ವಿಕಲಚೇತನರ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿ.ಸಿ

 

ಕಲಬುರಗಿ.ಜೂನ್.11(ಕ.ವಾ) ಕಲಬುರಗಿ ನಗರದಲ್ಲಿರುವ ವಿಕಲಚೇತನರಿಗೆ (ದಿವ್ಯಾಂಗರು) ವಿಶೇಷ ಅಭಿಯಾನದ ಮೂಲಕ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಶುಕ್ರವಾರ ಚಾಲನೆ ನೀಡಿದರು.

ನಗರದ ಮಹಾನಗರ ಪಾಲಿಕೆಯ ಟೌನ್ ಹಾಲ್ ಬಳಿಯ ಇಂದಿರಾ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಿಕಲಚೇತನರಿಗೆ ಕೋವಿಡ್-19 ಲಸಿಕಾಕರಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಲಸಿಕಾಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಕೋವಿಡ್-19ಗೆ ಲಸಿಕೆ ಪಡೆಯುವಲ್ಲಿ ಗ್ರಾಮೀಣ ಭಾಗದ ಜನರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ, ಆದರೆ ನಗರ ಪ್ರದೇಶದಲ್ಲಿ ಲಸಿಕೆ ಪಡೆಯುವುದಕ್ಕೆ ಜನರ ಸ್ಪಂದನೆ ಚೆನ್ನಾಗಿದೆ. ಇಂದಿನ ಅಭಿಯಾನದಲ್ಲಿ ಸಾಕಷ್ಟು ಜನ ವಿಕಲಚೇತನರು ಉತ್ಸಾಹದಿಂದ ಭಾಗವಹಿಸಿದ್ದು ಒಳ್ಳೆಯ ಬೆಳವಣಿಗೆ. ಇದು ಬೇರೆಯವರಿಗೂ ಸ್ಫೂರ್ತಿ ಆಗಲಿ ಎಂದರು.

ನಗರದಲ್ಲಿ 18 ವರ್ಷ ಮೇಲ್ಪಟ್ಟ ಸುಮಾರು 600 ವಿಕಲಚೇತನರಿಗೆ ಇಂದು ಮೊದಲ ಡೋಸ್ ಕೋವಿಶಿಲ್ಡ್ ಲಸಿಕೆ ನೀಡಲಾಗುತ್ತಿದ್ದು, ನಗರದ ವಿವಿದ ಸ್ಥಳದಿಂದ ಇಲ್ಲಿಗೆ ಕರೆತರಲು ವಿಕಲಚೇತನ (ದಿವ್ಯಾಂಗರು)ರಿಗೆ 2 ಬಸ್ ಹಾಗೂ 2 ಬುಲೆರೋ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ ದೈಹಿಕ ಹಾಗೂ ಮಾನಸಿಕ ದಿವ್ಯಾಂಗರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಇವರುಗಳ ಮೂಲಕ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಸ್ವಹಿತಾಸಕ್ತಿಯಿಂದ ವಿಕಲಚೇತನರು ಲಸಿಕೆ ಪಡೆಯುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ಸಾರ್ವಜನಿಕರು ಯಾವುದೇ ಆತಂಕ, ಭಯಕ್ಕೆ ಒಳಗಾಗದೆ ನಿರ್ಭೀತಿಯಿಂದ ಕೋವಿಡ್ ಲಸಿಕೆ ತೆಗೆದುಕೊಳ್ಳುವ ಮೂಲಕ ಕೋವಿಡ್ ಮುಕ್ತ ಕಲಬುರಗಿಯನ್ನಾಗಿಸಲು ಸಹಕರಿಸಬೇಕೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಸಂಗೀತ ವಾದ್ಯಗೋಷ್ಠಿ ಕಲಾವಿದರ ತಂಡದಿಂದ ಉಪಹಾರ ನೀಡಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಶಾಸಕ ಶಶೀಲ ಜಿ.‌ ನಮೋಶಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ, ಡಿಹೆಚ್ಓ ಶರಣಬಸಪ್ಪ ಗಣಜಲಖೇಡ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಪ್ರಭುಲಿಂಗ ಮಾನಕರ್, ಹಿರಿಯ ನಾಗರಿಕರ ಸಬಲೀಕರಣ‌ ಮತ್ತು ವಿಕಲಚೇತನರ ಕಲ್ಯಾಣ ಇಲಾಖೆಯ ಜಿಲ್ಲಾ ಕಲ್ಯಾಣಾಧಿಕಾರಿ ಸಾಧಿಕ್ ಹುಸೇನ್, ಟಿಹೆಚ್ಓ ಡಾ.ಶರಣಬಸಪ್ಪ ಕ್ಯಾತನಾಳ, ಮಹಾನಗರ ಪಾಲಿಕೆಯ ಅರೋಗ್ಯಾಧಿಕಾರಿ ಡಾ. ವಿನೋದಕುಮಾರ ಹಾಗೂ ವಿಕಲಚೇತನ ಲಸಿಕಾ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ಶರಣಮ್ಮ ಸೇರಿದಂತೆ ವಿಕಲಚೇತನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಎನ್.ಜಿ.ಓ.ಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *