್ಚುವರಿ ಅವಧಿಗೆ ವಿಸ್ತರಣೆ ಮಾಡುವುದು ನಂತರದಲ್ಲಿ 10 ಗಂಟೆಗಳ ಕಾಲ ವಹಿವಾಟು ನಡೆಸಲು ಅವಕಾಶ ನೀಡಲು ಸಲಹೆ ನೀಡಿದೆ.

ಅಲ್ಲದೆ ಮಾಲ್‌, ಶಾಪಿಂಗ್ ಕಾಂಪ್ಲೆಕ್ಸ್ ಗಳಿಗೂ ನಾಲ್ಕು ಗಂಟೆಗಳ ಕಾಲ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲು ಸಲಹೆ ನೀಡಿದೆ. ಎರಡನೇ ಹಂತದಲ್ಲಿ 10 ಗಂಟೆಗಳ ಕಾಲ ವ್ಯಾಪಾರ ನಡೆಸಲು ಅವಕಾಶ ನೀಡುವುದು, ಅದೇ ರೀತಿ ರೆಸ್ಟೋರೆಂಟ್, ಕಫೆಟೇರಿಯಾ, ಬಾರ್‌ ಪಬ್‌ಗಳಿಗೂ ಮೊದಲ ಹಂತದಲ್ಲಿ ನಾಲ್ಕು ಗಂಟೆಗಳ ಕಾಲ ಎರಡನೇ ಹಂತದಲ್ಲಿ 10 ಗಂಟೆಗಳ ಕಾಲ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಸಲಹೆ ನೀಡಿದೆ.

ಆದರೆ ವಿವಾಹ, ಸಭೆ ಸಮಾರಂಭಗಳಿಗೆ 50 ರಿಂದ 100 ಜನರ ವರೆಗೆ ಮಾತ್ರ ಅವಕಾಶ ನೀಡುವಂತೆ ಸಲಹೆ ನೀಡಿದೆ. ಅದನ್ನು ಹೊರತು ಪಡಿಸಿ ಯಾವುದೇ ಧಾರ್ಮಿಕ ಕೇಂದ್ರಗಳನ್ನು ಸದ್ಯಕ್ಕೆ ತೆರೆಯದೆ ಇರುವುದು ಒಳಿತು ಎಂಬ ನಿಟ್ಟಿನಲ್ಲಿ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಿದೆ ಎಂದು ತಿಳಿದುಬಂದಿದೆ.

ಈ ಎಲ್ಲಾ ಶಿಫಾರಸುಗಳ ಆಧಾರದಲ್ಲಿ ಸರ್ಕಾರ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಸದ್ಯ ಜಿಲ್ಲೆಗಳ ಸ್ಥಿತಿಗತಿಗಳ ಕುರಿತಾಗಿ ಸಿಎಂ ಬಿಎಸ್‌ವೈ ವರದಿ ಪಡೆದುಕೊಂಡು ಆ ಬಳಿಕ ಅನ್‌ಲಾಕ್‌ ಪ್ರಕ್ರಿಯೆಗಳ ಕುರಿತಾಗಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *