*”ನಾಲ್ಕು ವರ್ಷ ಕಳೆದರೂ ಉಪಯೋಗಕ್ಕೆ ಬಾರದ ಪಾಣೇಗಾಂವ್ ಆರೋಗ್ಯ ಉಪ ಕೇಂದ್ರ : ಕ್ರಮಕ್ಕೆ ಒತ್ತಾಯ”*
ಕಲಬುರಗಿ: ತಾಲೂಕಿನ ಪಾಣೇಗಾಂವ್ ಗ್ರಾಮದಲ್ಲಿ ಉದ್ಘಾಟನೆಗೊಂಡು ನಾಲ್ಕು ವರ್ಷ ಕಳೆದರೂ ಸಹ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವು ಬಳಕೆಯಾಗದೇ ಹಲವು ಸೌಲಭ್ಯಗಳಿಂದ ವಂಚಿತವಾಗಿದೆ, ಹೀಗಾಗಿ ಸೂಕ್ತ ವೈದ್ಯಕೀಯ ಸೌಲಭ್ಯ, ಪರಿಕರಗಳನ್ನು ನೀಡಿ ಅದರ ಪುನಶ್ಚೇತನಗೊಳಿಸಬೇಕೆಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಶನ್ (ಎ.ಐ.ಡಿ.ವೈ.ಓ) ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ ಪಾಣೇಗಾಂವ್ ಆಗ್ರಹಿಸಿದ್ದಾರೆ.
ಈ ಉಪಕೇಂದ್ರವೂ ಸಮೀಪದ ಹೊನ್ನ ಕಿರಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ (PHC) ವ್ಯಾಪ್ತಿಗೆ ಬರುತ್ತಿದ್ದು, ಇಲ್ಲಿ ಹೊಸ ಕಟ್ಟಡ ಉದ್ಘಾಟನೆಗೊಂಡು 4 ವರ್ಷ ಕಳೆದರೂ ಯಾವುದೇ ರೀತಿಯ ಮೂಲ ಸೌಕರ್ಯ ಇಲ್ಲದೆ ವಂಚಿತವಾಗಿದೆ. ಅಲ್ಲದೇ ಈ ಉಪಕೇಂದ್ರದಲ್ಲಿ ವೈದ್ಯ, ನರ್ಸ್, ಕಂಪೌಂಡರ್, ಸಿಬ್ಬಂದಿ ಕೊರತೆ, ಮೆಡಿಸಿನ್ ಜೊತೆಗೆ ಸ್ವಚ್ಛತೆಯೂ ಇಲ್ಲ. ಹೀಗೆ ಹಲವು ಮೂಲ ಸಮಸ್ಯೆಗಳಿಂದ ಕೂಡಿದ್ದು, ಇದ್ದು ಎಲ್ಲವೂ ಇಲ್ಲದಂತಾಗಿದೆ. ಕೂಡಲೇ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಹೆಸರಿಗೆ ಮಾತ್ರ ಹೊಸ ಕಟ್ಟಡವಾಗಿದೆ, ಇಂತಹ ಮಹಾಮಾರಿ ಕೋವಿಡ್ ಸಂದರ್ಭದಲ್ಲೂ ಸಣ್ಣ -ಪುಟ್ಟ ಚಿಕಿತ್ಸೆಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಗ್ರಾಮದ ಜನರು ಖಾಸಗಿ ಆಸ್ಪತ್ರೆಗಳಿಗೆ, ನಗರಕ್ಕೆ ಬರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಉಪ ಕೇಂದ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂದಾಗಿದೆ. ಶೀಘ್ರ ಇತ್ತ ಸರ್ಕಾರದ ಮೇಲಾಧಿಕಾರಿಗಳ ಸಂಪರ್ಕಿಸಿ ಕೇಂದ್ರದಲ್ಲಿ ಜನರಿಗೆ ಆರೈಕೆ ಮಾಡುವಂತೆ ಸ್ಥಿತಿ ನಿರ್ಮಿಸಬೇಕೆಂದು ಗ್ರಾಮಸ್ಥರ ಆಕ್ರೋಶವಾಗಿದೆ.
ಈ ಉಪಕೇಂದ್ರದಿಂದ ಲಸಿಕೆ ವಿತರಣೆ,ಕೋವಿಡ್ ಜಾಗೃತಿ ಕಾರ್ಯಕ್ರಮಗಳು ಯಾವುದೂ ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ಇಲ್ಲಿನ ಜನರಿಗೆ ಕೋವಿಡ್ ಲಸಿಕೆ ಸಂಬಂಧಿಸಿದಂತೆ ಇನ್ನಿತರ ವಿಷಯಗಳು ಕುರಿತಾಗಿ ಅರಿವಿಲ್ಲ, ಕೂಡಲೇ ಈ ಆರೋಗ್ಯ ಕೇಂದ್ರದ ಪರಿಸ್ಥಿತಿಯನ್ನು ಎಚ್ಚೆತ್ತು ಸದ್ಬಳಕೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಜನರ ಒಕ್ಕೂರಲಿನ ಆಗ್ರಹವಾಗಿದೆ.