ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಕರ್ನಾಟಕದ ಮೂವರಿಗೆ ಚಾನ್ಸ್‌!

ಹೈಲೈಟ್ಸ್‌:

  • ಜುಲೈನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ.
  • 3 ಪಂದ್ಯಗಳ ಟಿ20 ಮತ್ತು ಒಡಿಐ ಸರಣಿಗಳಿಗೆ ಶಿಖರ್‌ ಧವನ್‌ ನಾಯಕ.
  • ಕರ್ನಾಟಕದ ಮೂವರು ಆಟಗಾರರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದೆ.

ಬೆಂಗಳೂರು: ಏಕಕಾಲದಲ್ಲಿ ಎರಡು ತಂಡಗಳನ್ನು ಆಡಿಸಲು ಮುಂದಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಜುಲೈನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಕ್ರಿಕೆಟ್‌ ಮತ್ತು ಟಿ20 ಕ್ರಿಕೆಟ್‌ ಸರಣಿಗಳಿಗೆ ಶಿಖರ್‌ ಧವನ್‌ ಸಾರಥ್ಯದ ತಂಡವನ್ನು ಪ್ರಕಟ ಮಾಡಿದೆ.

ಟೀಮ್ ಇಂಡಿಯಾ ಆಯ್ಕೆ ಸಮಿತಿ ಶ್ರೀಲಂಕಾ ಪ್ರವಾಸ ಸಲುವಾಗಿ ಅನುಭವಿ ಮತ್ತು ಯುವ ಆಟಗಾರರನ್ನು ಒಳಗೊಂಡ ಒಟ್ಟು 20 ಸದಸ್ಯರ ಭಾರತ ತಂಡವನ್ನು ಗುರುವಾರ ತಡರಾತ್ರಿ ಪ್ರಕಟ ಮಾಡಿದೆ. ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಅವರನ್ನು ತಂಡದ ಉಪನಾಯಕನನ್ನಾಗಿ ನೇಮಕ ಮಾಡಿದೆ. ಆದರೆ, ಕೋಚ್‌ ಯಾರು ಎಂಬುದನ್ನು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿಲ್ಲ. ರಾಹುಲ್ ದ್ರಾವಿಡ್‌ ಭಾರತದ ಈ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಸದ್ಯ ದ್ರಾವಿಡ್‌ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ನಡುವೆ ಗಾಯದ ಸಮಸ್ಯೆಯಿಂದ ಚೇತರಿಸುತ್ತಿರುವ ಸ್ಟಾರ್‌ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಅವರಿಗೆ ಈ ಪ್ರವಾಸದಲ್ಲಿ ವಿಶ್ರಾಂತಿ ನೀಡಲಾಗಿದ್ದು, ಮಂಡಿ ನೋವಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ತಮಿಳುನಾಡಿನ ಎಡಗೈ ವೇಗದ ಬೌಲರ್‌ ಟಿ ನಟರಾಜನ್‌ ಅವರನ್ನೂ ತಂಡದಿಂದ ಹೊರಗಿಡಲಾಗಿದೆ. ವಿಶೇಷವಾಗಿ ಈ ಬಾರಿ ಭಾರತ ತಂಡದ ನೆಟ್‌ಬೌಲರ್‌ಗಳಾಗಿ ಐವರನ್ನು ಆಯ್ಕೆ ಮಾಡಲಾಗಿದೆ.

ಈ ಮೊದಲೇ ವರದಿಯಾಗಿದ್ದಂತೆ ಜುಲೈ 13ರಂದು ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿ ಆರಂಭವಾಗಲಿದ್ದು, ಜುಲೈ 25ರಂದು ಭಾರತ ತಂಡದ ಈ ಪ್ರವಾಸ ಅಂತ್ಯಗೊಳ್ಳಲಿದೆ. ಒಡಿಐ ಮತ್ತು ಟಿ20-ಐ ಸರಣಿಗಳ ಎಲ್ಲಾ ಪಂದ್ಯಗಳನ್ನು ಕೊಲೊಂಬೊದ ಆರ್‌ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದ್ದು, ಸೋನಿ ಸ್ಪೋರ್ಟ್ಸ್‌ (ಟೆಲಿವಿಷನ್) ಮತ್ತು ಸೋನಿ ಲಿವ್‌ (ಮೊಬೈಲ್ ಅಪ್ಲಿಕೇಷನ್) ಮೂಲಕ ಲೈವ್‌ ಟೆಲಿಕಾಸ್ಟ್‌ ಆಗಲಿದೆ.

ರಾಜ್ಯದ ಮೂವರಿಗೆ ಸ್ಥಾನ
ಶ್ರೀಲಂಕಾ ಪ್ರವಾಸಕ್ಕೆ ಕರ್ನಾಟಕದ ಸ್ಟಾರ್‌ಗಳಾದ ಮನೀಶ್‌ ಪಾಂಡೆ ಮತ್ತು ದೇವದತ್‌ ಪಡಿಕ್ಕಲ್‌ ಆಯ್ಕೆಯನ್ನು ನಿರೀಕ್ಷಿಸಲಾಗಿತ್ತು. ಇತ್ತ ದೇಶಿ ಟೂರ್ನಿಗಳಲ್ಲಿ ಮತ್ತಯ ಭಾರತ ‘ಎ’ ತಂಡಗಳಲ್ಲಿ ಮಿಂಚಿರುವ ಆಲ್‌ರೌಂಡರ್‌ ಕೃಷ್ಣಪ್ಪ ಗೌತಮ್‌ ಕೂಡ ಟೀಮ್ ಇಂಡಿಯಾ ಟಿಕೆಟ್‌ ಪಡೆದಿದ್ದಾರೆ. ಈ ಮೂಲಕ ರಾಜ್ಯದ ಮೂವರಿ ಆಟಗಾರರಿಗೆ ಭಾರತ ತಂಡದಲ್ಲಿ ಸ್ಥಾನ ಲಭ್ಯವಾಗಿದೆ.

ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ
ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್‌ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಯುಜ್ವೇಂದ್ರ ಚಹಲ್, ರಾಹುಲ್ ಚಹರ್, ಕೆ ಗೌತಮ್, ಕ್ರುಣಾಲ್ ಪಾಂಡ್ಯ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ (ಉಪನಾಯಕ), ದೀಪಕ್ ಚಹರ್, ನವದೀಪ್ ಸೈನಿ, ಚೇತನ್ ಸಕರಿಯಾ.

ನೆಟ್‌ ಬೌಲರ್ಸ್‌: ಇಶಾನ್‌ ಪೊರೆಲ್, ಸಂದೀಪ್ ವಾರಿಯರ್‌, ಅರ್ಷದೀಪ್‌ ಸಿಂಗ್, ಸಾಯ್‌ ಕಿಶೋರ್, ಸಿಮ್ರನ್‌ಜೀತ್‌ ಸಿಂಗ್.

ಶ್ರೀಲಂಕಾ ಪ್ರವಾಸದ ವೇಳಾಪಟ್ಟಿ

  • ಜುಲೈ 13, ಮೊದಲ ಒಡಿಐ
  • ಜುಲೈ 16, ಎರಡನೇ ಒಡಿಐ
  • ಜುಲೈ 18, ಮೂರನೇ ಒಡಿಐ
  • ಜುಲೈ 21, ಮೊದಲ ಟಿ20-ಐ
  • ಜುಲೈ 23, ಎರಡನೇ ಟಿ20-ಐ
  • ಜುಲೈ 25, ಮೂರನೇ ಟಿ20-ಐ

(ಎಲ್ಲಾ ಪಂದ್ಯಗಳು ಕೊಲೊಂಬೋದ ಆರ್‌ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಯೋ ಸೆಕ್ಯೂರ್‌ ವಾತಾವರಣದ ಅಡಿ ನಡೆಯಲಿದೆ)

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *