ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ.ಸಿ.ಎನ್ ಚಂದ್ರಶೇಖರ್ ಇನ್ನಿಲ್ಲ

ಹೈಲೈಟ್ಸ್‌:

  • ಕನ್ನಡದ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ.ಸಿ.ಎನ್ ಚಂದ್ರಶೇಖರ್ ನಿಧನ
  • ಬಹು ಅಂಗಾಂಗ ವೈಫಲ್ಯದಿಂದ ಕೆ.ಸಿ.ಎನ್ ಚಂದ್ರಶೇಖರ್ ವಿಧಿವಶ
  • ಕೆಎಫ್‌ಸಿಸಿ ಮತ್ತು ಎಸ್‌ಐಎಫ್‌ಸಿಸಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಕೆ.ಸಿ.ಎನ್ ಚಂದ್ರಶೇಖರ್

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ವಿತರಕ ಕೆ.ಸಿ.ಎನ್ ಚಂದ್ರಶೇಖರ್ ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ಕೆ.ಸಿ.ಎನ್ ಚಂದ್ರಶೇಖರ್ ವಿಧಿವಶರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದ ಬಳಲುತ್ತಿದ್ದ ಕೆ.ಸಿ.ಎನ್ ಚಂದ್ರಶೇಖರ್ ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಗ್ಗೆ 9 ಗಂಟೆಯಿಂದ ಶಿವಾನಂದ ಸರ್ಕಲ್ ಬಳಿ ಇರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕೆ.ಸಿ.ಎನ್ ಚಂದ್ರಶೇಖರ್ ಕುರಿತು
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ಪ್ರದರ್ಶಕ, ವಿತರಕ ಕೆ.ಸಿ.ಎನ್ ಗೌಡ (ಕೆ.ಸಿ ನಂಜುಂಡೇ ಗೌಡ) ಅವರ ಇಬ್ಬರು ಪುತ್ರರಲ್ಲಿ ಕೆ.ಸಿ.ಎನ್ ಚಂದ್ರಶೇಖರ್ ಒಬ್ಬರು. ತಂದೆಯ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದ ಕೆ.ಸಿ.ಎನ್ ಚಂದ್ರಶೇಖರ್ 1978ರಲ್ಲಿ ಡಾ.ರಾಜ್‌ಕುಮಾರ್ ತ್ರಿ ಪಾತ್ರದಲ್ಲಿ ಅಭಿನಯಿಸಿದ್ದ ‘ಶಂಕರ್ ಗುರು’ ಚಿತ್ರಕ್ಕೆ ಸಹ ನಿರ್ಮಾಪಕರಾದರು.

‘ಶಂಕರ್ ಗುರು’ ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗುತ್ತಿದ್ದಂತೆಯೇ ಡಾ.ರಾಜ್‌ಕುಮಾರ್ ನಟನೆಯ ‘ಹುಲಿ ಹಾಲಿನ ಮೇವು’ ಚಿತ್ರವನ್ನು ಕೆ.ಸಿ.ಎನ್ ಚಂದ್ರಶೇಖರ್ ನಿರ್ಮಾಣ ಮಾಡಿದರು. ಬಳಿಕ ‘ಭಕ್ತ ಜ್ಞಾನದೇವ’, ‘ಧರ್ಮ ಯುದ್ಧ’, ‘ತಾಯಿ’ ಮುಂತಾದ ಚಿತ್ರಗಳಿಗೆ ಕೆ.ಸಿ.ಎನ್ ಚಂದ್ರಶೇಖರ್ ಬಂಡವಾಳ ಹಾಕಿದರು.

ಎರಡು ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ (ಕೆಎಫ್‌ಸಿಸಿ) ಹಾಗೂ ಒಂದು ಬಾರಿ ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ (ಎಸ್‌ಐಎಫ್‌ಸಿಸಿ) ಅಧ್ಯಕ್ಷರಾಗಿ ಕೆ.ಸಿ.ಎನ್ ಚಂದ್ರಶೇಖರ್ ಕಾರ್ಯ ನಿರ್ವಹಿಸಿದ್ದರು.

‘ನಾನೊಬ್ಬ ಕಳ್ಳ’ ಚಿತ್ರದಲ್ಲಿ ಅಭಿನಯಿಸಿದ್ದ ಕೆ.ಸಿ.ಎನ್ ಚಂದ್ರಶೇಖರ್ ಪ್ರೊಡ್ಯೂಸರ್ ಆಗಿ, ಡಿಸ್ಟ್ರಿಬ್ಯೂಟರ್ ಆಗಿ, ಪ್ರೆಸೆಂಟರ್ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಕೆ.ಸಿ.ಎನ್ ಚಂದ್ರಶೇಖರ್ ನಿಧನದಿಂದ ಕನ್ನಡ ಚಿತ್ರರಂಗದ ಹಿರಿಯ ಕೊಂಡಿ ಕಳಚಿದಂತಾಗಿದೆ. ಕೆ.ಸಿ.ಎನ್ ಚಂದ್ರಶೇಖರ್ ನಿಧನಕ್ಕೆ ಸ್ಯಾಂಡಲ್‌ವುಡ್ ಕಂಬನಿ ಮಿಡಿದಿದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *