Siddalingaiah: ಕೊರೋನಾದಿಂದ ಕವಿ ಸಿದ್ದಲಿಂಗಯ್ಯ ನಿಧನ; ಊರುಕೇರಿಯಲ್ಲಿ ಈಗ ಶೋಕ
ಕೋವಿಡ್ ಸೋಂಕಿನಿಂದಾಗಿ ಕವಿ, ಸಾಹಿತಿ ಡಾ ಸಿದ್ದಲಿಂಗಯ್ಯ ಅವರು ಸಾವನ್ನಪ್ಪಿದ್ದಾರೆ. ಸೋಂಕಿಗೆ ತುತ್ತಾಗಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನಲೆ ಅವರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ನಿಮೋನಿಯಾ ತೀವ್ರಾಗಿದ್ದ ಹಿನ್ನಲೆ ಅವರು ಆರೋಗ್ಯ ಸ್ಥಿತಿ ಬಿಗಾಡಾಯಿಸಿದ್ದು, ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅವರ ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್ದಾರೆ. ಕಳೆದ ಮಂಗಳವಾರ ಆಸ್ಪತ್ರೆಗೆ ದಾಖಲಾಗುವ ಮುನ್ನ ಬೆಡ್ ಸಿಗದೇ ಅವರು ಪರದಾಡಿದ್ದರು. ಈ ಘಟನೆ ಗಮನಕ್ಕೆ ಬರುತ್ತಿದ್ದಂತೆ ಡಿಸಿಎಂ ಅಶ್ವತ್ಥ್ ನಾರಾಯಣ್ ಅವರು ಅವರಿಗೆ ಬೆಡ್ ವ್ಯವಸ್ಥೆ ಮಾಡಿದ್ದರು.
‘ಹೊಲೆಮಾದಿಗರ ಹಾಡು’, ‘ಮೆರವಣಿಗೆ’, ‘ಸಾವಿರಾರು ನದಿಗಳು’, ‘ಕಪ್ಪು ಕಾಡಿನ ಹಾಡು’, ‘ನನ್ನ ಜನಗಳು’ ಸೇರಿದಂತೆ ಹಲವು ಕವನ ಸಂಕಲಗಳನ್ನು ಸಿದ್ದಲಿಂಗಯ್ಯ ಅವರು ಹೊರತಂದಿದ್ದಾರೆ. ‘ಊರು-ಕೇರಿ’ ಎಂಬ ಆತ್ಮಕಥನವನ್ನು ಅವರು ರಚಿಸಿದ್ದಾರೆ. ಪಂಪ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ, ನೃಪತುಂಗ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಗೌರವಗಳು ಅವರಿಗೆ ದೊರೆತಿವೆ.
‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿದ್ದರು.
1954ರಲ್ಲಿ ಮಾಗಡಿ’ ತಾಲ್ಲೂಕಿನ ‘ಮಂಚನಬೆಲೆ’ ಗ್ರಾಮದಲ್ಲಿ ಜನಿಸಿದ ಸಿದ್ದಲಿಂಗಯ್ಯ ಅವರು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು
ಪ್ರಾಧ್ಯಾಪಕ, ಕವಿ, ಹೋರಾಟಗಾರ, ಅಧ್ಯಕ್ಷರು(ಕನ್ನಡ ಪುಸ್ತಕ ಪ್ರಾಧಿಕಾರ) ಅಧ್ಯಕ್ಷರು (ಕನ್ನಡ ಅಭಿವೃದ್ಧಿ ಪ್ರಾಧಿಕಾರ) Executive Board Members-ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲೂ ಕೂಡ ಕಾರ್ಯನಿರ್ವಹಿಸಿದ್ದರು.