ಬೆಣ್ಣೆತೋರಾ ಜಲಾಶಯದಿಂದ ನದಿಗೆ ಬಿಡುವ ಸಂಭವ: ನದಿಯ ಅಕ್ಕಪಕ್ಕದ ಜನರು ಎಚ್ಚರಿಕೆಯಿಂದಿರಲು ಸೂಚನೆ
ಕಲಬುರಗಿ :ಬೆಣ್ಣೆತೋರಾ ಯೋಜನೆ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ನಿರಂತರಬಾಗಿ ಒಳಹರಿವು ಬರುತ್ತಿದೆ. ಅಲ್ಲದೇ ಮೇಲ್ಭಾಗದ ಜಲಾಯಶದಿಂದ ನೀರು ಬಿಡುವ ಸಂಭವವಿರುವುದರಿಂದ ಈ ಜಲಾಶಯವು ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿದೆ. ಗರಿಷ್ಠ ಮಟ್ಟದ ನಂತರ ಬಂದ ಒಳಹರಿವಿನ ನೀರನ್ನು ಆಣೆಕಟ್ಟೆ ಕೋಡಿ ಮುಖಾಂತರ ನದಿಗೆ ಹರಿಬಿಡಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಹೆಬ್ಬಾಳ ಬೆಣ್ಣೆತೋರಾ ಯೋಜನೆ ವಿಭಾಗದ-4ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಆದ್ದರಿಂದ ಬೆಣ್ಣೆತೋರಾ ನದಿ ಸುತ್ತಮುತ್ತಲಿನ ಗ್ರಾಮಗಳು ನದಿ ಪ್ರವಾಹದಿಂದ ತೊಂದರೆ ಉಂಟಾಗಬಹುದಾಗಿದೆ. ನದಿಯ ಅಕ್ಕಪಕ್ಕದ ಜನರು, ಸಾರ್ವಜನಿಕರು ನದಿಯಲ್ಲಿ ಇಳಿದು ಈಜುವುದಾಗಲಿ, ಬಟ್ಟೆ ಒಗೆಯುವುದಾಗಲಿ, ದನಕರುಗಳಿಗೆ ನೀರು ಕುಡಿಸುವುದಾಗಲಿ ಹಾಗೂ ಇನ್ನಿತರ ಯಾವುದೇ ಕಾರಣಕ್ಕಾಗಿ ನದಿಯಲ್ಲಿ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ನದಿಯ ಪಾತ್ರದಲ್ಲಿರುವ ಸಣ್ಣ ನೀರಾವರಿ ಮತ್ತು ಇನ್ನಿತರ ಯಾವುದೇ ಇಲಾಖೆಗಳಿಗೆ ಸಂಬಂಧಪಟ್ಟ ಆಸ್ತಿಗಳಿದ್ದಲ್ಲಿ ಮುಂಜಾಗೃತೆಯಾಗಿ ಸುರಕ್ಷಿತ ಕ್ರಮಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.