ಮಕ್ಕಳ ಕೊರೊನಾ ಚಿಕಿತ್ಸೆಗೆ ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ, ರೆಮ್‌ಡೆಸಿವಿರ್‌ ಬಳಸದಂತೆ ತಾಕೀತು

ಹೈಲೈಟ್ಸ್‌:

  • ಮಕ್ಕಳ ಕೋವಿಡ್‌ ಚಿಕಿತ್ಸೆಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಇಲಾಖೆಯಿಂದ ‘ಮಾರ್ಗದರ್ಶಿ ಸೂತ್ರ’ಗಳು ಪ್ರಕಟ
  • ಮಕ್ಕಳಿಗೆ ರೆಮ್‌ಡೆಸಿವಿರ್‌ ಬಳಕೆ ಮಾಡದಂತೆ ಸೂಚನೆ
  • ವೈದ್ಯರ ಕಟ್ಟುನಿಟ್ಟಿನ ನಿಗಾದಲ್ಲಿ ಸ್ಟೆರಾಯ್ಡ್‌ ಬಳಕೆ, ತೀರಾ ಅಗತ್ಯ ಸಂದರ್ಭದಲ್ಲಿ ಮಾತ್ರ ಸಿಟಿ ಸ್ಕ್ಯಾನ್‌
  • ಸಂಭಾವ್ಯ ಕೋವಿಡ್‌ ಮೂರನೇ ಅಲೆಗೆ ಸಿದ್ಧತೆ ಆರಂಭಿಸಿದ ಕೇಂದ್ರ

ಹೊಸದಿಲ್ಲಿ: ಸಂಭಾವ್ಯ ಕೋವಿಡ್‌-19 ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಬಹುದು ಎಂಬ ತಜ್ಞರ ಎಚ್ಚರಿಕೆಯ ಬೆನ್ನಲ್ಲೇ ಕೇಂದ್ರ ಸರಕಾರವು, ಮಕ್ಕಳ ಕೋವಿಡ್‌ ಚಿಕಿತ್ಸೆಗೆ ಸಂಬಂಧಿಸಿದಂತೆ ‘ಮಾರ್ಗದರ್ಶಿ ಸೂತ್ರ’ಗಳನ್ನು ಬಿಡುಗಡೆ ಮಾಡಿದೆ.

ಆ್ಯಂಟಿವೈರಲ್‌ ಡ್ರಗ್‌ ರೆಮ್‌ಡೆಸಿವಿರ್‌, ಎಚ್‌ಆರ್‌ಸಿಟಿ ಸ್ಕ್ಯಾ‌ನ್‌ ಮತ್ತು ಸ್ಟೆರಾಯ್ಡ್‌ ಬಳಕೆಯ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಯ ತಾಂತ್ರಿಕ ವಿಭಾಗ ‘ಆರೋಗ್ಯ ಸೇವಾ ಪ್ರಧಾನ ನಿರ್ದೇಶನಾಲಯ’ವು ಈ ಮಾರ್ಗದರ್ಶಿಗಳನ್ನು ನೀಡಿದೆ.

18 ವರ್ಷದ ಕೆಳಗಿನ ಮಕ್ಕಳಿಗೆ ರೆಮ್‌ಡೆಸಿವಿರ್‌ ಬಳಕೆಯ ಬಗ್ಗೆ ವೈಜ್ಞಾನಿಕ ಸುರಕ್ಷತೆ ಮತ್ತು ಪರಿಣಾಮಕಾರಿಯ ದತ್ತಾಂಶಗಳ ಕೊರತೆ ಇದ್ದು, ಈ ಔಷಧದ ಶಿಫಾರಸನ್ನು ನಿರಾಕರಿಸಲಾಗಿದೆ. ಗಂಭೀರ ಸ್ಥಿತಿಗೆ ತಲುಪಿದಾಗ ಮಾತ್ರವೇ ಎದೆಯ ಎಚ್‌ಆರ್‌ಸಿಟಿ ಸ್ಕ್ಯಾ‌ನ್‌ ಮಾಡಬೇಕು ಎಂದೂ ತಿಳಿಸಲಾಗಿದೆ.

ಅದೇ ರೀತಿ ಸ್ಟೆರಾಯ್ಡ್‌ ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಔಷಧಗಳನ್ನು ವೈದ್ಯರ ಕಟ್ಟುನಿಟ್ಟು ನಿಗಾದಲ್ಲಿ ಮಾತ್ರವೇ ಬಳಸಬೇಕು ಎಂದು ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ. ಹೋಮ್‌ ಐಸೊಲೇಷನ್‌, ಲಘು, ಗಂಭೀರ ಸ್ಥಿತಿಯಲ್ಲಿ ಯಾವ ರೀತಿಯ ಆರೈಕೆ ಮತ್ತು ಚಿಕಿತ್ಸೆ ಕೈಗೊಳ್ಳಬೇಕೆಂಬುದರ ಬಗ್ಗೆ ವಿವರವಾಗಿ ನಿರ್ದೇಶಿಸಲಾಗಿದೆ.

– ರೆಮ್‌ಡೆಸಿವಿರ್‌ ಬಳಸಬಹುದಾ?

ಮಕ್ಕಳಿಗೆ ರೆಮ್‌ಡೆಸಿವಿರ್‌ ಔಷಧ ಬಳಸುವುದರಿಂದ ಉಂಟಾಗುವ ಪರಿಣಾಮದ ದತ್ತಾಂಶಗಳಾಗಲಿ, ವೈಜ್ಞಾನಿಕ ಸುರಕ್ಷತೆಯ ಖಾತರಿಯಾಗಲಿ ಇಲ್ಲ. ಹಾಗಾಗಿ, ಮಕ್ಕಳಿಗೆ ರೆಮ್‌ಡೆಸಿವಿರ್‌ ಬಳಕೆಯನ್ನು ಮಾರ್ಗದರ್ಶಿಯಲ್ಲಿ ಸೂಚಿಸಿಲ್ಲ. ಹಿರಿಯರಲ್ಲಿ ಮಾತ್ರವೇ ಈ ಔಷಧವನ್ನು ತುರ್ತು ಪರಿಸ್ಥಿತಿಯಲ್ಲಿ ಈ ಹಿಂದೆ ಬಳಸಲಾಗುತ್ತಿತ್ತು.

-ಸ್ಟೆರಾಯ್ಡ್‌ ಬಳಸಬೇಕಾ?

ಆಸ್ಪತ್ರೆಗೆ ದಾಖಲಾದ ಮಧ್ಯಮ ತೀವ್ರ ಮತ್ತು ಗಂಭೀರ ಸೋಂಕಿತ ಮಕ್ಕಳಿಗೆ ಮಾತ್ರವೇ ವೈದ್ಯರ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಸ್ಟೆರಾಯ್ಡ್‌ ಬಳಸಬೇಕು. ಈ ಔಷಧವನ್ನು ಸೂಕ್ತ ಕಾಲದಲ್ಲಿ, ಸೂಕ್ತ ಡೋಸ್‌ನೊಂದಿಗೆ ಸೂಕ್ತ ಅವಧಿಯವರೆಗೆ ನೀಡಬೇಕು. ವೈದ್ಯರ ಶಿಫಾರಸು ಇಲ್ಲದೇ ಸ್ಟೆರಾಯ್ಡ್‌ ನೀಡುವಂತಿಲ್ಲ.

-ಸಿಟಿ ಸ್ಕ್ಯಾ‌ನ್‌ ಅಗತ್ಯವೇ?

ಮಕ್ಕಳಿಗೆ ಸಂಬಂಧಿಸಿದಂತೆ ಹೈರೆಸೋಲ್ಯುಷನ್‌ ಸಿಟಿ (ಎಚ್‌ಆರ್‌ಸಿಟಿ) ಸ್ಕ್ಯಾ‌ನ್‌ ಪರೀಕ್ಷೆಗೆ ವಿವೇಚನಾಯುಕ್ತವಾಗಿ ಸೂಚಿಸಬೇಕು. ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವಾಗ ಈ ಸ್ಕ್ಯಾ‌ನ್‌ನಿಂದ ದೊರೆಯುವ ಯಾವುದೇ ಹೆಚ್ಚುವರಿ ಮಾಹಿತಿಯು ತೀರಾ ಪರಿಣಾಮಕಾರಿಯೇನಲ್ಲ. ಚಿಕಿತ್ಸೆಯು ಬಹುತೇಕ ರೋಗಿಯ ತೀವ್ರತೆಯ ಮೇಲೆಯೇ ನಿರ್ಧಾರವಾಗುತ್ತದೆ. ಆದ್ದರಿಂದ ಎಚ್‌ಆರ್‌ಸಿಟಿ ಪರೀಕ್ಷೆ ಸಂಬಂಧ ಅಳೆದುತೂಗಿ ನಿರ್ಧಾರ ಕೈಗೊಳ್ಳಬೇಕು.

– ಲಕ್ಷಣರಹಿತ ಮತ್ತು ಸ್ವಲ್ಪವೇ ಲಕ್ಷಣಗಳಿದ್ದಾಗ

  • ಮಾಸ್ಕ್‌ ಧಾರಣೆ, ಕೈ ತೊಳೆಯುವುದು, ಸಾಮಾಜಿಕ ಅಂತರ ಕಡ್ಡಾಯ.
  • ಸೋಂಕು ಗೊತ್ತಾದ ಕೂಡಲೇ ತಂದೆ ತಾಯಿ ಅಥವಾ ಪೋಷಕರ ನಿಗಾದಲ್ಲಿ ಶಿಶುಗಳು ಮತ್ತು ಮಕ್ಕಳು ಇರಬೇಕು.
  • ಮಕ್ಕಳಿಗೆ ಯಾವುದೇ ನಿರ್ದಿಷ್ಟ ವೈದ್ಯಕೀಯ ಚಿಕಿತ್ಸೆ ಬೇಕಿಲ್ಲ. ಆದರೆ, ಕೋವಿಡ್‌ ಮಾರ್ಗದರ್ಶಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
  • ಸೋಂಕಿತ ಮಕ್ಕಳಿಗೆ ಪೌಷ್ಟಿಕಯುಕ್ತ ಆಹಾರ ನೀಡಬೇಕು.
  • ಹಿರಿಯ ಮಕ್ಕಳು ಸೋಂಕಿತರಾಗಿದ್ದರೆ ಅವರೊಂದಿಗೆ ಪೋಷಕರು ನಿರಂತರ ಸಂಪರ್ಕದಲ್ಲಿರಬೇಕು. ಅವರಲ್ಲಿ ಸಕಾರಾತ್ಮಕ ಭಾವನೆಯನ್ನು ಬೆಳೆಸಬೇಕು.
  • ಲಘು ಲಕ್ಷಣಗಳನ್ನು ಹೊಂದಿರುವ ಮಕ್ಕಳಿಗೆ ಜ್ವರವಿದ್ದರೆ ಅವರಿಗೆ, 4-6 ಗಂಟೆಗೊಮ್ಮೆ 10-15 ಎಂಜಿ/ಕೆಜಿ/ಡೋಸ್‌ ಪಾರಾಸಿಟ್‌ಮೊಲ್‌ ನೀಡಬೇಕು.
  • ಹಿರಿಯ ಮಕ್ಕಳಲ್ಲಿಗಂಟಲು ನೋವಿದ್ದರೆ ಅವರಿಗೆ ತುಸು ಬೆಚ್ಚಗಿನ ಉಪ್ಪು ನೀರಿನ ಗಾರ್ಗಲ್‌ ಮಾಡಲು ಹೇಳಬೇಕು. 13ರಿಂದ 17ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಬಂದರೆ ಇದೇ ಉಪಚಾರ ಮಾಡಬಹುದು.
  • ಒಂದೊಮ್ಮೆ ಲಕ್ಷಣಗಳು ತೀವ್ರವಾದರೆ ಕೂಡಲೇ ವೈದ್ಯರ ಸಲಹೆ ಪಡೆಯಬೇಕು.
    • ಈ ಪರಿಸ್ಥಿತಿಯಲ್ಲಿ ಕೂಡಲೇ ಆಕ್ಸಿಜನ್‌ ಥೆರಪಿ ಆರಂಭಿಸಬೇಕು.
    • ತೀವ್ರ ಉಸಿರಾಟ ತೊಂದರೆ(ಎಆರ್‌ಡಿಎಸ್‌) ಕಂಡುಬಂದರೆ ಕೂಡಲೇ ಅಗತ್ಯ ಚಿಕಿತ್ಸೆಯನ್ನು ಆರಂಭಿಸಬೇಕು.
    • ಬ್ಯಾಕ್ಟಿರಿಯಾ ಸೋಂಕಿನ ಪುರಾವೆಗಳು ಕಂಡ ಬಂದರೆ ಆಂಟಿಮೈಕ್ರೊಬ್ರಿಯಲ್‌ಗಳನ್ನು ನೀಡಬೇಕು. ಒಂದೊಮ್ಮೆ ಅಂಗಾಂಗ ವೈಫಲ್ಯವಾದರೆ, ಬದಲಿ ಅಂಗಾಂಗಗಳು ಬೇಕಾಗಬಹುದು, ಸಿದ್ಧವಾಗಿರಬೇಕು. ಉದಾಹರಣೆಗೆ ಮೂತ್ರಪಿಂಡ ಬದಲಾವಣೆ ಇತ್ಯಾದಿ.
    • 12 ವರ್ಷ ಮೇಲ್ಪಟ್ಟ ಮಕ್ಕಳಿಗೆ 6 ನಿಮಿಷಗಳ ‘ವಾಕ್‌ ಟೆಸ್ಟ್‌’ ಶಿಫಾರಸು ಮಾಡಲಾಗಿದೆ.
    • ಇದೊಂದು ಸರಳ ಪರೀಕ್ಷೆಯಾಗಿದ್ದು, ಹೃದಯರಕ್ತನಾಳ ಕ್ಷಮತೆಯನ್ನು ನಿರ್ಧರಿಸಲು ಮತ್ತು ಆಮ್ಲಜನಕ ಕೊರತೆಯನ್ನು ತಿಳಿಯಲು ಮಾಡಲಾಗುತ್ತದೆ.
    • ಈ ಪರೀಕ್ಷೆಯಲ್ಲಿಬೆರಳಿಗೆ ಆಕ್ಸಿಮೀಟರ್‌ ಸಿಕ್ಕಿಸಿ ಕೋಣೆಯೊಂದರಲ್ಲಿ 6 ನಿಮಿಷಗಳ ಕಾಲ ವಿರಾಮವಿಲ್ಲದೇ ನಡೆಯುವಂತೆ ಮಕ್ಕಳಿಗೆ ಸೂಚಿಸಲಾಗುತ್ತದೆ.

    – ಮಾಸ್ಕ್‌ ಧರಿಸುವುದ ಹೇಗೆ?

    • ಐದು ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮಾಸ್ಕ್‌ ಧರಿಸಬೇಕಿಲ್ಲ.
    • 6 ರಿಂದ 11 ವರ್ಷದೊಳಗಿನ ಮಕ್ಕಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾಸ್ಕ್‌ ಧರಿಸಬಹುದು.
    • 12 ವರ್ಷ ಮತ್ತು ಮೇಲ್ಪಟ್ಟ ಮಕ್ಕಳು, ಹಿರಿಯರು ಧರಿಸುವ ರೀತಿಯಲ್ಲಿ ಕಟ್ಟುನಿಟ್ಟಾಗಿ ಧರಿಸಬೇಕು.
    • ಸೋಪು ನೀರಿನಿಂದ ಕೈ ತೊಳೆಯುತ್ತಿರಬೇಕು. ಅಥವಾ ಸ್ಯಾನಿಟೈಸರ್‌ ಬಳಸಬಹುದು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *