Rohini Sindhuri: ಮೈಸೂರಿನಿಂದ ತೆರಳುವ ಮುನ್ನ ಸಾ.ರಾ.ಮಹೇಶ್ಗೆ ಶಾಕ್ ಕೊಟ್ಟ ರೋಹಿಣಿ ಸಿಂಧೂರಿ..!
ಮೈಸೂರು(ಮೇ 10): ರೋಹಿಣಿ ಸಿಂಧೂರಿ ವರ್ಗಾವಣೆಗೆ ಭೂ ಮಾಫಿಯಾವೇ ಕಾರಣ ಎಂದು ಹೇಳಲಾಗುತ್ತಿದೆ. ಅದಕ್ಕೆ ಪೂರಕ ಎಂಬಂತೆ ರೋಹಿಣಿ ಸಿಂಧೂರಿ ಅವರೇ ಮಾತನಾಡಿರುವ ಆಡಿಯೋ ಕೂಡ ವೈರಲ್ ಆಗಿದೆ. ರೋಹಿಣಿ ಸಿಂಧೂರಿ ಮೈಸೂರಿನಿಂದ ತೆರಳುವ ಮುನ್ನ ಜನಪ್ರತಿನಿಧಿಗಳಿಗೆ ಶಾಕ್ ಕೊಟ್ಟಿದ್ದಾರೆ. ಸಾ.ರಾ.ಮಹೇಶ್ ಹಾಗೂ ರಾಜೀವ್ ವಿರುದ್ಧ ಭೂ ಮಾಫಿಯಾ ಆರೋಪ ಮಾಡಿರುವ ರೋಹಿಣಿ ಸಿಂಧೂರಿ, ಹಲವು ಭೂ ಪರಿವರ್ತನೆ ಯೋಜನೆಗಳನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ.
ದೂರು ಕೇಳಿ ಬಂದ ಹಿನ್ನೆಲೆ, ಐದು ಭೂ ಪರಿವರ್ತನಾ ಯೋಜನೆಗಳನ್ನು ರದ್ದುಗೊಳಿಸಿ ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ. ಸಾ.ರಾ.ಮಹೇಶ್ ಹಾಗೂ ಪ್ರಭಾವಿಗಳಿಗೆ ಸೇರಿದೆ ಎನ್ನಲಾದ ಭೂಮಿ ಇದಾಗಿದೆ. ಭೂಮಿಯನ್ನು ಹರಾಜಿನ ಮೂಲಕ ಸುಳ್ಳು ದಾಖಲೆ ನಿರ್ಮಿಸಿ ಪಡೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆರೋಪದ ಹಿನ್ನೆಲೆ, ದಾಖಲೆ ಮರು ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ರೋಹಿಣಿ ಸಿಂಧೂರಿ ರದ್ದುಗೊಳಿಸಿದ ಭೂ ಪರಿವರ್ತನಾ ಯೋಜನೆಗಳು:
1. ಮೈಸೂರಿನ ದಟ್ಟಗಳ್ಳಿಯ ಸರ್ವೇ ನಂ.123ರ ಗೋಮಾಳ ಜಾಗ
5 ಎಕರೆಯ ಜಾಗವನ್ನ ಸುಳ್ಳು ಹೇಳಿ ಭೂ ಪರಿವರ್ತನೆ ಮಾಡಲಾಗಿದೆ. ಒಂದು ವಾರದೊಳಗೆ ಈ ಬಗ್ಗೆ ವರದಿ ನೀಡುವಂತೆ ರೋಹಿಣಿ ಸಿಂಧೂರಿ ಸೂಚನೆ ನೀಡಿದ್ದಾರೆ.
2. ಲಿಂಗಾಬುದಿ ಗ್ರಾಮದಲ್ಲಿ ಕೃಷಿ ಭೂಮಿಯನ್ನ ವಸತಿ ಯೋಜನೆಗೆಂದು ಭೂ ಪರಿವರ್ತನೆ1.39 ಎಕರೆ ಭೂಮಿಯನ್ನು ಕೃಷಿ ಮಹಾಯೋಜನೆಯಲ್ಲಿ ಮೀಸಲಿಡಲಾಗಿದೆ. ಅದನ್ನ ವಸತಿ ಯೋಜನೆಗೆ ಪರಿವರ್ತನೆ ಮಾಡದಂತೆ ನಿಯಮ ಇದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ ಗಂಗಾರಾಜು ದೂರು ನೀಡಿದ ಹಿನ್ನಲೆ, ರೋಹಿಣಿ ಸಿಂಧೂರಿ ಭೂ ಪರಿವರ್ತನೆ ಮಾಡಿದ್ದ ಆದೇಶ ರದ್ದು ಮಾಡಿದ್ದಾರೆ. ಈ ಸಂಬಂಧ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಮುಡಾ ಆಯುಕ್ತರಿಗೆ ಕ್ರಮಕ್ಕೆ ಸೂಚಿಸಿದ್ದಾರೆ.
3.ಜಯಪುರ ಹೋಬಳಿಯ ಕೇರ್ಗಳ್ಳಿ ಗ್ರಾಮದ ಸರ್ವೇ ನಂ- 115
ಇಲ್ಲಿ 129.22 ಎಕರೆ ಜಮೀನು. ಆರ್‌ಟಿಸಿಯಲ್ಲಿ 199 ಎಕರೆ ಎಂದು ಉಲ್ಲೇಖವಾಗಿದೆ. ಕೆಲ ವ್ಯಕ್ತಿಗಳು ಅನೇಕ ಬಾರಿ ದಾಖಲೆ ನಿರ್ಮಿಸಿ ಪರಿಹಾರ ಪಡೆದ ಹಿನ್ನಲೆ, ಮತ್ತೆ ಈ ಜಾಗವನ್ನ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದಾರೆ. 60.22 ಎಕರೆ ಜಮೀನನ್ನ RTC ಯಿಂದ ಕೈ ಬಿಟ್ಟು ತನಿಖೆ ಮಾಡುವಂತೆ ಸೂಚನೆ ನೀಡಲಾಗಿದೆ.
4. ಲಿಂಗಾಬುದಿ ಕೆರೆಯ ಪಕ್ಕದ 2 ಎಕರೆ ಜಾಗಕ್ಕೂ ನೋಟಿಸ್
ಕೂಡಲೇ ಇದನ್ನ ಜಿಲ್ಲಾಡಳಿತ ವಶಪಡಿಸಿಕೊಳ್ಳಲು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಸೂಚಿಸಿದ್ದಾರೆ. ರೆಸಾರ್ಟ್ ನಿರ್ಮಾಣಕ್ಕೆ ಭೂ ಪರಿವರ್ತನೆ ಮಾಡಿಸಿಕೊಳ್ಳಲಾಗಿತ್ತು. ಮುಡಾದಿಂದ ಇದನ್ನ ಅನುಮೋದನೆ ಮಾಡಿಕೊಡಲಾಗಿತ್ತು. ಆದರೆ ಇದು ಮುಡಾ ವ್ಯಾಪ್ತಿಗೆ ಬರೋದಿಲ್ಲ, ಇದಕ್ಕೆ ಅನುಮತಿ ನೀಡಲು ಮುಡಾಗೆ ಯಾವುದೇ ಅಧಿಕಾರ ಇಲ್ಲ ಎಂದ ಸಿಂಧೂರಿ ಹೇಳಿದ್ದಾರೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಉಲ್ಲೇಖಿಸಿ ಭೂ ಪರಿವರ್ತನೆ ರದ್ದು ಮಾಡುವಂತೆ ಸೂಚನೆ ಹೊರಡಿಸಲಾಗಿದೆ.
5. ಜಯಪುರ ಹೋಬಳಿಯ ಯಡಹಳ್ಳಿ ಬಳಿಯ ಜಮೀನಿಗೂ ನೋಟಿಸ್
ಸರ್ಕಾರಿ ಭೂಮಿ ಒತ್ತುವರಿ ಮಾಡಿ ಖಾಸಗಿ ಬಡಾವಣೆ ನಿರ್ಮಾಣ ಮಾಡಲಾಗಿದೆ. ಈ ಕಾರಣ ಕೂಡಲೇ ಭೂ ಪರಿವರ್ತನೆ ರದ್ದು ಮಾಡುವಂತೆ ನಿರ್ಗಮಿತ ಡಿಸಿ ಸೂಚಿಸಿದ್ದಾರೆ. ಸರ್ಕಾರಿ ಭೂಮಿ ವಶಕ್ಕೆ ಪಡೆದು ಸ್ಥಳ ಪರಿಶೀಲನೆಗೆ ಸೂಚನೆ ನೀಡಿದ್ದಾರೆ. ಒಂದು ವಾರದೊಳಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಸೂಚನೆ ಕೊಟ್ಟಿದ್ದಾರೆ.
ಅಧಿಕಾರಿಗಳನ್ನ ಹೆದರಿಸಿ, ಬೆದರಿಸಿ ಕೆಲಸ ಮಾಡಿಸಿಕೊಳ್ಳೋದು. ಇದೀಗ ಸುದ್ದಿಗೋಷ್ಠಿ ಮಾಡಿಕೊಂಡು ಹೆಸರಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಆಮಿಷ ತೋರಿಸುವ ಪ್ರವೃತ್ತಿ ಬೆಳೆಸಿಕೊಂಡು ಬಂದಿದ್ದಾರೆ ಎಂದು ನೇರವಾಗಿಯೇ ಸಾರಾ ಮಹೇಶ್ ಹಾಗೂ ರಾಜೀವ್ ವಿರುದ್ಧ ಸಿಂಧೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.